ಜಿಲ್ಲೆ

ಮಾನವೀಯತೆ ಮೆರೆದ ನಿರ್ವಾಹಕಿಗೆ ಸನ್ಮಾನ:

ಬೇಲೂರು : ಬಸ್‌ನಲ್ಲಿ ಸಂಚರಿಸುತ್ತಿದ್ದ ಸಂದರ್ಭ ಪ್ರಸವ ವೇದನೆಯಿಂದ ಬಳಲುತ್ತಿದ್ದ ಗರ್ಭಿಣಿಗೆ ಹೆರಿಗೆ ಮಾಡಿಸಿ ಸಮಯ ಪ್ರಜ್ಞೆ ಮೆರೆದ ಕೆಎಸ್‌ಆರ್‌ಟಿಸಿ ಬಸ್ ನಿರ್ವಾಹಕಿ ಎಸ್.ವಸಂತಮ್ಮ ಅವರಿಗೆ ಬೇಲೂರಿನ ನಿಸ್ವಾರ್ಥ ಗೆಳೆಯರ ಬಳಗದಿಂದ ಬಸ್ ನಿಲ್ದಾಣದ ಆವರಣದಲ್ಲಿ ಗೌರವಿಸಲಾಯಿತು.
ನಿಸ್ವಾರ್ಥ ಗೆಳೆಯರ ಬಳಗದ ಮುಖಂಡ ಹೇಮಂತ್ ಮಾತನಾಡಿ, ಮೇ 15 ರಂದು ಬೆಂಗಳೂರು-ಚಿಕ್ಕಮಗಳೂರು ಬಸ್ ಮಾರ್ಗದಲ್ಲಿ ಕರ್ತವ್ಯ ನಿರ್ವಹಿಸುತಿದ್ದ ನಿರ್ವಾಹಕಿ ಎಸ್.ವಸಂತಮ್ಮ ಚನ್ನರಾಯ ಪಟ್ಟಣ ಸಮೀಪ ಗರ್ಭಿಣಿಯೊಬ್ಬರಿಗೆ ಪ್ರಸವ ವೇದನೆ ಕಂಡು ಸಹಾಯಕ್ಕೆ ಧಾವಿಸಿದರು. ಬಸ್ ನಿಲ್ಲಿಸಿ ಅಲ್ಲೇ ಹೆರಿಗೆ ಮಾಡಿಸಿದರು. ಆಂಬುಲೆನ್ಸ್‌ಗೆ ಕರೆಮಾಡಿ ಸಮೀಪದ ಆಸ್ಪತ್ರೆಗೆ ತಾಯಿ-ಮಗುವನ್ನು ದಾಖಲಿಸಿ, ಸಂಬಂಧಿಕರಿಗೆ ಕರೆ ಮಾಡಿ ವಿಷಯ ತಿಳಿಸಿದರು. ಇವರ ಸೇವೆ ಇತರರಿಗೂ ಮಾದರಿ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಕೆಎಸ್‌ಆರ್‌ಟಿಸಿ ಬಸ್ ನಿರ್ವಾಹಕಿ ಎಸ್.ವಸಂತಮ್ಮ, ನಾನೊಬ್ಬ ಹೆಣ್ಣಾಗಿ ಮತ್ತೊಂದು ಹೆಣ್ಣಿಗೆ ಸಹಾಯ ನೀಡಿದ್ದೇನೆ. ಪ್ರಯಾಣಿಕರು ಸಹ ಸಹಕಾರ ನೀಡಿದ್ದರಿಂದ ತಾಯಿ-ಮಗು ಕ್ಷೇಮವಾಗಿದ್ದಾರೆ. ಮಾನವೀಯ ಸಹಕಾರ ನಮ್ಮ ಕರ್ತವ್ಯ ಎಂದರು.
ನಿಸ್ವಾರ್ಥ ಗೆಳೆಯರ ಬಳಗದ ಮುಖಂಡರಾದ ಇಂದ್ರೇಶ್, ಸುದರ್ಶನ, ವಿನಯ್, ರಾಜೇಶ್, ಕೌಶಿಕ್, ಪುರುಷೋತ್ತಮ ಇತರರು ಇದ್ದರು.