ಬಸವಕಲ್ಯಾಣ ತಾಲೂಕಿನ ಗುಣತೀರ್ಥವಾಡಿ ಕಲ್ಯಾಣ ಮಹಾಮನೆಯಲ್ಲಿ ಆಯೋಜಿಸಿದ್ದ ೮೯೨ನೇ ಬಸವ ಜಯಂತ್ಯುತ್ಸವವನ್ನು ಎಸ್.ದಿವಾಕರ್ ಉದ್ಘಾಟಿಸಿದರು. ಶ್ರೀ ಸದ್ಗುರು ಬಸವಪ್ರಭು ಸ್ವಾಮೀಜಿ, ಶರಣೆ ದಾನಮ್ಮ ಬಳಗ ಪದಾಧಿಕಾರಿಗಳು ಇದ್ದರು. 
ಜಿಲ್ಲೆ

ಮಾನವೀಯ ಸಂದೇಶ ನೀಡಿದ ಬಸವಣ್ಣ

ಬಸವಕಲ್ಯಾಣ: ಬಸವಣ್ಣನವರು ಮಾನವೀಯತೆಯ ಸೂತ್ರ ಹಿಡಿದು ಸಾಮಾಜಿಕ, ಧಾರ್ಮಿಕ ಸೇರಿ ಎಲ್ಲ ಕ್ಷೇತ್ರದಲ್ಲಿಯೂ ಪ್ರಾಯೋಗಿಕವಾಗಿ ಸಮಾನತೆಯನ್ನು ತಂದರು. ಅವರ ಈ ಕಾರ್ಯಕ್ಕೆ ಸರ್ವ ಜಾತಿಯ ಜನರು ಕಲ್ಯಾಣದಲ್ಲಿ ಬಂದು ನೆಲೆ ನಿಂತು ಕಾಯಕ-ದಾಸೋಹ ಮಾಡುತ್ತ ಶರಣರಾದರು. ಕೇವಲ ಶರಣರಾಗಿ ಉಳಿಯದೆ, ವಚನಗಳ ಮೂಲಕ ಮಾನವೀಯ ಸಂದೇಶಗಳನ್ನು ಕೊಟ್ಟರು ಎಂದು ನಿವೃತ್ತ ಕೆಎಎಸ್ ಅಧಿಕಾರಿ ಎಸ್.ದಿವಾಕರ್ ಹೇಳಿದರು.

ಗುಣತೀರ್ಥವಾಡಿ ಕಲ್ಯಾಣ ಮಹಾಮನೆಯಲ್ಲಿ ಆಯೋಜಿಸಿದ್ದ ೮೯೨ನೇ ಬಸವ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ದೀನರ, ದುಃಖಿತರ, ನೋಂದವರ ಸೇವೆಯನ್ನು ಮಾಡಿದ ಬಸವಣ್ಣನವರು ಮಾನವೀಯತೆಯೇ ಧರ್ಮದ ಜೀವಾಳ ಎಂದು ಭಾವಿಸಿದ್ದರು ಎಂದರು.

ಸಾನ್ನಿಧ್ಯ ವಹಿಸಿದ್ದ ಶ್ರೀ ಸದ್ಗುರು ಬಸವಪ್ರಭು ಸ್ವಾಮೀಜಿ ಮಾತನಾಡಿ, ಗುರು ಬಸವಣ್ಣನವರ ತತ್ವವನ್ನು ಎತ್ತಿ ಹಿಡಿದ ಕೇಂದ್ರ ಸರ್ಕಾರ ಪ್ರಪ್ರಥಮ ಬಾರಿಗೆ ಸಂಸತ್ ಭವನದಲ್ಲಿ ಬಸವ ಜಯಂತಿ ಆಚರಿಸಿರುವುದು ಹೆಮ್ಮೆಯ ಸಂಗತಿ. ಇಂದು ಇಡೀ ವಿಶ್ವವೇ ಬಸವತತ್ವದ ಕಡೆ ಮುಖ ಮಾಡುವ ಕಾಲ ಕೂಡಿ ಬಂದಿದೆ ಎಂದರು.

ಪ್ರಿಯಾಂಕಾ ಎಂ. ಪರಸಂಗ, ಸಂಗಮೇಶ ತೊಗರಖೇಡ, ಸಿದ್ದಪ್ಪ ಮುಗನೂರು, ಶಶಿಕಾಂತ ಮಾಳಿ ಮಾತನಾಡಿದರು. ಪಂಚಾಯತ್ ರಾಜ್ ಕಾಲೇಜಿನ ಪ್ರಾಚಾರ್ಯ ಸಿದ್ಧಾರ್ಥ ಬಾವಿದೊಡ್ಡಿ ಷಟಸ್ಥಲ ಧ್ವಜಾರೋಹಣ ನೆರವೇರಿಸಿದರು.

ಶರಣೆ ದಾನಮ್ಮ ಬಳಗ ಉದ್ಘಾಟಿಸಲಾಯಿತು. ಸಂಘಟನೆಯ ನೂತನ ಅಧ್ಯಕ್ಷೆ ಸುಮಿತ್ರಾದೇವಿ ದಾವಣಗಾವೆ ಮತ್ತು ಪ್ರಧಾನ ಕಾರ್ಯದರ್ಶಿ ರಾಣಿ ವಡ್ಡೆ ಹಾಗೂ ಪದಾಧಿಕಾರಿಗಳನ್ನು ಮತ್ತು ಸಾಮಾಜಿಕ ಮತ್ತು ಧಾರ್ಮಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಪ್ರಭು ಶೆಟ್ಟಿ, ತೀರ್ಥಪ್ಪ, ಅಡಿವೆಪ್ಪ ಪಟ್ನೆ, ಶಶಿಕಾಂತ ಕೋಡ್ಲಿ ಅವರನ್ನು ಸತ್ಕರಿಸಲಾಯಿತು.

ಪ್ರಮುಖರಾದ ದಿಲೀಪ ಶಿಂಧೆ, ಮಲ್ಲಿಕಾರ್ಜುನ ಸಂಗಮದ, ಗಿರಿಜಾ ಸಿದ್ದಣ್ಣ, ಶ್ರೀದೇವಿ ಉಜಳಂಬೆ, ರಾಮ ಮಜಿಗೆ, ಜಯಪ್ರಕಾಶ ಸದಾನಂದೆ, ನೀಲಕಂಠ ಸ್ವಾಮಿ ಇದ್ದರು. ಕೀರ್ತಿ ಓಂಕಾರ ಪ್ರಾಸ್ತಾವಿಕ ಮಾತನಾಡಿದರು. ಸಂಗಮೇಶ ಮಾಲಿ ಪಾಟೀಲ ಸ್ವಾಗತಿಸಿದರು. ಭೀಮಶ್ರೀ ವಂದಿಸಿದರು. ಬಸವಜ್ಯೋತಿ ನಿರೂಪಣೆ ಮಾಡಿದರು. ವಿಜಯಲಕ್ಷ್ಮೀ ಕೆಂಗನಾಳ ವಚನ ಸಂಗೀತ ನಡೆಸಿಕೊಟ್ಟರು.