ಜಿಲ್ಲೆ

ಮಾನವೀಯ ಕಳಕಳಿ ಮೆರೆದ ರಕ್ತದಾನಿಗಳು

ಚಾಮರಾಜನಗರ: ಶ್ರೇಷ್ಠ ದಾನಗಳಲ್ಲಿ ಒಂದಾಗಿರುವ ರಕ್ತದಾನದ ಮಹತ್ವವನ್ನು ತಿಳಿದಿರುವ ಮಹನೀಯರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿ ಮಾನವೀಯ ಕಳಕಳಿ ಮೆರೆದರು.

ಜಿಲ್ಲಾ ವೀರಶೈವ ಲಿಂಗಾಯತ ನೌಕರರ ಸಂಘದ 25ನೇ ವರ್ಷದ ಬೆಳ್ಳಿ ಹಬ್ಬದ ಪ್ರಯುಕ್ತ ನಗರದ ಮಹಾಮನೆಯಲ್ಲಿ ಜಿಲ್ಲಾ ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘ, ರಕ್ತನಿಧಿ ಕೇಂದ್ರ, ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ರೋಟರಿ ಸಿಲ್ಕ್ ಸಿಟಿ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಇದಕ್ಕೆ ವೇದಿಕೆಯಾಯಿತು. ಶಿಬಿರದಲ್ಲಿ ಸುಮಾರು 26 ಜನರು ರಕ್ತದಾನ ಮಾಡಿದರು. ಯುವಕರು ಶಿಬಿರದಲ್ಲಿ ಪಾಲ್ಗೊಂಡು ರಕ್ತದಾನ ಮಾಡಿದ್ದು ವಿಶೇಷವಾಗಿತ್ತು. ಪತಿ-ಪತ್ನಿ ರಕ್ತದಾನ ಮಾಡಿ ಆದರ್ಶ ಮೆರೆದರು. ನಗರದ ನಿವಾಸಿಗಳಾದ ಜ್ಯೋತಿ ಮತ್ತು ಪರಮೇಶ್ ಅವರು ರಕ್ತದಾನ ಮಾಡಿದರು. ರಕ್ತದಾನಿಗಳೆಲ್ಲರಿಗೂ ಪ್ರಮಾಣ ಪತ್ರ ವಿತರಣೆ ಮಾಡಲಾಯಿತು.

ಶಿಬಿರವನ್ನು ನೌಕರರ ಸಂಘದ ಗೌರವಾಧ್ಯಕ್ಷ ಆರ್.ಎಂ.ಸ್ವಾಮಿ ಮಾತನಾಡಿ, ರಕ್ತವನ್ನು ಕೃತಕವಾಗಿ ಸೃಷ್ಟಿ ಮಾಡಲು ಸಾಧ್ಯವಿಲ್ಲ. ಹಾಗಾಗಿ ದಾನಿಗಳಿಂದಲೇ ರಕ್ತ ಸಂಗ್ರಹಿಸಬೇಕು. ಹೆಚ್ಚು ಜನರು ರಕ್ತದಾನ ಮಾಡುವ ಮೂಲಕ ರೋಗಿಗಳ ಜೀವ ಉಳಿಸಲು ನೆರವಾಗಬೇಕು. ಸಂಘದ ವತಿಯಿಂದ ಕಳೆದ 25 ವರ್ಷಗಳಿಂದ ಶಿಬಿರವನ್ನು ಆಯೋಜನೆ ಮಾಡಲಾಗುತ್ತಿದೆ. ಇದೊಂದು ದೊಡ್ಡ ಸಾಧನೆ ಎಂದೇ ಹೇಳಬಹುದು. ರೋಟರಿ ರಕ್ತ ನಿಧಿ ಕೇಂದ್ರ ಕೊಡುಗೆ ನೀಡಲಾಗಿದೆ ಎಂದರು. ರೋಟರಿ ನಿಯೋಜಿತ ಸಹಾಯಕ ಗೌರ್ನರ್ ಗಿರೀಶ್ ದೊಡ್ಡರಾಯಪೇಟೆ ಮಾತನಾಡಿ, ಆಧುನಿಕ ವ್ಯವಸ್ಥೆಯಲ್ಲಿ ಸ್ವಾರ್ಥ, ಸ್ವಜನ ಪಕ್ಷಪಾತ ತಾಂಡವವಾಡುತ್ತಿದೆ. ಎಲ್ಲರೂ ಕೂಡ ನಾವು ಮುಂದುವರೆಯಬೇಕು, ಸಿರಿವಂತರಾಗಬೇಕು. ಅದರಲ್ಲೂ ಬೆಳಗಾಗುವುದರೊಳಗೆ ಶ್ರೀಮಂತರಾಗಬೇಕು ಎನ್ನುವ ವಿದ್ಯಾಮಾನ ನಡೆಯುತ್ತಿವೆ. ಇಂತಹ ಸಂದರ್ಭದಲ್ಲೂ ಕೂಡ ಒಂದು ಸಂಸ್ಥೆ 25 ವರ್ಷ ಯಶಸ್ವಿಯಾಗಿ ಮುನ್ನಡೆಯುತ್ತಿದೆ ಎನ್ನುವುದು ಇತರೆ ಸಂಘ-ಸಂಸ್ಥೆಗಳಿಗೆ ಮಾದರಿ ಎಂದು ಶ್ಲಾಸಿದರು.

ಪ್ರತಿ 5 ವರ್ಷಗಳಿಗೆ ಒಮ್ಮೆ ಸಂಘದ ಚುನಾವಣೆ ನಡೆಯುತ್ತದೆ. ಮೂರು ಅಂಗ ಸಂಸ್ಥೆಗಳು ಇವೆ. ಎಲ್ಲದಕ್ಕೂ ಚುನಾವಣೆ ಮೂಲಕವೇ ಆಯ್ಕೆ ನಡೆಯುತ್ತದೆ. ಸಾಮರಸ್ಯದಿಂದ ಎಲ್ಲರೂ ಕೆಲಸ ಮಾಡುತ್ತಿದ್ದಾರೆ.ಸದಸ್ಯರಿಗೆ ಸಾಲ ಸೌಲಭ್ಯ ನೀಡುವ ಮೂಲಕ ಆರ್ಥಿಕವಾಗಿ ನೆರವು ಒದಗಿಸಲಾಗುತ್ತಿದೆ. ಆರೋಗ್ಯ ಶಿಬಿರ, ರಕ್ತದಾನ ಶಿಬಿರ, ಕಣ್ಣಿನ ತಪಾಸಣೆ ಶಿಬಿರ ಆಯೋಜನೆ ಮಾಡುವ ಮೂಲಕ ಸರ್ವಜನಾಂಗಕ್ಕೂ ನೆರವಾಗಲಾಗುತ್ತಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಸಿದ್ದಮಲ್ಲಪ್ಪ, ಬಸವೇಶ್ವರ ಪತ್ತಿನ ಸಹಕಾರ ಬ್ಯಾಂಕ್ ಅಧ್ಯಕ್ಷ ಗೌರಿಶಂಕರ್, ಸಂಗಮ ಗೃಹ ನಿರ್ಮಾಣ ಸಂಘದ ಉಪಾಧ್ಯಕ್ಷ ಸುಂದರ್ ಹೊನ್ನಮೇಟಿ, ರೋಟರಿ ಸಿಲ್ಕ್ ಸಿಟಿ ಅಧ್ಯಕ್ಷ ಮಾಣಿಕ್ ಚಂದ್ ಸಿ.ರವಿ, ಕಾರ್ಯದರ್ಶಿ ಶಮಿತ್‌ಕುಮಾರ್, ಉಪಾಧ್ಯಕ್ಷ ಮಹದೇವಸ್ವಾಮಿ, ಸದಸ್ಯರಾದ ಅರ್ಕಪ್ಪ, ಬಸವರಾಜಪ್ಪ ಇತರರಿದ್ದರು.

ನಾನು ಮತ್ತು ನನ್ನ ಪತಿ ಎರಡನೇ ಸಲ ಒಟ್ಟಿಗೆ ರಕ್ತದಾನ ಮಾಡಿದ್ದೇವೆ. ಇದು ಬೇರೆ ದಂಪತಿಗಳಿಗೆ ಪ್ರೇರಣಿಯಾಗಲಿ. ಅವರೂ ಸಹ ರಕ್ತದಾನ ಮಾಡಲಿ ಎನ್ನುವುದು ನಮ್ಮ ಸದುದ್ದೇಶವಾಗಿದೆ. ಜ್ಯೋತಿ, ಚಾಮರಾಜನಗರ