ಜಿಲ್ಲೆ

ಮಾನವೀಯ ಮೌಲ್ಯ ಬಿತ್ತಿದ ವೇಮನ

ಚಿತ್ರದುರ್ಗ: ಕಂದಾಚಾರ, ಮೌಢ್ಯ, ಸೋಗಲಾಡಿತ ಪ್ರಶ್ನಿಸಿ, ವಿಶ್ವಕ್ಕೆ ಶೇಷ್ಠ ಮಾನವೀಯ ಮೌಲ್ಯಗಳನ್ನು ಸಾರುವ ಮೂಲಕ ಸಮಾಜಕ್ಕೆ ಕೊಡುಗೆ ನೀಡಿದವರಲ್ಲಿ ವೇಮನರು ಪ್ರಮುಖರು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಹೇಳಿದರು.

ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಗರಸಭೆಯಿಂದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಮಹಾಯೋಗಿ ವೇಮನ ಜಯಂತಿ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.

ಮಾನವ ಮಹನೀಯ, ವಿಶ್ವಮಾನವರು ಆಗಬಹುದು ಎಂಬುದಕ್ಕೆ ಸಾಕಷ್ಟು ನಿದರ್ಶನಗಳಿವೆ. ಮಹಾತ್ಮರ ತತ್ವಾದರ್ಶ, ಸಂದೇಶ ಮಕ್ಕಳಿಗೆ ತಿಳಿಸಿ ಉತ್ತಮ ಮಾರ್ಗದಲ್ಲಿ ಮುನ್ನಡೆಸಬೇಕು. ಆಗ ಆಚರಣೆಗಳು ಸಾರ್ಥಕತೆ ಪಡೆಯಲಿವೆ ಎಂದರು.

ಕನ್ನಡ ಪ್ರಾಧ್ಯಾಪಕ ಡಾ.ಜಿ.ಎನ್.ಯಶೋಧರ ಮಾತನಾಡಿ, ರಾಜ ಮನೆತನದಲ್ಲಿ ಜನಿಸಿದ ವೇಮನ ಅವರು ಶರೀರದ ಬಗ್ಗೆ ವೈರಾಗ್ಯ ತಾಳಿ, ಆತ್ಮಸುಖ ಬಯಸಿ, ಜ್ಞಾನೋದಯ ಪಡೆದರು. ಈ ಬದಲಾವಣೆಗೆ ಅತ್ತಿಗೆ ಹೇಮರೆಡ್ಡಿ ಮಲ್ಲಮ್ಮ ಕಾರಣವಾದರು ಎಂದು ತಿಳಿಸಿದರು.

ಸರಳ ಭಾಷೆಯಲ್ಲಿ ವೇಮನರು ತಮ್ಮ ಅನುಭವ ಹಾಗೂ ಜ್ಞಾನವನ್ನು ವಚನಗಳ ಮೂಲಕ ಸಾದರ ಪಡಿಸಿದ್ದಾರೆ. ವಿಶ್ವದಾಭಿ ರಾಮ ವಿನೂರ ವೇಮ ಎಂಬುದು ಇವರ ಅಂಕಿತನಾಮವಾಗಿದೆ ಎಂದರು.

ತಹಸೀಲ್ದಾರ್ ಡಾ.ನಾಗವೇಣಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಸ್.ಕೆ.ಮಲ್ಲಿಕಾರ್ಜುನ್, ರೆಡ್ಡಿ ಸಮಾಜದ ಮುಖಂಡರಾದ ಗೋವಿಂದರೆಡ್ಡಿ, ಜಿ.ಹನುಮಂತರೆಡ್ಡಿ, ಧನಂಜಯ ರೆಡ್ಡಿ, ಟಿ.ಕೆ.ತಿಮ್ಮಾರೆಡ್ಡಿ, ತಿಪ್ಪೇಸ್ವಾಮಿ ರೆಡ್ಡಿ, ಜಿ.ಅಶ್ವತ್ಥನಾರಾಯಣ ರೆಡ್ಡಿ, ವೆಂಕಟೇಶ್ ರೆಡ್ಡಿ, ನಾಡಿಗರ ರೆಡ್ಡಿ, ಕಟ್ಟಾ ತಿಪ್ಪಾರೆಡ್ಡಿ, ವಿಜಯಕುಮಾರ ರೆಡ್ಡಿ, ರಂಗ ನಿರ್ದೇಶಕ ಕೆಪಿಎಂ ಗಣೇಶಯ್ಯ ಇದ್ದರು.