ಚಿತ್ರದುರ್ಗ: ಸಮಾನತೆ, ಸ್ವಾತಂತ್ರ್ಯ, ಸಹೋದರತೆಯ ತತ್ವಾದರ್ಶವನ್ನು ವಿಶ್ವಕ್ಕೆ ಸಾರಿದ ಮಹರ್ಷಿ ವಾಲ್ಮೀಕಿ ತತ್ವಜ್ಞಾನಿ, ಮಾನವೀಯ ಮೌಲ್ಯಗಳ ಹರಿಕಾರ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಬಣ್ಣಿಸಿದರು.
ತರಾಸು ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಪಂ, ನಗರಸಭೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಿಂದ ಗುರುವಾರ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಉದ್ಘಾಟಿಸಿ ಮಾತನಾಡಿದರು.
ವಾಲ್ಮೀಕಿ ರಾಮಾಯಣ ಸರ್ವಕಾಲಕ್ಕೂ ಪೂಜ್ಯನೀಯ ಮಹಾಕಾವ್ಯ. ಅವರ ಜೀವನವೇ ಪ್ರಗತಿ, ಅರಿವಿನ ಮಾರ್ಗದಲ್ಲಿ ಸಾಗಿದ್ದು, ವಿಶ್ವ ಮಾನವರು ಹೌದು ಎಂದರು.
ತ್ರೇತಾಯುಗದ ಮೂಲ ಸಂವೇದನೆ, ಬದುಕಿನ ಮೌಲ್ಯ, ಸೋಲು-ಗೆಲುವು, ನೋವು-ನಲಿವು ಈ ಎಲ್ಲವನ್ನು ಒಟ್ಟಾಗಿ ಹಿಡಿದಿಟ್ಟ ದಾರ್ಶನಿಕ ಶಕ್ತಿ ವಾಲ್ಮೀಕಿಯಾಗಿದ್ದಾರೆ. ಮಹಾನ್ ಮಾನವತ ವಾದಿಗಳ ಜಯಂತಿ ಎಲ್ಲ ಸಮುದಾಯದವರು ಸೇರಿ ಆಚರಿಸುವಂತಾಗಬೇಕು ಎಂದು ಸಲಹೆ ನೀಡಿದರು.
ಲವ-ಕುಶರ ಜನನ, ಶಿಕ್ಷಣ ಎಲ್ಲವೂ ನಡೆದಿದ್ದು ವಾಲ್ಮೀಕಿ ಕುಟೀರದಲ್ಲಿ. ಅವರಿಬ್ಬರಿಗೂ ರಾಮಚರಿತೆ ಕಲಿಸಿ ರಾಮನೆದುರು ಆಡಿಸಿ, ತಂದೆ-ಮಕ್ಕಳು ಮತ್ತು ರಾಮ-ಸೀತೆಯನ್ನು ಒಗೂಡಿಸಿದ್ದು ವಾಲ್ಮೀಕಿ ಎಂದು ಸ್ಮರಿಸಿದರು.
ನಾಯಕ ಸಮುದಾಯದಲ್ಲಿ ವಾಲ್ಮೀಕಿ ಮಾತ್ರವಲ್ಲ. ಅನೇಕ ಪುರಾಣ ಪ್ರಸಿದ್ಧ ಪುರುಷರು, ವೀರ ಪರಾಕ್ರಮಿಗಳು, ಸ್ವಾತಂತ್ರೃ ಹೋರಾಟಗಾರರು ಇದ್ದಾರೆ. ಅವರೆಲ್ಲರೂ ನಮಗೆ ಸದಾ ಆದರ್ಶವಾಗಿದ್ದಾರೆ ಎಂದರು.
ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಮಾತನಾಡಿ, ನಗರದ ಮದಕರಿನಾಯಕ ವೃತ್ತ ಸಮೀಪದ ವಾಲ್ಮೀಕಿ ಭವನಕ್ಕೆ ಇನ್ನೂ ಅನುದಾನದ ಅವಶ್ಯಕತೆ ಇದೆ ಎಂಬುದಾಗಿ ಸಮಾಜದ ಮುಖಂಡರು ಗಮನಕ್ಕೆ ತಂದಿದ್ದು, ಅನುದಾನ ಮಂಜೂರಾತಿಗೆ ಅಗತ್ಯ ಕ್ರಮವಹಿಸಿ, ಮುಂಬರುವ ದಿನಗಳಲ್ಲಿ ಜಯಂತಿಯನ್ನು ಭವನದಲ್ಲಿಯೇ ಆಚರಿಸೋಣ ಎಂದು ಹೇಳಿದರು.
ಮಾರ್ಚ್‌ನೊಳಗೆ ದುರ್ಗೋತ್ಸವ: 2025ರ ಮಾರ್ಚ್ ಅಂತ್ಯದೊಳಗೆ ಸರ್ಕಾರದಿಂದ ದುರ್ಗೋತ್ಸವ ಆಚರಿಸಲಾಗುವುದು. ಈ ಬಾರಿ ದುರ್ಗದ ವೈಭವ, ಮದಕರಿನಾಯಕರ ಚರಿತ್ರೆಯನ್ನು ಇಡೀ ವಿಶ್ವಕ್ಕೆ ತಿಳಿಸುವ ಕೆಲಸ ಆಗಲಿದೆ ಎಂದು ಭರವಸೆ ನೀಡಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಮಾತನಾಡಿ, ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಮೂಲಕ ಸರ್ಕಾರ ಸಾಕಷ್ಟು ಯೋಜನೆಗಳನ್ನು ಜಾರಿಗೊಳಿಸಿದ್ದು, ಸದುಪಯೋಗ ಪಡಿಸಿಕೊಂಡು ಪ್ರಗತಿಯತ್ತ ಸಮುದಾಯದವರು ಸಾಗಬೇಕು ಎಂದು ಸಲಹೆ ನೀಡಿದರು.
ಉಪನ್ಯಾಸಕ ಡಾ.ಆಂಜನೇಯ ಉರ್ತಾಳ್ ಮಾತನಾಡಿ, ವಾಲ್ಮೀಕಿ ಕೇವಲ ಒಂದು ಸಮುದಾಯಕ್ಕೆ ಸೀಮಿತವಲ್ಲ. ಅವರು ದೀನದಲಿತ, ದಮನಿತರ ಬಾಳಿಗೆ ಬೆಳಕಾದವರು. ಈ ನೆಲದ ಸಂಸ್ಕೃತಿಯ ಪ್ರತೀಕ. ವಿಶ್ವದ ಚರಿತ್ರೆಯಲ್ಲಿ ಮಿಂಚಿ ಮಿನುಗಿದ ಧೃವತಾರೆ ಎಂದು ವರ್ಣಿಸಿದರು.
ಇದೇ ವೇಳೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಸಿ.ಚಾರ್ವಿ ಅವರಿಗೆ 1 ಲಕ್ಷ ರೂ. ಚೆಕ್ ಅನ್ನು ಸಚಿವರು ವಿತರಿಸಿದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ದಿನೇಶ್ ಗೌಡಗೆರೆ, ತಿಪ್ಪೇಸ್ವಾಮಿ, ಸಿರುವಲ್ಲಪ್ಪ, ಹನುಮಂತಪ್ಪ ಅವರನ್ನು ಸನ್ಮಾನಿಸಲಾಯಿತು. ಜಿಲ್ಲಾಮಟ್ಟದ ಪ್ರಬಂಧ ಸ್ಪರ್ಧಾ ವಿಜೇತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ನಗರಸಭೆ ಅಧ್ಯಕ್ಷೆ ಬಿ.ಎನ್.ಸುಮಿತಾ, ಸದಸ್ಯ ದೀಪಕ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಕೆ.ತಾಜ್‌ಪೀರ್, ಸದಸ್ಯ ಅಂಜಿನಪ್ಪ, ಜಿಪಂ ಸಿಇಒ ಎಸ್.ಜೆ.ಸೋಮಶೇಖರ್, ಎಸ್‌ಪಿ ರಂಜಿತ್‌ಕುಮಾರ್ ಬಂಡಾರು, ಎಸಿ ಕಾರ್ತಿಕ್, ನಗರಸಭೆ ಪೌರಾಯುಕ್ತೆ ರೇಣುಕಾ, ಜಿಲ್ಲಾ ವಾಲ್ಮೀಕಿ ನಾಯಕ ಸಂಘದ ಅಧ್ಯಕ್ಷ ಎಚ್.ಜೆ.ಕೃಷ್ಣಮೂರ್ತಿ ಇತರರಿದ್ದರು.