ಕುಂದಾಣ: ಎಲ್ಲ ಧರ್ಮಗಳು ಮಾನವನ ಒಳಿತಿಗಾಗಿ ಶ್ರಮಿಸುತ್ತಿವೆ. ಎಲ್ಲ ಧರ್ಮಗಳ ಉದ್ದೇಶವು ಮಾನವರಲ್ಲಿ ಸದಾಚಾರ ತುಂಬುವುದೇ ಆಗಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ಡಾ. ಡಿ. ವೀರೇಂದ್ರ ಹೆಗ್ಗಡೆ ಅಭಿಪ್ರಾಯಪಟ್ಟರು.
ಹೋಬಳಿಯ ಸಿಂಗ್ರಹಳ್ಳಿಯಲ್ಲಿ ಶುಕ್ರವಾರ ಶ್ರೀ ಮದ್ದೂರಮ್ಮ ಶ್ರೀ ಮಹೇಶ್ವರಮ್ಮ ಶ್ರೀ ಗಂಗಮ್ಮ ದೇವತೆಯರ ಸ್ಥಿರಬಿಂಬ ಪ್ರತಿಷ್ಠಾಪನೆ ಮತ್ತು ವಿಮಾನ ಗೋಪುರ ಶಿಖರ ಕಳಸ ಸ್ಥಾಪನೆ ನೆರವೇರಿಸಿ ಮಾತನಾಡಿದರು.
ಗ್ರಾಮ ದೇವತೆಗಳು ಮನುಷ್ಯನ ಕೆಡುಕನ್ನು ನಿವಾರಿಸಿ ಒಳಿತನ್ನು ಮಾಡುತ್ತಿವೆ. ಆದ್ದರಿಂದ ಕಾಲಕಾಲಕ್ಕೆ ಗ್ರಾಮ ದೇವತೆಗಳಿಗೆ ಶಕ್ತಿ ತುಂಬುವ ಕೆಲಸ ಮಾಡಬೇಕು. ಚಿಕ್ಕ ವಯಸ್ಸಿನಿಂದಲೇ ನೆಲದ ಸಂಸ್ಕೃತಿಯನ್ನು ರೂಢಿಸಿಕೊಂಡು, ಗೌರವಿಸುತ್ತಿರುವ ಕ್ರೈಸ್ತ ಧರ್ಮದ ರೊನಾಲ್ಡೋ ಕೊಲಾಸೋ ಅವರು ಸಿಂಗ್ರಹಳ್ಳಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿನ ಜನರಿಗೆ ಒಳ್ಳೆಯದನ್ನು ಬಯಸಿ ಈ ದೇವತೆಗಳ ಪ್ರತಿಸ್ಥಾಪನೆಗೆ ಮುಂದಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಮಾಜ ಸೇವಕ ರೊನಾಲ್ಡೋ ಕೊಲಾಸೋ ಮಾತನಾಡಿ, ಊರಿನಲ್ಲಿ ದೇವಸ್ಥಾನ ನಿರ್ಮಿಸಿಕೊಡುವಂತೆ ಗ್ರಾಮಸ್ಥರು ಕೇಳಿಕೊಂಡರು. ಅಂತೆಯೇ ಎಲ್ಲರಿಗೂ ಒಳ್ಳೆಯದಾಗಲಿ ಎಂದು ಈ ಕೈಂಕರ್ಯ ಮಾಡಿದ್ದೇನೆ. ಊರಿನವರು ರಾಜಕೀಯವನ್ನು ಬದಿಗಿಟ್ಟು ದೇವತಾ ಕಾರ್ಯ ಮಾಡಬೇಕು ಎಂದು ಮನವಿ ಮಾಡಿಕೊಂಡರು.
ಸಂಸದ ಬಿ.ಎನ್. ಬಚ್ಚೇಗೌಡ, ಅವರು ಕೊಲಾಸೋ ಕಾರ್ಯಕ್ಕೆ ಮುಚ್ಚುಗೆ ವ್ಯಕ್ತಪಡಿಸಿದರು. ಅಧಿವೇಶನದ ಹಿನ್ನೆಲೆಯಲ್ಲಿ ಸಚಿವ ಆರ್. ಅಶೋಕ್ ಕಾರ್ಯಕ್ರಮಕ್ಕೂ ಮುನ್ನವೇ ದೇಗುಲಕ್ಕೆ ಭೇಟಿ ನೀಡಿ ತೆರಳಿದರು.
ಶಾಸಕರಾದ ನಿಸರ್ಗ ನಾರಾಯಣಸ್ವಾಮಿ, ಶರತ್ ಬಚ್ಚೇಗೌಡ, ಸಿಎಂ ಆಪ್ತ ಕಾರ್ಯದರ್ಶಿ ಶ್ರೀಧರಮೂರ್ತಿ, ವಿಧಾನ ಪರಿಷತ್ ಸದಸ್ಯ ಬೋಜೇಗೌಡ, , ಬಯಪ ಅಧ್ಯಕ್ಷ ರವಿ, ಜಿಪಂ ಸದಸ್ಯ ಕೆ.ಸಿ. ಮಂಜುನಾಥ್, ತಾಪಂ ಸದಸ್ಯ ಗೋಪಾಲಸ್ವಾಮಿ, ಜಾಲಿಗೆ ಗ್ರಾಪಂ ಅಧ್ಯಕ್ಷೆ ದೀಪ್ತಿ, ಉಪಾಧ್ಯಕ್ಷ ಬಾಲಸುಬ್ರಮಣ್ಯ, ದೊಡ್ಡಜಾಲ ಗ್ರಾಪಂ ಮಾಜಿ ಅಧ್ಯಕ್ಷ ಮಹೇಶ್ ಮತ್ತಿತರರಿದ್ದರು.