ಬಸವಕಲ್ಯಾಣ: ಭಾರತದ ಇಸ್ರೋ ಮತ್ತು ಇತರ ದೇಶದ ಬಾಹ್ಯಾಕಾಶ ಸಂಸ್ಥೆಗಳಿಗೆ ವ್ಯತ್ಯಾಸವಿದೆ. ಇಸ್ರೋ ಕೇವಲ ಮಂಗಳ, ಚಂದ್ರಯಾನಕ್ಕೆ ಸೀಮಿತವಲ್ಲ. ಮಾನವನ ದೈನಂದಿನ ಬದುಕಿಗೆ ಅತ್ಯವಶ್ಯಕವಾಗಿದೆ ಎಂದು ಇಸ್ರೋ ನ್ಯಾವಿಗೇಷನ್ ಸಿಸ್ಟಮ್ಸ್ ಏರಿಯಾ ಸಮೂಹ ನಿರ್ದೇಶಕಿ ಹಾಗೂ ಚಂದ್ರಯಾನ -೩ ಯೋಜನೆ ಉಪ ನಿರ್ದೇಶಕಿ ಎಂ.ವಿ. ರೂಪಾ ಹೇಳಿದರು.
ಅಂತಾರಾಷ್ಟ್ರೀಯ ಲಿಂಗಾಯತ ಧರ್ಮ ಕೇಂದ್ರ ಹಾಗೂ ಲಿಂಗವಂತ ಹರಳಯ್ಯ ಪೀಠದ ಸಹಯೋಗದಡಿ ಹರಳಯ್ಯ ಗವಿಯಲ್ಲಿ ಶರಣ ವಿಜಯೋತ್ಸವ ನಾಡಹಬ್ಬ ಹುತಾತ್ಮ ದಿನಾಚರಣೆ ಆರನೇ ದಿನವಾದ ಶನಿವಾರ ಆಯೋಜಿಸಿದ್ದ ಯುವ ಸಮಾವೇಶ ಮತ್ತು ಸಂವಾದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಸಾಧನೆ, ಯೋಜನೆ, ಅನುಕೂಲಗಳ ಬಗ್ಗೆ ವೈಜ್ಞಾನಿಕ ಹಾಗೂ ತಾಂತ್ರಿಕ ವಿಶ್ಲೇಷಣೆ ನೀಡಿ ಕುತೂಹಲ ಹೆಚ್ಚಿಸುವ ಜತೆಗೆ ಕನಸುಗಳನ್ನು ಬಿತ್ತಿದರು.
ಮಂಗಳಯಾನ ಭಾರತದ ಅತ್ಯಂತ ಯೋಜನೆಗಳಲ್ಲಿ ಒಂದಾಗಿದ್ದು, ಮೊದಲ ಪ್ರಯತ್ನದಲ್ಲೇ ಯಶಸ್ವಿಯಾಗಿ ಉಪಗ್ರಹ ಕಳುಹಿಸಿದ ವಿಶ್ವದ ಏಕೈಕ ರಾಷ್ಟ್ರ ಭಾರತ. ಚಂದ್ರಯಾನ ಯೋಜನೆ-೩ ಯಶಸ್ಸು ವಿಶ್ವವೇ ಭಾರತದ ಕಡೆ ನೋಡುವಂತೆ ಮಾಡಿದೆ. ಚಂದ್ರನ ದಕ್ಷಿಣ ಧ್ರುವದಲ್ಲಿ ನೌಕೆಯನ್ನು ಸೂಸೂತ್ರ ಇಳಿಸಿದ ಜಗತ್ತಿನ ಮೊದಲ ದೇಶ ನಮ್ಮದು ಎಂದು ಹೆಮ್ಮೆ ವ್ಯಕ್ತಪಡಿಸಿದರು.
ನ್ಯಾವಿಗೇಷನ್ ವ್ಯವಸ್ಥೆ ರೂಪುಗೊಂಡ ಬಗ್ಗೆ ಸಾವಿರಾರು ವರ್ಷದ ಇತಿಹಾಸವಿದೆ. ಮೊದಲು ಮಾನವ ತನ್ನ ಸಂಚಾರ ಮಾರ್ಗಗಳನ್ನು ಪ್ರಾಕೃತಿಕ ವಸ್ತುಗಳನ್ನು ಆಧರಿಸಿ ನಿಗದಿಪಡಿಸಿದ ಬಳಿಕ ಆಕಾಶಕಾಯಗಳನ್ನು ಬಳಸಿ ಸ್ಥಳ ಗುರುತಿಸುತ್ತಿದ್ದ ನೌಕಾಯಾನ ಬೆಳೆದಂತೆ ನೂತನ ಅವಿಷ್ಕಾರಗಳು ಘಟಿಸಿದವು. ಹೊಸ ಉಪಕರಣಗಳು ಬಳಕೆಗೆ ಬಂದವು. ಇಂದು ಕೃತಕ ಉಪಗ್ರಹಗಳನ್ನು ಹರಿಬಿಟ್ಟು ಮಾಹಿತಿ ಪಡೆಯುತ್ತಿದ್ದೇವೆ. ಭಾರತವು ನ್ಯಾವಿಗೇಷನ್ ಸಿಸ್ಟಮ್‌ನಲ್ಲಿ ಸ್ವಾವಲಂಬನೆ ಹೊಂದಿದ್ದು, ಹಂತ-ಹಂತವಾಗಿ ಜಾಗತಿಕ ಮಟ್ಟದ ವ್ಯವಸ್ಥೆ ಹೊಂದಲಿದೆ ಎಂದರು.
ಸರ್ಕಾರದ ಯೋಜನೆಗಳು ಸಫಲವಾಗಲು ಇಸ್ರೋ ಕೈಜೋಡಿಸುತ್ತಿದೆ. ಜನಸಾಮಾನ್ಯರ ಬದುಕಿಗಾಗಿ, ಜೀವನ ಮಟ್ಟ ಉನ್ನತೀಕರಣಕ್ಕೆ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ. ಜನರ ಆರ್ಥಿಕ ಮಟ್ಟ ಸುಧಾರಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ. ಜನ ಸಾಮಾನ್ಯರಿಗೆ ಅವಶ್ಯಕ ಮಾಹಿತಿ ಉಪಗ್ರಹಗಳು ನೀಡುತ್ತಿವೆ. ಇಸ್ರೋ ಜಗತ್ತಿನಲ್ಲಿಯೇ ಮೊದಲ ಪ್ರಯತ್ನದಲ್ಲಿಯೇ ಚಂದ್ರನ ಮೇಲೆ ನೀರಿದೆ ಎಂದು ಮಾಹಿತಿ ನೀಡಿದೆ. ವಿದ್ಯಾರ್ಥಿಗಳು ಕುತೂಹಲದಿಂದ ವೈಜ್ಞಾನಿಕ ಅಂಶಗಳನ್ನು ಬಳಸಿಕೊಳ್ಳಬೇಕು. ಕಲ್ಯಾಣ ರಾಜ್ಯ ನಿರ್ಮಾಣವಾಗಬೇಕಾದರೆ ವೈಜ್ಞಾನಿಕವಾಗಿ ಯೋಚನೆ ಮಾಡಬೇಕು ಎಂದು ಕಿವಿಮಾತು ಹೇಳಿದರು.
ಬೀದರ್ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ.ಎಸ್. ಬಿರಾದಾರ್ ಉದ್ಘಾಟಿಸಿ ಮಾತನಾಡಿ, ಇಸ್ರೋ ಉಡಾವಣೆ ಮಾಡಿದ ಚಂದ್ರಯಾನ-೩ರಿಂದ ದೇಶದ ಆರ್ಥಿಕ ಪರಿಸ್ಥಿತಿ ಸುಧಾರಿಸಿದೆ. ಇಸ್ರೋ ಯೋಜನೆಗಳಿಂದ ೨೦೪೭ರ ವೇಳೆಗೆ ಭಾರತ ವಿಶ್ವದಲ್ಲೇ ಆರ್ಥಿಕವಾಗಿ ಪ್ರಥಮ ಸ್ಥಾನ ಪಡೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಾನ್ನಿಧ್ಯ ವಹಿಸಿದ್ದ ಪೂಜ್ಯ ಡಾ.ಗಂಗಾಂಬಿಕೆ ಅಕ್ಕ, ನಿವೃತ್ತ ಡೀನ್ ಡಾ.ಅಮರನಾಥ ಸೋಲಪುರೆ ಮಾತನಾಡಿದರು. ಬಸವೇಶ್ವರ ದೇವಸ್ಥಾನ ಪಂಚ ಕಮಿಟಿ ಅಧ್ಯಕ್ಸ ಬಸವರಾಜ ಕೊರಕೆ, ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ನಿರ್ದೇಶಕ ಡಾ.ಬಸವರಾಜ ಯವಳೆ, ಬೀದರ್ ಅಕ್ಕಮಹಾದೇವಿ ಮಹಾವಿದ್ಯಾಲಯ ಪ್ರಾಚಾರ್ಯೆ ಡಾ.ರಂಜನಾ ಪಾಟೀಲ್, ಬಿಕೆಇಸಿ ಪ್ರಾಚಾರ್ಯ ಡಾ.ಅಶೋಕಕುಮಾರ ವಣಗೇರೆ, ಪ್ರಥಮ ದರ್ಜೆ ಗುತ್ತಿಗೆದಾರ ಚನ್ನಬಸವ ಬಳತೆ, ಕಲ್ಪನಾ ಚಪಾತೆ, ಶಾಂತಕುಮಾರ ಯಲಾಲ, ಚಂದ್ರಕಾಂತ ಅಕ್ಕಣ್ಣ, ಶಾಲಿವಾನ ಜ್ಯೋತೆಪ್ಪ, ಯೋಗೇಶ ಹಿರೇಮಠ, ಸಂದೀಪ್ ಬಿರಾದಾರ್ ಇತರರಿದ್ದರು. ಆಕಾಶ ಖಂಡಾಳೆ ಸ್ವಾಗತಿಸಿದರು. ಮೇನಕಾ ಪಾಟೀಲ್ ನಿರೂಪಣೆ ಮಾಡಿದರು.
ಶರಣ ವಿಜ್ಞಾನಿ ಪುರಸ್ಕಾರ: ಇಸ್ರೋದ ವಿವಿಧ ಯೋಜನೆಗಳ ಯಶಸ್ವಿಗೆ ಶ್ರಮಿಸಿದ ಎಂ.ವಿ. ರೂಪಾ ಅವರಿಗೆ ಶರಣ ವಿಜ್ಞಾನಿ ಪುರಸ್ಕಾರ ನೀಡಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ವಿಶ್ವಕಲ್ಯಾಣ ವಿದ್ಯಾರ್ಥಿ ಪ್ರತಿಷ್ಠಾನವನ್ನು ರೂಪಾ ಉದ್ಘಾಟಿಸಿದರು.
ವಿಜ್ಞಾನ, ವೈಜ್ಞಾನಿಕ ಹಾಗೂ ಅಧ್ಯಾತ್ಮದ ತಳಹದಿ ಮೇಲೆ ಬಸವಾದಿ ಶರಣರು ವಚನಗಳನ್ನು ರಚಿಸಿದ್ದಾರೆ. ಶರಣರು ವಿಜ್ಞಾನದಲ್ಲಿ ಆಸಕ್ತಿಯುಳ್ಳವರಾಗಿದ್ದರು. ಅವರ ಪದಮಂತ್ರ, ವಚನಗಳು ವಿಜ್ಞಾನದಿಂದಲೇ ಕೂಡಿವೆ. ವಿಜ್ಞಾನ, ವೈಚಾರಿಕತೆಯನ್ನು ಪ್ರಚುರಪಡಿಸುವ ಕೆಲಸ ಆಗಬೇಕಾಗಿದೆ.
| ಪೂಜ್ಯ ಡಾ.ಗಂಗಾಂಬಿಕೆ ಅಕ್ಕ
ಹರಳಯ್ಯನವರ ಗವಿ
ಸೀಯರಿಗೆ ಸಮಾನ ಅವಕಾಶ ಕೊಟ್ಟ ಶರಣರು: ಹನ್ನೆರಡನೇ ಶತಮಾನದಲ್ಲಿ ಮಹಿಳೆಯರಿಗೆ ಸಮಾನ ಅವಕಾಶ ಕಲ್ಪಿಸಿದವರು ಬಸವಾದಿ ಶರಣರು ಎಂದು ಇಸ್ರೋ ನ್ಯಾವಿಗೇಷನ್ ಸಿಸ್ಟಮ್ಸ್ ಏರಿಯಾ ಸಮೂಹ ನಿರ್ದೇಶಕಿ ಎಂ.ವಿ. ರೂಪಾ ಹೇಳಿದರು. ಇಲ್ಲಿನ ಹರಳಯ್ಯ ಗವಿಯಲ್ಲಿ ಶರಣ ವಿಜಯೋತ್ಸವ ನಾಡಹಬ್ಬ ಹುತಾತ್ಮ ದಿನಾಚರಣೆ ಆರನೇ ದಿನವಾದ ಶನಿವಾರ ಸಂಜೆ ಆಯೋಜಿಸಿದ್ದ ಸೂತ್ರದ ಗೊಂಬೆಯಾಟ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶದ ಅಭಿವೃದ್ಧಿಗೆ ಕೊಡುಗೆ ನೀಡಿರುವ ಇಸ್ರೋದಲ್ಲಿ ಮಹಿಳಾ ವಿಜ್ಞಾನಿಗಳ ಸಂಖ್ಯೆ ಕಡಿಮೆ ಇದ್ದರೂ ಒಳ್ಳೆಯ ಜವಾಬ್ದಾರಿ ಹೊತ್ತು ಕೆಲಸ ಮಾಡುತ್ತಿದ್ದಾರೆ. ಇಸ್ರೋದಲ್ಲಿ ಸ್ತ್ರೀಯರಿಗೆ ಒಳ್ಳೆಯ ಅವಕಾಶವಿದ್ದು, ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು. ದಿವ್ಯ ಸಾನ್ನಿಧ್ಯ ವಹಿಸಿದ್ದ ಡಾ.ಗಂಗಾಂಬಿಕೆ ಅಕ್ಕ, ಸಾನ್ನಿಧ್ಯ ವಹಿಸಿದ್ದ ಬೇಲೂರಿನ ಶ್ರೀ ಪಂಚಾಕ್ಷರಿ ಸ್ವಾಮೀಜಿ, ವಾಣಿಜ್ಯ ತೆರಿಗೆ ಸಹಾಯಕ ಆಯಕ್ತ ಡಾ.ಮಹೇಶ ಪಾಟೀಲ್ ಮಾತನಾಡಿದರು. ಬಿಡಿಪಿಸಿ ಅಧ್ಯಕ್ಷ ಬಸವರಾಜ ಕೊರಕೆ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ಜಯರಾಜ ಖಂಡ್ರೆ, ರಾಚಪ್ಪ ಪಾಟೀಲ್, ಜಗನ್ನಾಥ ಪತಂಗೆ, ಬಾಬುರಾವ ದಾನಿ, ಉಷಾ ಮಿರ್ಚೆ, ಸಂಜುಕುಮಾರ ಜಾಧವ್, ಮನೋಹರ ಮೈಸೆ, ಶರಣು ಮಡಿವಾಳ ಇತರರಿದ್ದರು. ಸಂತೋಷ ಮಡಿವಾಳ ಸ್ವಾಗತಿಸಿದರು. ಶ್ರುತಿ ಪಾಟೀಲ್ ನಿರೂಪಣೆ ಮಾಡಿದರು. ಉತ್ತರ ಕನ್ನಡ ಜಿಲ್ಲೆ ಹಳಿಯಾಳದ ಹೊಂಗಿರಣ ಗೊಂಬೆಯಾಟ ಕಲಾ ತಂಡದಿಂದ ಸಮಾಜಕ್ಕೆ ಶರಣರ ಕೊಡುಗೆ ಎಂಬ ಸೂತ್ರದ ಗೊಂಬೆಯಾಟ ಸಿದ್ದು ಬಿರಾದಾರ್ ನಿರ್ದೇಶನದಲ್ಲಿ ಪ್ರದರ್ಶನಗೊಂಡಿತು.