ಜಿಲ್ಲೆ

ಮಾನವೀಯ ಮೌಲ್ಯವುಳ್ಳ ಶಿಕ್ಷಣ ಕೊಡಿಸಿ

ತಿ.ನರಸೀಪುರ: ಪ್ರಸ್ತುತ ಸನ್ನಿವೇಶದಲ್ಲಿ ಮಕ್ಕಳಿಗೆ ಮಾನವೀಯ ಮೌಲ್ಯವುಳ್ಳ ಶಿಕ್ಷಣವನ್ನು ನೀಡಬೇಕಿದೆ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಮಾಲಂಗಿ ಜೆ.ಶಿವಸ್ವಾಮಿ ಹೇಳಿದರು.

ಪಟ್ಟಣದ ತಾಲೂಕು ನಾಯಕರ ಸಂಘದ ಆವರಣದಲ್ಲಿ ಭಾನುವಾರ ನಾಯಕ ನೌಕರರ ಸಂಘದಿಂದ ಆಯೋಜಿಸಿದ್ದ ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿ ಉತ್ತೀರ್ಣರಾದ ನಾಯಕ ಸಮುದಾಯದ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಪ್ರದಾನ ಮಾಡಿ ಮಾತನಾಡಿದರು. ಮಕ್ಕಳಿಗೆ ಮಾನವೀಯ ಮೌಲ್ಯವುಳ್ಳ ಶಿಕ್ಷಣ ಸಿಗಬೇಕು. ಶಿಕ್ಷಣ ಎಂಬುದು ಸಮಾಜದಲ್ಲಿ ಶೋಷಿತ, ದಮನಿತ ಹಾಗೂ ಹಿಂದುಳಿದ ಜನಸಮುದಾಯಗಳ ಬಾಳಿಗೆ ಬೆಳಕು ನೀಡುತ್ತದೆ. ಸ್ಪರ್ಧಾತ್ಮಕ ಯುಗವಾದ್ದರಿಂದ ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು. ಆರ್ಥಿಕ ಸಮಸ್ಯೆ ನೆಪವೊಡ್ಡಿ ಶಿಕ್ಷಣವನ್ನು ಅರ್ಧಕ್ಕೆ ಮೊಟಕುಗೊಳಿಸದಿರಿ ಎಂದು ಸಲಹೆ ನೀಡಿದರು.

ಜಿಪಂ ಮಾಜಿ ಸದಸ್ಯ ಮಂಜುನಾಥನ್ ಮಾತನಾಡಿ, ಸಮುದಾಯದ ವಿದ್ಯಾರ್ಥಿಗಳು ಕೇಂದ್ರ ಹಾಗೂ ರಾಜ್ಯ ಸರ್ಕಾರ ಪರಿಶಿಷ್ಟ ಪಂಗಡಗಳ ಕಲ್ಯಾಣ ಕಾರ್ಯಕ್ರಮದಡಿ ರೂಪಿಸಿರುವ ಯೋಜನೆಗಳ ನೆರವು ಪಡೆದುಕೊಂಡು ಶೈಕ್ಷಣಿಕ ಪ್ರಗತಿಗೆ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.

30ಕ್ಕೂ ಹೆಚ್ಚು ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಜಿಪಂ ಮಾಜಿ ಸದಸ್ಯ ಹೊನ್ನನಾಯಕ, ನಾಯಕರ ಸಂಘದ ಮಾಜಿ ಅಧ್ಯಕ್ಷ ಚಿಕ್ಕಯ್ಯ, ಮಾಜಿ ಪ್ರಧಾನ ಕಾರ್ಯದರ್ಶಿ ಆಲಗೂಡು ನಾಗರಾಜು, ನಾಯಕ ನೌಕರರ ಸಂಘದ ಅಧ್ಯಕ್ಷ ಆರ್.ರಾಜು, ಕಾರ್ಯದರ್ಶಿ ಶಾಂತರಾಜು, ಖಜಾಂಚಿ ಪುಟ್ಟಮಾದಯ್ಯ, ಗ್ರಾಪಂ ಸದಸ್ಯರಾದ ಸಿದ್ದರಾಜು, ಮಹೇಶ, ಮುಖಂಡರಾದ ಮಹದೇವಯ್ಯ, ಗೋವಿಂದರಾಜು, ಡಾ.ಮಹದೇವಯ್ಯ, ಹೆಮ್ಮಿಗೆ ಹೊನ್ನಯ್ಯ, ಬಸವರಾಜು, ಶಾಂತರಾಜು, ನಂಜಪ್ಪ, ಬಸವರಾಜು, ನಾಗರಾಜು, ನಾಯಕರ ಸಂಘ, ನೌಕರರ ಸಂಘದ ಪದಾಧಿಕಾರಿಗಳು ಇದ್ದರು.