ಹಾಸನ: ಸ್ವಾವಲಂಬಿ ಬದುಕು ಕಟ್ಟಿಕೊಳ್ಳುವ ಕೌಶಲ ಕಲಿಸಿಕೊಡದ ಪ್ರಸ್ತುತ ಶಿಕ್ಷಣದ ಕುರಿತು ಗಂಭೀರ ಚಿಂತನೆ ನಡೆಸಬೇಕಿದೆ ಎಂದು ಹಿರಿಯ ಪತ್ರಕರ್ತ ಆರ್.ಪಿ.ವೆಂಕಟೇಶಮೂರ್ತಿ ಹೇಳಿದರು.
ನಗರದ ಖೂಬಾ ಕನ್ವೆನ್ಷನ್ ಹಾಲ್‌ನಲ್ಲಿ ಜಿಲ್ಲಾ ಸಹಾಯ ಹಸ್ತ ವೇದಿಕೆ ವತಿಯಿಂದ ಗುರುವಾರ ಏರ್ಪಡಿಸಿದ್ದ ಸರ್ಕಾರಿ ಅಭಿವೃದ್ಧಿ ಯೋಜನೆಗಳ ಮಾಹಿತಿ ಕೇಂದ್ರ ಹಾಗು ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು,ಪ್ರಸ್ತುತ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಬುದ್ಧಿವಂತಿಕೆ ಕಲಿಸುವ ಜತೆಗೆ ಹೃದಯವಂತಿಕೆಯನ್ನು ಕಲಿಸಿಕೊಡುವ ಅಗತ್ಯವಿದೆ. ಯುವಕನೊಬ್ಬ 17 ವರ್ಷಗಳವರೆಗೆ ವ್ಯಾಸಂಗ ಮಾಡುತ್ತಾನೆ. ಆದರೆ ಆ ಬಳಿಕ ಆತ ಸಮಾಜಕ್ಕೆ ಏನು ಕೊಡುಗೆ ನೀಡುತ್ತಿಯಾ ಎಂದು ಪ್ರಶ್ನಿಸಿದರೆ ಉತ್ತರ ಮಾತ್ರ ನಿರಾಶಾದಾಯಕವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕಲಿಕೆಗಾಗಿ ಸರ್ಕಾರ ಮತ್ತು ಕುಟುಂಬ ಲಕ್ಷಾಂತರ ರೂಪಾಯಿ ವ್ಯಯಿಸುತ್ತಿದೆಯಾದರೂ ಬಹುರಾಷ್ಟ್ರೀಯ ಕಂಪನಿಯ ಸಾಮಗ್ರಿಗಳ ಮಾರಾಟಕ್ಕಾಗಿ ಪದವಿ ಪಡೆಯಬೇಕಾ? ಎಂದು ಪ್ರಶ್ನಿಸಿ ನಾವು ಜೀವನ ಕಟ್ಟಿಕೊಳ್ಳುವ ಶಿಕ್ಷಣ ಇಂದು ನಮಗೆ ಬೇಕಾಗಿದೆ. ಕೇವಲ ಬುದ್ಧಿವಂತಿಕೆಯಿದ್ದರೆ ಸಮಾಜದ ಆಸ್ತಿ ಎನ್ನಲು ಆಗುವುದಿಲ್ಲ. ಬುದ್ಧಿ ಜತೆಗೆ ಮಾನವೀಯತೆ ಹಾಗು ಹೃದಯವಂತಿಕೆಯೂ ಇರಬೇಕು ಎಂದರು.
ನಗರಸಭೆ ಆಯುಕ್ತ ಸತೀಶ್ ಮಾತನಾಡಿ, ಸರ್ಕಾರದ ವಿವಿಧ ಯೋಜನೆಗಳು ಒಂದೇ ಸೂರಿನಡಿ ಸಿಗಬೇಕೆಂಬ ಉದ್ದೇಶದಿಂದ ಸ್ಥಾಪಿತವಾಗಿರುವ ಈ ಕೇಂದ್ರ ಜನರಿಗೆ ನೆರವಾಗುತ್ತದೆ. ಮಾನವನಾಗಿ ಹುಟ್ಟಿದ ಮೇಲೆ ಪರಸ್ಪರ ಸಹಾಯ ಗುಣ ಬೆಳೆಸಿಕೊಳ್ಳಬೇಕು. ಇನ್ನೊಬ್ಬರಿಗೆ ನೆರವಾಗುವುದೆಂದರೆ ಆರ್ಥಿಕವಾಗಿ ಮಾತ್ರವಲ್ಲ, ಈ ರೀತಿಯಾಗಿಯೂ ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಕೊಡುಗೆ ಸಲ್ಲಿಸಬಹುದು ಎಂದು ಹೇಳಿದರು.
ಅಲ್ಪಸಂಖ್ಯಾತರ ಇಲಾಖೆ ಜಿಲ್ಲಾ ಅಧಿಕಾರಿ ಪ್ರದೀಪ್ ಸಿಂಹ ಮಾತನಾಡಿ, ಸರ್ಕಾರದ ವಿವಿಧ ಯೋಜನೆಗಳ ಅರಿವು ಪಡೆಯಲು ಜನರು ಸಾಕಷ್ಟು ಕಡೆ ತಿರುಗಾಡಬೇಕಾಗುತ್ತದೆ. ಈ ರೀತಿ ಒಂದೇ ಕಡೆ ಮಾಹಿತಿ ಲಭ್ಯವಾಗುವುದರಿಂದ ಹಣ ಹಾಗು ಸಮಯ ಎರಡೂ ಉಳಿತಾಯವಾಗುತ್ತದೆ. ಬಹುತೇಕ ಅರ್ಜಿಗಳನ್ನು ಆನ್‌ಲೈನ್‌ನಲ್ಲೇ ಹಾಕಬೇಕಿರುವುದರಿಂದ ಸ್ವಲ್ಪ ತಪ್ಪಾದರೂ ತಿರಸ್ಕರಿಸುವ ಸಾಧ್ಯತೆ ಹೆಚ್ಚಿದೆ. ಆದ್ದರಿಂದ ಮಾಹಿತಿ ಕೇಂದ್ರಕ್ಕೆ ಭೇಟಿ ನೀಡಿ ಸಂಪೂರ್ಣ ತಿಳಿವಳಿಕೆ ಪಡೆಯಬೇಕೆಂದು ಸಲಹೆ ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮದ್ ಸುಜೀತಾ ಅವರು ಕೇಂದ್ರವನ್ನು ಉದ್ಘಾಟಿಸಿ ಮಕ್ಕಳಿಗೆ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಸರ್ಕಾರಿ ಅಭಿವೃದ್ಧಿ ಯೋಜನೆಗಳ ಮಾಹಿತಿ ಕೇಂದ್ರದ ಗೌರವಾಧ್ಯಕ್ಷ ಡಾ. ಅಬ್ದುಲ್ ಬಷೀರ್, ಕಾರ್ಯಾಧ್ಯಕ್ಷ ಡಾ.ಫಾರಾನ್, ಅಧ್ಯಕ್ಷ ಸೈಯದ್ ತಾಜ್, ಅಮಿರ್‌ಜಾನ್, ನಗರಸಭೆ ಸದಸ್ಯ ಶಂಕರ್, ವೇದಿಕೆ ಪ್ರಧಾನ ಕಾರ್ಯದರ್ಶಿ ಅತೀಖುರ್ ರೆಹಮಾನ್ ಇತರರಿದ್ದರು.