ಜಿಲ್ಲೆ

ಮಾನವ ಜೀವನಕ್ಕೆ ಚಟುವಟಿಕೆ ಅಗತ್ಯ-ಎಡಿಸಿ ಪಿ.ಎನ್ ಲೋಕೇಶ್

ದಾವಣಗೆರೆ: ಎಲ್ಲ ಮಾನವರಲ್ಲೂ ಕ್ರೀಡೆ, ಸಾಹಿತ್ಯ, ಸಿನಿಮಾ, ರಂಗಕಲೆ ಇತ್ಯಾದಿ ಯಾವುದಾದರೊಂದು ಚಟುವಟಿಕೆ ಇರಬೇಕು. ಇಲ್ಲವಾದಲ್ಲಿ ಮಾನವನ ಜೀವನ ಅಪೂರ್ಣ ಎಂದು ಅಪರ ಜಿಲ್ಲಾಧಿಕಾರಿ ಪಿ.ಎನ್. ಲೋಕೇಶ್ ಹೇಳಿದರು.

ದಾವಣಗೆರೆ ದೈವಜ್ಞ ಗೋಲ್ಡ್ ಕ್ಲಬ್ ವತಿಯಿಂದ ಸೋಮವಾರ ಜಿಲ್ಲಾ ಕ್ರೀಡಾಂಗಣದಲ್ಲಿ ಚಿನ್ನ-ಬೆಳ್ಳಿ ಕೆಲಸಗಾರರಿಗೆ ಹಮ್ಮಿಕೊಂಡಿದ್ದ ಟೆನ್ನಿಸ್‌ಬಾಲ್ ಕ್ರಿಕೆಟ್ ಟೂರ್ನಿಯನ್ನು ಉದ್ಘಾಟಿಸಿ ಮಾತನಾಡಿದರು.

ನಿತ್ಯ ಕೆಲಸದಲ್ಲಿ ತೊಡಗಿರುವ ಚಿನ್ನ ಬೆಳ್ಳಿ ಕುಶಲಕರ್ಮಿಗಳಿಗೆ ಪಂದ್ಯಾವಳಿ ಆಯೋಜನೆ ಮಾಡಿ ಯುವಕರಿಗೆ ಮನರಂಜನೆ ನೀಡಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದು ಹೇಳಿದರು.

ದೂಡಾ ಮಾಜಿ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್ ಮಾತನಾಡಿ, ಕೆಲಸದ ಒತ್ತಡದ ಜೀವನದ ನಡುವೆ ಕ್ರೀಡೆಗಳಲ್ಲಿ ಭಾಗಿಯಾದರೆ ಮಾನಸಿಕವಾಗಿ ನಿರಾಳ ಆಗಬಹುದು ಎಂದರು.

ದೈವಜ್ಞ ಹಿತರಕ್ಷಣಾ ವೇದಿಕೆಯ ಸಂಸ್ಥಾಪಕ ವಾಸುದೇವ ರಾಯ್ಕರ್ ಮಾತನಾಡಿ, ಒತ್ತಡದ ಜೀವನದಿಂದಾಗಿ ಆರೋಗ್ಯದತ್ತ ಗಮನ ನೀಡಲಾಗದೆ ಕಾಯಿಲೆಗಳು ಹೆಚ್ಚುತ್ತಿವೆ. ಇದರಿಂದ ಮುಕ್ತರಾಗಲು ಕ್ರೀಡಾಭ್ಯಾಸ ಮಾಡಬೇಕು. ಬಿಡುವಿನ ವೇಳೆಯಲ್ಲಿ ಕ್ರೀಡೆಗಳನ್ನು ಆಡಬೇಕು ಎಂದು ಹೇಳಿದರು.

ರಾಷ್ಟ್ರೀಯ ಪ್ಯಾನೆಲ್ ಕ್ರಿಕೆಟ್ ತೀರ್ಪುಗಾರ ಕೇಶವ್ ಮಾತನಾಡಿ, ಶಾಲಾ ಕಾಲೇಜು ಪಠ್ಯದಲ್ಲಿ ಸೋಲನ್ನು ಸ್ವೀಕರಿಸುವ ವಿಚಾರವಿಲ್ಲ. ಕ್ರೀಡೆಗಳಿಂದ ಬಾಂಧವ್ಯ ವೃದ್ಧಿಯಾಗಲಿದೆ ಎಂದರು.

ಕಾರ್ಯಕ್ರಮದಲ್ಲಿ ಕನ್ನಡ ದೈವಜ್ಞ ಬ್ರಾಹ್ಮಣ ಸಂಘದ ಅಧ್ಯಕ್ಷ ರಮೇಶ್ ಜಿ.ಶೇಟ್, ದೈವಜ್ಞ ಸ್ಪೋರ್ಟ್ಸ್ ಕ್ಲಬ್ ನ ಪ್ರೋತ್ಸಾಹಕ ಅಶೋಕ ಜನ್ನು, ದೈವಜ್ಞ ಬ್ರಾಹ್ಮಣ ಸಮಾಜದ ನಿರ್ದೇಶಕ ಪ್ರಕಾಶ್ ದೈವಜ್ಞ, ಗಾಲಿ ಮಂಜಣ್ಣ, ಉತ್ತಂಗಿ ಪ್ರಕಾಶ್, ರಾಘು ಕುರ್ಡೇಕರ್, ರಮೇಶ್ ಇತರರಿದ್ದರು. 15 ತಂಡಗಳ 150 ಆಟಗಾರರು ಭಾಗವಹಿಸಿದ್ದು ಟೂರ್ನಿ ಜ.20ರ ವರೆಗೂ ನಡೆಯಲಿದೆ