ಜಿಲ್ಲೆ

ಮಾನವ ಹಕ್ಕುಗಳ ವ್ಯಾಪ್ತಿ ತಿಳಿಯಿರಿ

ನ್ಯಾಯಾಧೀಶ ಬಿ.ಜಯಂತ್​ಕುಮಾರ್​ ಹೇಳಿಕೆ, ಮಾನವೀಯ ಮೌಲ್ಯದೊಂದಿಗೆ ಜೀವಿಸಿ

ತುಮಕೂರು: ಮನುಷ್ಯರಿಂದಲೇ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ, ಸಮಾಜದ ನೆಮ್ಮದಿಗೆ ಅಗತ್ಯವಾದ ನಡವಳಿಕೆಗಳನ್ನು ಮನುಷ್ಯ ರೂಪಿಸಿಕೊಳ್ಳುವ ಮೂಲಕ ಮಾನವ ಹಕ್ಕುಗಳನ್ನು ರಕ್ಷಿಸಿಕೊಳ್ಳಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಬಿ.ಜಯಂತ್​ಕುಮಾರ್​ ಹೇಳಿದರು.

ರಾಜ್ಯ ಮಾನವ ಹಕ್ಕುಗಳ ಆಯೋಗ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಜಿಲ್ಲಾಡಳಿತದ ಸಹಯೋಗದಲ್ಲಿ ನಗರದ ಕೇಂದ್ರ ಗ್ರಂಥಾಲಯ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ವಿಶ್ವ ಮಾನವ ಹಕ್ಕುಗಳ ದಿನಾಚರಣೆ- ಉದ್ಘಾಟಿಸಿ ಮಾತನಾಡಿದರು.

ಪ್ರತಿಯೊಬ್ಬ ನಾಗರಿಕರು ಮಾನವ ಹಕ್ಕುಗಳ ವ್ಯಾಪ್ತಿಯನ್ನು ತಿಳಿಯುವುದು ಅವಶ್ಯಕವಾಗಿದೆ, ಕವಿ ರವೀಂದ್ರನಾಥ ಠಾಗೋರ್​ ಹೇಳುತ್ತಾರೆ "ಚಿಟ್ಟೆಗಳು ವರ್ಷಗಳ ಕಾಲ ಜೀವಿಸುವುದಿಲ್ಲ, ಕೆಲವು ದಿನವಷ್ಟೇ ಅವುಗಳ ಜೀವನ. ಅವು ಇರುವಷ್ಟು ಕಾಲ ಪರಸ್ಪರ ನೆಮ್ಮದಿ, ಸುಖದಿಂದ ಬಾಳುತ್ತವೆ' ಇದೇ ರೀತಿ ಮನುಷ್ಯ ಕೂಡ ಸುಖವಾಗಿ ಜೀವಿಸಬೇಕು. ಇತರರಿಗೆ ತೊಂದರೆ ಕೊಟ್ಟು ಜೀವಿಸುವಂತಹ ಕ್ರಿಯೆ, ಭಾವನೆಗಳನ್ನು ತ್ಯಜಿಸಬೇಕು ಎಂದರು. ಜಿಪಂ ಸಿಇಒ ಜಿ.ಪ್ರಭು ಮಾತನಾಡಿ, 1947ಕ್ಕೂ ಮುಂಚೆ ಭಾರತೀಯರ ಮಾನವ ಹಕ್ಕು- ಸ್ವಾತಂತ್ರಗಳನ್ನು ರ್ನಿಬಂಧಿಸಲಾಗಿತ್ತು. ಅಂದು ರೈತರು ಕೃಷಿ ಜಮೀನಿನಿಂದ ಆದಾಯ ಗಳಿಸದಿದ್ದರೂ ಕೂಡ ನಿಗದಿತ ತೆರಿಗೆಯನ್ನು ಪಾವತಿಸಬೇಕಿತ್ತು. ಸಾರ್ವಜನಿಕರ ಪ್ರತಿಭಟನೆಗೆ ಅವಕಾಶವಿರಲಿಲ್ಲ. ಸಹಸ್ರಾರು ಭಾರತೀಯರ ಬಲಿದಾನ, ಕೋಟ್ಯಾಂತರ ಭಾರತೀಯ ಹೋರಾಟದ ಫಲವಾಗಿ ನಾವು ಸ್ವಾತಂತ್ರ ಪಡೆದಿದ್ದೇವೆ. ಇಂದು ಪ್ರತಿಯೊಬ್ಬರೂ ಕೂಡ ಮುಕ್ತವಾಗಿ ಅಭಿಪ್ರಾಯ ವ್ಯಕ್ತಪಡಿಸಬಹುದು ಎಂದರು.

ಸಂವಿಧಾನದಲ್ಲಿ ಮೂಲಭೂತ ಹಕ್ಕುಗಳನ್ನು ಅಳವಡಿಸಲಾಗಿದೆ, ಇಂದು ಅನೇಕ ಮಾನವ ಹಕ್ಕುಗಳ ಅಧಿನಿಯಮಗಳು ಜಾರಿಯಲ್ಲಿವೆ. ನಾವೆಲ್ಲರೂ ಮಾನವ ಹಕ್ಕುಗಳನ್ನು ಅರ್ಥ ಮಾಡಿಕೊಂಡು ಮಾನವೀಯ ಗುಣಗಳೊಂದಿಗೆ ಎಲ್ಲರ ಹಿತಕ್ಕಾಗಿ ಜೀವಿಸಬೇಕು. ಇದೇ ಮಾನವ ಹಕ್ಕುಗಳ ನಿಜವಾದ ಉದ್ದೇಶವಾಗಿದೆ ಎಂದರು.

ಅಪರ ಜಿಲ್ಲಾಧಿಕಾರಿ ಡಾ.ಎನ್​.ತಿಪ್ಪೇಸ್ವಾಮಿ ಮಾತನಾಡಿ, ಮಾನವರು ಪರಸ್ಪರ ವಿಶ್ವಾಸ ಹಾಗೂ ಸೌಹಾರ್ಧಯುತವಾಗಿ ಜೀವಿಸುವಂತೆ ಕರೆ ನೀಡಿದರು.

ಹೆಚ್ಚುವರಿ ಪೊಲೀಸ್​ ವರಿಷ್ಠಾಧಿಕಾರಿ ಅಬ್ದುಲ್​ ಖಾದರ್​ ಮಾತನಾಡಿ, ಮಾನವ ಹಕ್ಕುಗಳ ಸಂರಕ್ಷಣೆಗಾಗಿ ಇಲಾಖೆ ಹಗಲಿರುಳು ಶ್ರಮಿಸುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಮಾನವ ಹಕ್ಕುಗಳ ಸಂರಕ್ಷಣೆ ಕುರಿತ ಪ್ರತಿಜ್ಞಾವಿಧಿ ಬೋಧಿಸಲಾಯಿತು. ಸಸಿ ಮತ್ತು ಪುಸ್ತಕಗಳನ್ನು ನೀಡುವ ಮೂಲಕ ವಿಶಿಷ್ಟವಾಗಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನೂರುನ್ನೀಸಾ ಇದ್ದರು.