ಹಾಸನ: ಸಂವಿಧಾನದಲ್ಲಿ ಎಲ್ಲರಿಗೂ ಸಮಾನ ಹಕ್ಕುಗಳನ್ನು ಕೊಡಲಾಗಿದೆ. ಹಕ್ಕುಗಳ ಉಲ್ಲಂಘನೆಯಾದರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಬಹುದು. ಎಫ್‌ಐಆರ್ ದಾಖಲಿಸದಿದ್ದರೆ ಮಾನವ ಹಕ್ಕುಗಳ ಆಯೋಗಕ್ಕೆ ಹೋಗಿ ದೂರನ್ನು ಸಲ್ಲಿಸಬಹುದು ಎಂದು ಉಚಿತ ಕಾನೂನು ನೆರವು ಸಮಿತಿ ಸದಸ್ಯ ಕಾರ್ಯದರ್ಶಿ ಹಾಗೂ ನ್ಯಾಯಾಧೀಶರಾದ ಜಿ.ಕೆ. ದಾಕ್ಷಾಯಿಣಿ ತಿಳಿಸಿದರು.
ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಮಾನವ ಹಕ್ಕುಗಳ ಒಕ್ಕೂಟದ ವಾರ್ಷಿಕೋತ್ಸವ ಹಾಗೂ ಮಾನವ ಹಕ್ಕುಗಳ ಬಗ್ಗೆ ಅರಿವು ಕಾರ್ಯಕ್ರಮ, ಮತ್ತು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಯಾರೂ ಕೂಡ ಕಾನೂನನ್ನು ಕೈಗೆತ್ತಿಕೊಳ್ಳಬಾರದು. ಮಾನವ ಹಕ್ಕುಗಳು ಉಲ್ಲಂಘನೆಯಾದಾಗ ನಿಮ್ಮ ಹಕ್ಕು ಪಡೆಯುವ ಸ್ವಾತಂತ್ರೃ ನಿಮಗೆ ಇದೆ ಎಂದು ಹೇಳಿದರು.
ಯಾವುದೋ ಕಾರಣಕ್ಕೆ ನಿಮ್ಮ ದೂರು ದಾಖಲು ಮಾಡಲು ಪೊಲೀಸರು ಹಿಂದೇಟು ಹಾಕಬಹುದು. ಇದು ಮಾನವನ ಹಕ್ಕು ಉಲ್ಲಂಘನೆ. ನಂತರ ಪರಿಹಾರಕ್ಕಾಗಿ ನೀವು ಮಾನವ ಹಕ್ಕುಗಳ ಆಯೋಗಕ್ಕೆ ದೂರನ್ನು ಕೊಡಬೇಕು. ಆನಂತರ ಅವರು ನಿಮಗೆ ಸಲಹೆ ಕೊಡುತ್ತಾರೆ. ಹಕ್ಕು ಉಲ್ಲಂಘನೆ ಆದಾಗ ಆಯೋಗ ಸೂಕ್ತ ಕ್ರಮ ತೆಗೆದುಕೊಳ್ಳಲಿದೆ. ಯಾರು ಕೂಡ ಕಾನೂನನ್ನು ಉಲ್ಲಂಘಿಸಬಾರದು. ಅಂತಹವರಿಗೆ ಶಿಕ್ಷೆ ಕಟ್ಟಿಟ್ಟ ಬುತ್ತಿ ಎಂದು ಸಲಹೆ ನೀಡಿದರು.
ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಈ. ಕೃಷ್ಣೇಗೌಡ ಮಾತನಾಡಿ, ಎಲ್ಲರ ರಕ್ಷಣೆ ಮಾಡಲು ಸಂವಿಧಾನ ಎಲ್ಲ ಹಕ್ಕುಗಳನ್ನು ನಮಗೆ ನೀಡಲಾಗಿದೆ. ಇಂದು ಎಲ್ಲರೂ ಕಾನೂನು ಜ್ಞಾನ ಹೊಂದುವುದು ಅತ್ಯವಶ್ಯಕವಾಗಿದೆ. ಹೀಗಾಗಿ ಕಾನೂನು ಜ್ಞಾನವನ್ನು ಕುಟುಂಬದ ಎಲ್ಲ ಸದಸ್ಯರಿಗೂ ತಿಳಿಸುವ ಕಾರ್ಯಕ್ರಮ ಇದಾಗಿದೆ. ಇಂತಹ ಒಕ್ಕೂಟದಿಂದ ನೊಂದವರಿಗೆ, ಬಡವರಿಗೆ, ರೈತರಿಗೆ, ಕೂಲಿ ಕಾರ್ಮಿಕರ ಮಕ್ಕಳಿಗೆ ಅನುಕೂಲವಾಗಬೇಕು ಎನ್ನುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಎಂದರು.
ಬದುಕು ಸಾರ್ಥಕವಾಗಬೇಕಾದರೆ ಮೊದಲು ಶಿಸ್ತನ್ನು ಕಲಿತುಕೊಳ್ಳಬೇಕು. ಕಲಿತ ಶಿಕ್ಷಣದಿಂದ ಸಮಯ, ಶಿಸ್ತು, ಸಂಯಮ, ಜ್ಞಾನಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ನಮ್ಮ ದೇಶದಲ್ಲಿ 141 ಕೋಟಿಗೂ ಅಧಿಕ ಜನಸಂಖ್ಯೆ ಇದ್ದು, ಇಡೀ ವಿಶ್ವದಲ್ಲಿ ಹೆಚ್ಚು ಯುವಕರು ಒಳಗೊಂಡಿರುವ ದೇಶವಾಗಿದೆ. ನಮ್ಮ ದೇಶದಲ್ಲಿ ಶೇ.70 ಕೋಟಿ ಯುವಕರು ಇದ್ದಾರೆ. ಯುವಕರಲ್ಲಿ ಧೈರ್ಯ, ಶೌರ್ಯ ಹಾಗೂ ಜ್ಞಾನ ಇದ್ದರೆ ದೇಶ ಉತ್ತಮ ಮಟ್ಟಕ್ಕೆ ಹೋಗುತ್ತದೆ. ವರ್ಷಕ್ಕೆ 3 ಕೋಟಿ 20 ಲಕ್ಷ ವಿದ್ಯಾರ್ಥಿಗಳು ಪದವಿ ಪಡೆಯುತ್ತಿದ್ದಾರೆ. ಪ್ರತಿ ವರ್ಷ 88 ಲಕ್ಷ ಜನರಲ್ಲಿ 8 ಲಕ್ಷ ಜನರಿಗೆ ಮಾತ್ರ ಕೆಲಸ ಸಿಗುತ್ತಿದೆ. ಉಳಿದವರು ಸಮಯ ವ್ಯರ್ಥ ಮಾಡದೆ ಉದ್ಯೋಗ ಸೃಷ್ಟಿಕೊಳ್ಳುವ ಕಡೆ ಗಮನ ನೀಡಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಶ್ರೀ ಜವೇನಹಳ್ಳಿ ಮಠದ ಸಂಗಮೇಶ್ವರ ಸ್ವಾಮೀಜಿ, ಮಾನವ ಹಕ್ಕುಗಳ ಒಕ್ಕೂಟದ ಸಂಸ್ಥಾಪಕ ರಾಜ್ಯಾಧ್ಯಕ್ಷ ಪುನೀತ್ ಗೌಡ, ಜಿಲ್ಲಾಧ್ಯಕ್ಷ ಯಲಗುಂದ ಶಾಂತಕುಮಾರ್, ಕಾನೂನು ಸಲಹೆಗಾರರಾದ ದೇವರಾಜೇಗೌಡ, ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್.ಬಿ. ಮಂಜುನಾಥ್, ಎವಿಕೆ ಕಾಲೇಜು ಪ್ರಾಂಶುಪಾಲ ಸೀ.ಚ. ಯತೀಶ್ವರ್, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ ನವೀಲೆ ಪರಮೇಶ್, ವೈದ್ಯರಾದ ಡಾ. ಎಂ. ಉಮೇಶ್, ಹಿರಿಯ ಪತ್ರಕರ್ತರಾದ ರಂಗಸ್ವಾಮಿ, ಯು.ಎಸ್. ಬಸವರಾಜು, ಕುಮಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.