ಗುಳಬಾಳ ಬಳಿ ಅಪಘಾತದಲ್ಲಿ ಕಾಲು ಮುರಿದುಕೊಂಡು ನರಳುತ್ತಿದ್ದ ಹಸುವಿನ ಆರೈಕೆ ಮಾಡುತ್ತಿರುವ ಉದ್ಯಮಿ ಸಂಗನಗೌಡ ಚಿಮ್ಮಲಗಿ. 
ಜಿಲ್ಲೆ

ಮಾನವೀಯತೆ ಮೆರೆದ ಚಿಮ್ಮಲಗಿ

ರಾಜು ಯಮಕನಮರಡಿ

ಕೊಡೇಕಲ್: ಅಪಘಾತದಲ್ಲಿ ಕಾಲು ಮುರಿದುಕೊಂಡು ನರಳುತ್ತಿದ್ದ ಹಸುವಿಗೆ ಮರುಜನ್ಮ ನೀಡಿದ ಪ್ರಸಂಗ ಇತ್ತೀಚೆಗೆ ನಡೆದಿದೆ.
ಗುಳಬಾಳ ಗ್ರಾಮದ ಮಾರ್ಗದಲ್ಲಿ ಹಸುವೊಂದಕ್ಕೆ ಯಾರೋ ಡಿಕ್ಕಿ ಹೊಡೆದಿದ್ದರು. ಅದೇ ಮಾರ್ಗವಾಗಿ ತಾಳಿಕೋಟೆಗೆ ತೆರಳುತ್ತಿದ್ದ ಉದ್ಯಮಿ ಸಂಗನಗೌಡ ಚಿಮ್ಮಲಗಿ ತೆಗ್ಗಿನಲ್ಲಿ ಬಿದ್ದು ನರಳುತ್ತಿದ್ದ ಹಸುವಿಗೆ ನೀರು ಕುಡಿಸಿ ಪ್ರಥಮ ಉಪಚಾರ ನೀಡಿದ್ದಾರೆ.

ಸ್ಥಳಕ್ಕೆ ಆಗಮಿಸಿದ ಹಸುವಿನ ಮಾಲೀಕ ಕಟುಕರಿಗೆ ಮಾರಲು ಮುಂದಾಗಿದ್ದ. ಮನವೊಲಿಸಿದರೂ ಒಪ್ಪದಿದ್ದಾಗ ನಿಮಗೆ ಬೇರೆ ಹಸು ಖರೀದಿಸಿಕೊಡುತ್ತೇನೆ ಎಂದು ಹೇಳಿ ಗಾಯಗೊಂಡ ಆಕಳನ್ನು ವಿಜಯಪುರ ಜಿಲ್ಲೆಯ ಕಗ್ಗೋಡದ ರಾಮನಗೌಡ ಪಾಟೀಲ್ ಗೋರಕ್ಷಾ ಕೇಂದ್ರಕ್ಕೆ ಕೊಂಡೊಯ್ದು ಚಿಕಿತ್ಸೆ ಕೊಡಿಸಿ ಸಂಗನಗೌಡ ಮಾನವೀಯತೆ ಮೆರೆದಿದ್ದಾರೆ.

ಕೊಟ್ಟ ಮಾತಿನಂತೆ ಮಂಗಳವಾರ ಕೊಡೇಕಲ್‌ನ ಜಾನುವಾರು ಸಂತೆಯಲ್ಲಿ ೧೧ ಸಾವಿರ ರೂ. ಬೆಲೆ ಬಾಳುವ ಉತ್ತಮ ಹಸು ಖರೀದಿಸಿ ಮಾಲೀಕರಿಗೆ ನೀಡಿದ್ದಾರೆ.

ದೈವತ್ವದ ಪ್ರತಿರೂಪವಾಗಿರುವ ಗೋಮಾತೆಯನ್ನು ದೇವರೆಂದು ಪೂಜಿಸುತ್ತ ಬಂದಿದ್ದೇವೆ. ಚಿಕ್ಕವನಾಗಿದ್ದಾಗ ರಾಷ್ಟ್ರೀಯ ಸ್ವಯಂ ಸೇವಕನಾಗಿದ್ದ ವೇಳೆ ಹೇಳಿಕೊಡುತ್ತಿದ್ದ ಮಾತು ನೆನಪಿಗೆ ಬಂದು ಗಾಯಗೊಂಡ ಹಸುವಿಗೆ ಚಿಕಿತ್ಸೆ ನೀಡಿ ಗೋರಕ್ಷಾ ಕೇಂದ್ರಕ್ಕೆ ತಲುಪಿಸಿದ್ದೇನೆ.
| ಸಂಗನಗೌಡ ಚಿಮ್ಮಲಗಿ
ಉದ್ಯಮಿ ಕೊಡೇಕಲ್