ಔರಾದ್: ಕುವೆಂಪು ಕನ್ನಡ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿ ಕೃತಿ ರಚಿಸಿ ಸಾಹಿತ್ಯ ಸಂಪತ್ತನ್ನು ಸಮೃದ್ಧಗೊಳಿಸಿದ್ದಾರೆ ಎಂದು ಇಳಕಲ್‌ನ ಉದ್ಯಮಿ, ಹಾಸ್ಯ ಕಲಾವಿದ ಪ್ರಕಾಶ ದೇವಗಿರಿಕರ್ ಹೇಳಿದರು.
ಸಂಭ್ರಮ ಸಾಮಾಜಿಕ ಹಾಗೂ ಸಾಂಸ್ಕೃತಿಕ ಸಂಸ್ಥೆಯಿಂದ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ ವಿಶ್ವ ಮಾನವ ಸಂಕಲ್ಪ ಅಭಿಯಾನದಲ್ಲಿ ಮಾತನಾಡಿ, ಕುವೆಂಪು ಅವರು ರಾಮಾಯಣ ದರ್ಶನಂ ಸೇರಿ ಮೇರು ಸದೃಶ್ಯ ಮಹಾನ್ ಕೃತಿಗಳನ್ನು, ಮೌಲ್ಯಯುತವಾದ ವಿಶ್ವ ಮಾನವ ತತ್ವ, ಸಂದೇಶ ನೀಡಿದ್ದಾರೆ ಎಂದರು.
ಸಾಹಿತ್ಯ ಚಿಂತಕ ಜಗನ್ನಾಥ ಮೂಲಗೆ ಮಾತನಾಡಿ, ಕುವೆಂಪು ಅವರ ವಿಶ್ವಮಾನವ ಸಂದೇಶ, ಸಪ್ತ ಸೂತ್ರಗಳು, ಸರ್ವೋದಯ ಸಮನ್ವಯತೆ, ಪೂರ್ಣದೃಷ್ಟಿ, ಮನುಜಮತ, ವಿಶ್ವಪಥದ ಪಂಚಮಂತ್ರಗಳು ವಿಶ್ವ ಸಾಹಿತ್ಯಕ್ಕೆ ನೀಡಿದ ಅನರ್ಘ್ಯ ಕಾಣಿಕೆ ಎಂದರು.
ಹೋರಾಟಗಾರ ಬಸವರಾಜ ಶೆಟಕಾರ ಮಾತನಾಡಿ, ವಿಶ್ವ ಮಾನವ ಸಂಕಲ್ಪ ಅಭಿಯಾನದ ಪರಿಕಲ್ಪನೆ ಅದ್ಭುತವಾಗಿದೆ. ಮಕ್ಕಳಲ್ಲಿ ಮನುಷ್ಯರಲ್ಲಿ ವಿಶಾಲತೆ ಬಿತ್ತುವ ಪ್ರಯತ್ನ ಇದು ಎಂದರು.
ವಿಜಯಲಕ್ಷ್ಮೀ ಮೂಲಗೆ, ಪ್ರಾಚಾರ್ಯ ಪ್ರಕಾಶ ಧೂಳಮಾಂಡೆ, ಲಕ್ಷ್ಮೀ ದೇವಗಿರಿಕರ್, ಬಾಲಾಜಿ ಅಮರವಾಡಿ, ಗುರುನಾಥ ಕೋಟೆ, ಲಲಿತಾ ಮೂಲಗೆ, ಶಿಲ್ಪಾ ಶೆಟಕಾರ, ಸ್ವಪ್ನಾ ಇತರರಿದ್ದರು.