ಹಾಸನ : ಜಾತ್ರೆಗೆ ಕರೆದುಕೊಂಡು ಹೋಗಲಿಲ್ಲ ಎಂಬ ಕಾರಣಕ್ಕೆ ಮಾನಸಿಕ ಅಸ್ವಸ್ಥ ಮಗ ತಂದೆಯ ತಲೆಯ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿರುವ ಘಟನೆ ಬೇಲೂರು ತಾಲ್ಲೂಕಿನ ಬೂದಿಗುಂಡಿಯಲ್ಲಿ ಶುಕ್ರವಾರ ನಡೆದಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ಅವರು ತಿಳಿಸಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಳಪ್ಪ(68) ಮೃತರಾಗಿದ್ದು, ಅವರ ಮನನಾದ ಹೆಚ್.ಕೆ.ಪಾಂಡು (35) ಕೊಲೆ ಆರೋಪಿ ಬಂಧಿಸಲಾಗಿದೆ ಎಂದರು.
ಘಟನೆ ಹಿನ್ನಲೆ: ಕಾಳಪ್ಪ-ಶಾರದಮ್ಮ ದಂಪತಿಯ ಮೂವರು ಮಕ್ಕಳ ಪೈಕಿ 3ನೇ ಮಗನಾದ ಪಾಂಡು ಅವಿವಾಹಿತನಾಗಿದ್ದು, ಕಳೆದ 14 ವರ್ಷಗಳಿಂದ ಮಾನಸಿಕ ಅಸ್ವಸ್ಥನಾಗಿದ್ದ. ಸಣ್ಣ ಪುಟ್ಟ ಕಾರಣಕ್ಕೂ ನಿಮ್ಮನ್ನು ಸಾಯಿಸುತ್ತೇನೆಂದು ತಾಯಿ ಶಾರದಮ್ಮ, ತಂದೆ ಕಾಳಪ್ಪ ಅವರನ್ನು ಹೆದರಿಸುತ್ತಿದ್ದ.
ಶುಕ್ರವಾರ ಬೆಳಿಗ್ಗೆ ಶಾರದಮ್ಮ ಅವರು ಯಳವಾರೆಗೆ ಜಾತ್ರೆಗೆ ಹೋಗಿ ಸಂಜೆ ಮನೆಗೆ ಬಂದರು. ಇದನ್ನು ತಿಳಿದ ಪಾಂಡು, ನನ್ನನ್ನು ಏಕೆ ಜಾತ್ರೆಗೆ ಕರೆದುಕೊಂಡು ಹೋಗಿಲ್ಲ, ನಿಮ್ಮನ್ನು ಸಾಯಿಸುತ್ತೇನೆಂದು ಕೂಗಾಡಲು ಆರಂಭಿಸಿ ಬೆದರಿಕೆ ಹಾಕಿದ್ದಾನೆ.
ಆಗ ಶಾರದಮ್ಮ ಪಾಂಡುನನ್ನು ಸಮಾಧಾನ ಮಾಡಿ, ಅಂಗಡಿಗೆ ಸಾಮಾನು ತರಲು ಹೋಗಿ ರಾತ್ರಿ 8 ಗಂಟೆಗೆ ವಾಪಸ್ ಬಂದರು. ಮನೆಯ ಬಾಗಿಲಿಗೆ ಬರುತ್ತಿದ್ದಂತೆಯೇ ಮನೆಯೊಳಗೆ ಶಬ್ದ ಬಂದಿದೆ. ಕೂಡಲೇ ಒಳ ಹೋಗಿ ನೋಡಿದಾಗ ನೆಲದ ಮೇಲೆ ಮಲಗಿದ್ದ ಕಾಳಪ್ಪ ಅವರ ತಲೆಯ ಮೇಲೆ ಪಾಂಡು ಕಲ್ಲು ಎತ್ತಿಹಾಕಿದ್ದ. ತಲೆ ಭಾಗ ಜಜ್ಜಿ ತೀವ್ರ ರಕ್ತಸ್ರಾವ ಆಗಿ ಕಾಳಪ್ಪ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಈ ಸಂಬಂಧ ಹಳೇಬೀಡು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.