ಜಿಲ್ಲೆ

'ಮಾನಸ' ಎಫ್ ಎಂ ರೇಡಿಯೋಗಾಗಿ ಮೈಸೂರು ವಿವಿ ಪತ್ರಿಕೋದ್ಯಮ ವಿದ್ಯಾರ್ಥಿಗಳ ಆಗ್ರಹ

ಮೈಸೂರು: ಮೈಸೂರು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಹಾಗೂ ಸಂವಹನ ಅಧ್ಯಯನ ವಿಭಾಗದ ಉಸ್ತುವಾರಿಯಲ್ಲಿ ಇದ್ದ ಎಫ್ ಎಂ 89.6 ರೇಡಿಯೋ ‘ಮಾನಸ’ ನಿರ್ವಹಣೆಯನ್ನು ನಿಯಮ ಬಾಹಿರವಾಗಿ ವಾಸ್ತುಶಿಲ್ಪ ವಿನ್ಯಾಸ ವಿಭಾಗಕ್ಕೆ ವಹಿಸಲಾಗಿದೆ ಎಂದು ವಿವಿಯ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳು ಬೇಸರ ವ್ಯಕ್ತಪಡಿಸಿದರು.
ಪತ್ರಿಕೋದ್ಯಮ ಮತ್ತು ಸಂವಹನ ವಿಭಾಗ ಎಫ್‌ಎಂ ಅನ್ನು ಪತ್ರಿಕೋದ್ಯಮ ಮತ್ತು ಸಂವಹನ ಅಧ್ಯಯನ ವಿಭಾಗ ನಿರ್ವಹಿಸಲಿದೆ ಎಂದು ಪರವಾನಗಿ ಪಡೆಯುವಾಗ ಮೈಸೂರು ವಿಶ್ವವಿದ್ಯಾಲಯ ಸರ್ಕಾರಕ್ಕೆ ಅಫಿಡವಿಟ್ ಸಲ್ಲಿಸಿದೆ. ಆದರೆ ಈಗ ಈ ನಿಯಮ ಉಲ್ಲಂಘಿಸಲಾಗಿದೆ ಎಂದು ವಿದ್ಯಾರ್ಥಿ ಚಿನ್ಮಯ್ ವಿಶ್ವಸೇನ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ಎಫ್‌ಎಂ ಕೇಂದ್ರ, ಪತ್ರಿಕೋದ್ಯಮ ವಿಭಾಗದ ಪ್ರಯೋಗಶಾಲೆಯಾಗಿದೆ, ಎರಡು ವರ್ಷ ಪೂರ್ಣಗೊಂಡಿರುವುದರಿಂದ ನಿರ್ವಹಣೆ ಬದಲಿಸಲಾಗುವುದು ಎನ್ನುವ ಕಾರಣವನ್ನು ಕುಲಪತಿ, ಕುಲಸಚಿವರು ಹೇಳುತ್ತಾರೆ. ಆದರೆ ಪತ್ರಿಕೋದ್ಯಮ ವಿಭಾಗದಿಂದ ಎಫ್‌ಎಂ ಕೇಂದ್ರವನ್ನು ಸಮರ್ಥವಾಗಿ ನಿರ್ವಹಿಸುವ ಜತೆಗೆ ಎಲ್ಲ ವರ್ಗದ ಗಣ್ಯರು ಹಾಗೂ ಜನರ ಸಂದರ್ಶನಗಳನ್ನೂ ನಡೆಸಲಾಗುತ್ತಿತ್ತು. ಒಂದು ವೇಳೆ ಮೇಲ್ವಿಚಾರಕರನ್ನು ಬದಲಿಸಬೇಕಿದ್ದರೆ, ಪತ್ರಿಕೋದ್ಯಮ, ಸಂವಹನ ವಿಭಾಗದಲ್ಲಿರುವ ಇತರೆ ಪ್ರಾಧ್ಯಾಪಕರಿಗೆ ನೀಡಬೇಕಿತ್ತು. ಬೇರೆ ವಿಭಾಗದ ಕಿರಿಯ ಪ್ರಾಧ್ಯಾಪಕರಿಗೆ ಹೊಣೆ ವಹಿಸಿರುವುದು ಸರಿಯಲ್ಲ ಎಂದರು.
ಈ ಕುರಿತು ಸಂಬಂಧಪಟ್ಟ ಎಲ್ಲರಿಗೂ ಮನವಿ ಸಲ್ಲಿಸಿದ್ದು, ನಿರ್ಲಕ್ಷಿಸುತ್ತಿದ್ದಾರೆ. ಹೀಗಾಗಿ ಈಗಲಾದರೂ ಮತ್ತೆ ಸಂವಹನ ವಿಭಾಗಕ್ಕೆ ಹಸ್ತಾಂತರಿಸದಿದ್ದಲ್ಲಿ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.
ವಿದ್ಯಾರ್ಥಿಗಳಾದ ಬಿ.ಎಸ್.ಭೂಮಿಕಾ, ರಾಕೇಶ್, ರಂಜಿತಾ ಇದ್ದರು.