ಜಿಲ್ಲೆ

ಮಾನವ ಲಕ್ಷಣವಾಗಬೇಕಿದೆ ಉದ್ಯೋಗ- ಡಾ.ಎಂ.ಜಿ.ಈಶ್ವರಪ್ಪ

ದಾವಣಗೆರೆ: ಉದ್ಯೋಗ ಪುರುಷ ಲಕ್ಷಣ ಎಂಬ ಮಾತು ಇಂದಿನ ದಿನಮಾನದಲ್ಲಿ ಮಾನವ ಲಕ್ಷಣ ಎಂದಾಗಬೇಕು ಎಂದು ಬಾಪೂಜಿ ವಿದ್ಯಾಸಂಸ್ಥೆ ಶೈಕ್ಷಣಿಕ ನಿರ್ದೇಶಕ ಡಾ.ಎಂ.ಜಿ.ಈಶ್ವರಪ್ಪ ಹೇಳಿದರು.

ರಾಷ್ಟ್ರೀಯ ವೃತ್ತಿ ಸೇವಾ ಯೋಜನೆಯ ಮಾದರಿ ವೃತ್ತಿ ಕೇಂದ್ರದ ಅಡಿಯಲ್ಲಿ, ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ವತಿಯಿಂದ ನಗರದ ಎವಿಕೆ ಮಹಿಳಾ ಕಾಲೇಜಿನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಉದ್ಯೋಗ ಮೇಳ ಉದ್ಘಾಟಿಸಿ ಮಾತನಾಡಿದರು.

ಹಿಂದೆಲ್ಲ ಉದ್ಯೋಗಗಳು ಪುರುಷಕೇಂದ್ರಿತ ಆಗಿರುತ್ತಿದ್ದವು. ಆದರೆ ಇಂದು ಮಹಿಳೆಯರೂ ಕೆಲಸಗಳಲ್ಲಿ ಹೆಚ್ಚು ತೊಡಗಿಕೊಂಡಿದ್ದಾರೆ. ಹಾಗಾಗಿ ಶಿಕ್ಷಣದ ಜತೆಯಲ್ಲಿ ಉದ್ಯೋಗವೂ ಬೇಕು. ವ್ಯಾಸಂಗದ ಹಂತದಲ್ಲಿ ಕೆಲಸಕ್ಕೆ ಪೂರಕ ಕೌಶಲಗಳನ್ನೂ ಕಲಿಯಬೇಕು ಎಂದರು.

ಇಂತಹ ಮೇಳಗಳಿಂದ ಯುವಜನರು ಆರ್ಥಿಕವಾಗಿ ಸದೃಢರಾಗಬೇಕು. ಪಾಲಕರಿಗೆ ಹೊರೆಯಾಗದೆ ಬದುಕು ಕಟ್ಟಿಕೊಳ್ಳಲು ಈ ಂಏಳಗಳು ಪರಿಹಾರವಾಗಲಿವೆ ಎಂದೂ ಹೇಳಿದರು.

ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಉದ್ಯೋಗಾಧಿಕಾರಿ ಕೆ.ಎನ್. ಗಿರೀಶ್ ಮಾತನಾಡಿ ಸರ್ಕಾರ ಇಂದು ಯುವಕರಿಗೆ ಶಿಕ್ಷಣ ನೀಡುತ್ತಿದೆ. ಉದ್ಯೋಗಾವಕಾಶ ಕಲ್ಪಿಸಲೂ ಸಹ ಪ್ರಯತ್ನ ನಡೆಸಿದೆ. ಇಂದು ಉದ್ಯೋಗಗಳೇ ನಮ್ಮನ್ನು ಹುಡುಕಿ ಬರುವ ವ್ಯವಸ್ಥೆ ಇದೆ. ಇದಕ್ಕೆ ಅಗತ್ಯವಿರುವ ಕೌಶಲಗಳನ್ನೂ ಬೆರಳತುದಿಯಲ್ಲಿ ಪಡೆದುಕೊಳ್ಳುವ ಅವಕಾಶ ದಕ್ಕಿದೆ ಎಂದರು.

ಉದ್ಯೋಗ ಪಡೆಯುವ ಹಂತದಲ್ಲಿ, ಸಂದರ್ಶನಗಳಲ್ಲಿ ಎಂಥಹ ಪ್ರಶ್ನೆಗಳನ್ನು ಕೇಳಲಾಗುತ್ತದೆ, ಅವರ ಆಕಾಂಕ್ಷೆಗಳೇನು ಇತ್ಯಾದಿ ಬಗ್ಗೆಯೂ ಕೌಶಲಗಳನ್ನು ಕಲಿಯಬೇಕಿದೆ. ಮೇಳಗಳಿಂದ ಇದರ ಅನುಭವ ಆಗಲಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಎವಿಕೆ ಪದವಿ ಕಾಲೇಜಿನ ಪ್ರಾಚಾರ್ಯ ಡಾ.ಬಿ.ಪಿ.ಕುಮಾರ್, ಪಪೂ ಕಾಲೇಜಿನ ಪ್ರಾಚಾರ್ಯ ರವಿ ಬಣಕಾರ್, ಜಿಲ್ಲಾ ಕೌಶಲಾಭಿವೃದ್ಧಿ ಅಧಿಕಾರಿ ಬಸವನಗೌಡ, ಪಾಟೀಲ್, ಸಹಾಯಕ ಉದ್ಯೋಗಾಧಿಕಾರಿ ಡಿ.ರವೀಂದ್ರ ಇದ್ದರು.

--