ಚಿತ್ರದುರ್ಗ: ಸಮಾನತೆ, ಸ್ವಾತಂತ್ರೃ, ಸಹೋದರತೆಯ ತತ್ವಾದರ್ಶವನ್ನು ವಿಶ್ವಕ್ಕೆ ಸಾರಿದ ಮಹರ್ಷಿ ವಾಲ್ಮೀಕಿ ತತ್ವಜ್ಞಾನಿ, ಮಾನವೀಯ ಮೌಲ್ಯಗಳ ಹರಿಕಾರ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಬಣ್ಣಿಸಿದರು.
ಮಹರ್ಷಿ ವಾಲ್ಮೀಕಿ ಭವನದಲ್ಲಿ ಜಿಲ್ಲಾಡಳಿತ ಹಮ್ಮಿಕೊಂಡಿದ್ದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿದರು.
ವಾಲ್ಮೀಕಿ ರಾಮಾಯಣ ಸರ್ವಕಾಲಕ್ಕೂ ಪೂಜ್ಯನೀಯ ಮಹಾಕಾವ್ಯವಾಗಿದೆ. ಅದರ ಪ್ರೇರಣೆಯಿಂದ ಇಂದು ಜಗತ್ತಿನಲ್ಲಿ ಸಾವಿರಾರು ರಾಮಾಯಣ ಕಾವ್ಯಗಳು ರಚನೆಯಾಗಿವೆ. ಭಾರತದ ಹಲವು ಭಾಷೆ ಸೇರಿ ಜರ್ಮನಿ, ಇಟಲಿ, ಫ್ರೆಂಚ್, ಇಂಗ್ಲಿಷ್ ಇನ್ನೂ ಮೊದಲಾದ ಭಾಷೆಗಳಲ್ಲೂ ರಚಿತವಾಗಿವೆ. ಮಹರ್ಷಿ ಪ್ರಗತಿ, ಅರಿವಿನ ಮಾರ್ಗದಲ್ಲಿ ಸಾಗಿದ್ದು, ವಿಶ್ವ ಮಾನವರಾಗಿದ್ದಾರೆ ಎಂದು ಸ್ಮರಿಸಿದರು.
ದುರ್ಗದ ಮತ್ತಿ ತಿಮ್ಮಣ್ಣನಾಯಕ, ರಾಜ ಬಿಚ್ಚುಗತ್ತಿ ಭರಮಪ್ಪನಾಯಕ, ಹಿರೇ ಮದಕರಿನಾಯಕ, ರಾಜವೀರ ಮದಕರಿನಾಯಕ, ಕಂಪಿಲೆಯ ಕಂಪಿಲೆಯರಾಯ, ವಿಜಯನಗರದ ಎಚ್.ಎಂ. ನಾಯಕ, ಸುರಪುರದ ರಾಜ ವೆಂಕಟಪ್ಪನಾಯಕ, ಬ್ರಿಟಿಷರಿಗೆ ಸಿಂಹಸ್ವಪ್ನವಾಗಿದ್ದ ಸಿಂಧೂರ ಲಕ್ಷ್ಮಣ, ಹಲಗಲಿಯ ಬೇಡರು ಇವರೆಲ್ಲರೂ ಶಕ್ತಿ-ಭಕ್ತಿಗಳ ಸಂಗಮವಾಗಿದ್ದರು ಎಂದು ಹೇಳಿದರು.
ಬೇಡರ ಕಣ್ಣಪ್ಪ, ಏಕಲವ್ಯ, ಶಬರಿ ಒಳಗೊಂಡು ಬೇಡ ಸಮುದಾಯದ ಅನೇಕರು ಭಾರತೀಯ ಸಾಂಸ್ಕೃತಿಕ ಪರಂಪರೆಗೆ ನೀಡಿರುವ ಕೊಡುಗೆ ಅವಿಸ್ಮರಣೀಯ. ಮೌರ್ಯರ ಕಾಲದಿಂದ ವಿಜಯನಗರ ಕಾಲದವರೆಗೂ ರಕ್ಷಣಾ ಕಾರ್ಯದಲ್ಲಿ ಸೈ ಎನಿಸಿಕೊಂಡಿದ್ದಾರೆ. ವಾಲ್ಮೀಕಿ ಮಾತ್ರವಲ್ಲ. ಅನೇಕ ಪುರಾಣ ಪ್ರಸಿದ್ಧ ಪುರುಷರು, ವೀರ ಪರಾಕ್ರಮಿಗಳು, ಸ್ವಾತಂತ್ರೃ ಹೋರಾಟಗಾರರೂ ನಮಗೆ ಸದಾ ಆದರ್ಶವಾಗಿದ್ದಾರೆ ಎಂದು ಸ್ಮರಿಸಿದರು.
ಎಂಎಲ್ಸಿ ಕೆ.ಎಸ್. ನವೀನ್ ಮಾತನಾಡಿ, ಮಧ್ಯ ಕರ್ನಾಟಕ ಚಿತ್ರದುರ್ಗ ಜಿಲ್ಲೆಯಲ್ಲಿ ನಾಯಕ ಸಮುದಾಯ ಅತಿ ಹೆಚ್ಚಿನ ಸಂಖ್ಯೆಯಲ್ಲಿದೆ. ರಾಜ್ಯಮಟ್ಟದ ವಾಲ್ಮೀಕಿ ಜಯಂತ್ಯುತ್ಸವವನ್ನು ಇಲ್ಲಿ ಆಚರಿಸಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದರು.
ರಾಮಾಯಣ ಮಹಾಕಾವ್ಯದ ಮೂಲಕ ತಂದೆ-ಮಗ, ಅಣ್ಣ-ತಮ್ಮಂದಿರ ಬಾಂಧವ್ಯ, ಮಾದರಿ ಸಮಾಜ ಹೇಗೆ ನಿರ್ಮಾಣ ಆಗಬೇಕೆಂಬ ಪರಿಕಲ್ಪನೆಯನ್ನು ಇಡೀ ವಿಶ್ವಕ್ಕೆ ನೀಡಿದವರು ವಾಲ್ಮೀಕಿ. ಅವರ ತತ್ವಾದರ್ಶ ಎಲ್ಲರಿಗೂ ದಾರಿದೀಪವಾಗಿದೆ ಎಂದರು.
ದುರ್ಗದಲ್ಲಿ ಮದಕರಿನಾಯಕರ ಥೀಮ್ ಪಾರ್ಕ್ ನಿರ್ಮಿಸುವುದಾಗಿ ಕೇಂದ್ರ ಗೃಹ ಸಚಿವರು ಈಗಾಗಲೇ ಘೋಷಿಸಿದ್ದಾರೆ. ಜಿಲ್ಲಾಡಳಿತ 30 ಎಕರೆ ಜಾಗ ನೀಡಿದರೆ, ಥೀಮ್ ಪಾರ್ಕ್ ಜತೆಗೆ ಬೃಹತ್ ವಾಲ್ಮೀಕಿ ಪ್ರತಿಮೆ ನಿರ್ಮಿಸಿ ಇಬ್ಬರು ಮಹನೀಯರ ಮಹತ್ಕಾರ್ಯಗಳನ್ನು ವಿಶ್ವಕ್ಕೆ ತಿಳಿಸುವ ಕಾರ್ಯಕ್ಕೆ ಶ್ರಮಿಸುವುದಾಗಿ ತಿಳಿಸಿದರು.
ಸಹಾಯಕ ಪ್ರಾಧ್ಯಾಪಕ ಡಾ.ಓಬಣ್ಣ ಉಪನ್ಯಾಸ ನೀಡಿದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಪಿ. ತಿಪ್ಪೇಸ್ವಾಮಿ, ಎಂ. ತಿಪ್ಪೇಸ್ವಾಮಿ, ಎಚ್. ತಿಪ್ಪಯ್ಯ, ಎನ್. ಸುಮಾ, ಎ. ತಿಪ್ಪೇಸ್ವಾಮಿ ಅವರಿಗೆ ಜಿಲ್ಲಾಮಟ್ಟದ ಶ್ರೀ ಮಹರ್ಷಿ ವಾಲ್ಮೀಕಿ ರತ್ನ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
2024-25ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಜಿಲ್ಲೆಗೆ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾದ ಆಸೆಚನ ಪಿ. ದಾಸರಿ, ಹಿರಿಯೂರು ತಾಲೂಕು ದೇವರಕೊಟ್ಟ ಏಕಲವ್ಯ ವಸತಿ ಶಾಲೆಯಲ್ಲಿ ಪ್ರಥಮ ಶ್ರೇಣಿ ಪಡೆದ ಸಂಜೀವ್ ಮುತ್ತಯ್ಯ ಅವರಿಗೆ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಿಂದ ನಗದು ಬಹುಮಾನ ವಿತರಿಸಲಾಯಿತು.
ಕೂಡಾ ಅಧ್ಯಕ್ಷ ಎಂ.ಕೆ. ತಾಜ್‌ಪೀರ್, ನಗರಸಭೆ ಅಧ್ಯಕ್ಷೆ ಎಂ.ಪಿ. ಅನಿತಾ, ಉಪಾಧ್ಯಕ್ಷೆ ಶಕೀಲಾಭಾನು, ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಆರ್. ಶಿವಣ್ಣ, ಉಪಾಧ್ಯಕ್ಷ ಡಿ.ಎನ್. ಮೈಲಾರಪ್ಪ, ನಾಯಕ ಸಮಾಜದ ಜಿಲ್ಲಾಧ್ಯಕ್ಷ ಎಚ್.ಜೆ. ಕೃಷ್ಣಮೂರ್ತಿ, ಜಿಲ್ಲಾ ಮದಕರಿನಾಯಕ ವಿದ್ಯಾಸಂಸ್ಥೆ ಅಧ್ಯಕ್ಷ ಎಸ್. ಸಂದೀಪ್, ಡಿಸಿ ಟಿ. ವೆಂಕಟೇಶ್, ಜಿಪಂ ಸಿಇಒ ಡಾ.ಎಸ್. ಆಕಾಶ್, ಎಸ್ಪಿ ರಂಜಿತ್‌ಕುಮಾರ್ ಬಂಡಾರು, ಮುಖಂಡರಾದ ಡಾ.ಗುಡ್ಡದೇಶ್ವರಪ್ಪ, ಸಿ.ಜಿ. ಶ್ರೀನಿವಾಸ್, ಓ.ಬಿ. ಬಸವರಾಜ್, ಮಂಜುನಾಥ್, ಸಂಪತ್‌ಕುಮಾರ್ ಇತರರಿದ್ದರು.
*ಬಾಕ್ಸ್* 5 ಎಕರೆ ಜಮೀನಿಗೆ ಮನವಿ
ಜಿಲ್ಲಾ ನಾಯಕ ಸಮಾಜದ ಅಭಿವೃದ್ಧಿಗೆ 5 ಎಕರೆ ಜಮೀನು, ವಾಲ್ಮೀಕಿ ಭವನಕ್ಕೆ ಮೂಲಸೌಕರ್ಯ ಒದಗಿಸುವ ಸಲುವಾಗಿ 50 ಲಕ್ಷ ರೂ. ಅನುದಾನ ನೀಡುವಂತೆ ಸಮಾಜದ ಪರವಾಗಿ ಇದೇ ವೇಳೆ ಡಿ.ಸುಧಾಕರ್ ಅವರಿಗೆ ಮನವಿ ಸಲ್ಲಿಸಲಾಯಿತು.
ವಾಲ್ಮೀಕಿ ಜಯಂತಿ ಅದ್ದೂರಿ ಮೆರವಣಿಗೆ
ಚಿತ್ರದುರ್ಗ: ಮಹರ್ಷಿ ವಾಲ್ಮೀಕಿ ಜಯಂತಿ ಅಂಗವಾಗಿ ನಗರದಲ್ಲಿ ಮಂಗಳವಾರ ವಾಲ್ಮೀಕಿ ಪುತ್ಥಳಿ ಹಾಗೂ ಭಾವಚಿತ್ರದ ಮೆರವಣಿಗೆಗೆ ಪುಷ್ಪನಮನ ಸಲ್ಲಿಸುವ ಮೂಲಕ ಐತಿಹಾಸಿಕ ಕೋಟೆ ಮುಂಭಾಗ ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಚಾಲನೆ ನೀಡಿದರು.
ಜಿಲ್ಲಾಡಳಿತ, ಜಿಪಂ, ನಗರಸಭೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಜಿಲ್ಲಾ ನಾಯಕ ಸಮಾಜ ಆಯೋಜಿಸಿದ್ದ ಅದ್ದೂರಿ ಮೆರವಣಿಗೆಯಲ್ಲಿ ಕಹಳೆ, ತ್ರಾಷ್, ಡೋಲು, ಗೊಂಬೆ ಕುಣಿತ, ಕೀಲು ಕುದುರೆ ಸೇರಿ ವಿವಿಧ ಜಾನಪದ ಕಲಾತಂಡಗಳು ಮೆರುಗು ನೀಡಿದವು.
ಕೋಟೆ ಮುಂಭಾಗದಿಂದ ಆರಂಭವಾಗಿ ಶ್ರೀ ಏಕನಾಥೇಶ್ವರಿ ದೇವಿ ಪಾದದಗುಡಿ, ರಾಜಮಾತೆ ಶ್ರೀ ಉಚ್ಚಂಗಿಯಲ್ಲಮ್ಮ ದೇಗುಲ, ಚಿಕ್ಕಪೇಟೆ, ಆನೆಬಾಗಿಲು, ಗಾಂಧಿ, ಎಸ್‌ಬಿಐ, ಡಾ.ಬಿ.ಆರ್.ಅಂಬೇಡ್ಕರ್, ಮದಕರಿನಾಯಕ ವೃತ್ತದ ಮಾರ್ಗವಾಗಿ ವಾಲ್ಮೀಕಿ ಭವನ ತಲುಪಿತು.
ಎಸಿ ಮಹೆಬೂಬ್ ಜಿಲಾನಿ ಖುರೇಷಿ, ಎಎಸ್ಪಿ ಶಿವಕುಮಾರ್, ತಹಸೀಲ್ದಾರ್ ಗೋವಿಂದರಾಜ್, ಜಿಪಂ ಉಪ ಕಾರ್ಯದರ್ಶಿ ಡಾ.ರಂಗಸ್ವಾಮಿ, ಜಿಲ್ಲಾ ಅಂಗವಿಕಲರ ಕಲ್ಯಾಣಧಿಕಾರಿ ಜೆ. ವೈಶಾಲಿ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಎಚ್.ದಿವಾಕರ್, ಜಿಲ್ಲಾಮಟ್ಟದ ಅಧಿಕಾರಿಗಳು, ಸಮುದಾಯದ ಮುಖಂಡರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.