ಬೇಲೂರು: ಮಾನವ ಕಳ್ಳ ಸಾಗಣೆಯಲ್ಲಿ ಮಕ್ಕಳೇ ಹೆಚ್ಚಾಗಿ ಸಿಲುಕಿಕೊಳ್ಳುತ್ತಿದ್ದಾರೆ ಎಂದು ಜೆಎಂಎಫ್‌ಸಿ ನ್ಯಾಯಾಲಯದ ಹಿರಿಯ ನ್ಯಾಯಾಧೀಶ ಪ್ರಸನ್ನಕುಮಾರ್ ಹೇಳಿದರು.
ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಅಭಿಯೋಜನಾ ಇಲಾಖೆ, ತಾಲೂಕು ಆಡಳಿತದಿಂದ ಯುನೈಟೆಡ್ ಅಕಾಡೆಮಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಬುಧವಾರ ಆಯೋಜಿಸಿದ್ದ ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸಂವಿಧಾನದಡಿ ದೇಶದ ಪ್ರತಿಯೊಬ್ಬರಿಗೂ ಜೀವಿಸುವ ಹಕ್ಕಿದೆ. ಮನುಷ್ಯರನ್ನು ಮನುಷ್ಯರೇ ವಿದೇಶಗಳಿಗೆ ಕಳ್ಳ ಸಾಗಣೆ ಮಾಡಿ ಅವರಿಂದ ದುಡಿಸಿಕೊಳ್ಳುತ್ತಿದ್ದಾರೆ. ಜತೆಗೆ ಅಂಗಾಂಗ ತೆಗೆದು ಮಾರಾಟ ಮಾಡುತ್ತಿದ್ದಾರೆ. 15ರಿಂದ 18 ವರ್ಷದ ಮಕ್ಕಳನ್ನು ಸಾಗಣೆ ಮಾಡುವುದು ಹೆಚ್ಚಾಗಿದೆ. ಅದರಲ್ಲೂ ಹೆಣ್ಣು ಮಕ್ಕಳು ಸಾಮಾಜಿಕ ಜಾಲತಾಣಗಳಲ್ಲಿ ಸುಲಭವಾಗಿ ಸಿಕ್ಕಿ ಬೀಳುತ್ತಿದ್ದಾರೆ. ಆದ್ದರಿಂದ ಮಕ್ಕಳನ್ನು ಮೊಬೈಲ್ ಫೋನ್‌ಗಳಿಂದ ಆದಷ್ಟು ದೂರ ಇರಿಸಬೇಕು. ನಿಮಗೆ ತೊಂದರೆಯಾದರೆ ತಕ್ಷಣ ಮಕ್ಕಳ ಸಹಾಯವಾಣಿ 1098ಕ್ಕೆ ಕರೆ ಮಾಡಬೇಕು ಎಂದು ತಿಳಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಾಯಕ ನಿರ್ದೇಶಕ ಎಂ.ಪಿ.ವೆಂಕಟೇಶ್ ಮಾತನಾಡಿ, ಮೀನುಗಳು ಹೇಗೆ ಆಮಿಷಕ್ಕೊಳಗಾಗಿ ಗಾಳಕ್ಕೆ ಸಿಕ್ಕಿಕೊಳ್ಳುತ್ತವೋ ಹಾಗೆ ಮಕ್ಕಳು ಕಳ್ಳ ಸಾಗಣೆದಾರರ ಗಾಳಕ್ಕೆ ಬಲಿಯಾಗುತ್ತಿದ್ದಾರೆ. ಆದ್ದರಿಂದ ಮಕ್ಕಳು ಯಾವುದೇ ಕಾರಣಕ್ಕೂ ಇಂಥ ಆಮಿಷಕ್ಕೆ ಬಲಿಯಾಗಬಾರದು. ನಿಮ್ಮನ್ನು ನೀವೇ ರಕ್ಷಣೆ ಮಾಡಿಕೊಳ್ಳಬೇಕು. ಆದ್ದರಿಂದ ಈ ಬಗ್ಗೆ ಪಾಲಕರು ಹೆಚ್ಚಿನ ಜಾಗ್ರತೆ ವಹಿಸಬೇಕು ಎಂದರು.
ಯುನೈಟೆಡ್ ಅಕಾಡೆಮಿ ಶಾಲೆ ಕಾರ್ಯದರ್ಶಿ ಎಚ್.ಎಂ.ದಿನೇಶ್ ಮಾತನಾಡಿ, ಹಿಂದೆ ರಕ್ಷಣೆ ಮಾಡುವವರು ಹೆಚ್ಚು ಜನರಿದ್ದರು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಯಾರಾದರೂ ಮಕ್ಕಳನ್ನು ಸಾಗಿಸುತ್ತಿದ್ದರೆ 100 ಜನರಲ್ಲಿ 99 ಜನ ಮೊಬೈಲ್‌ನಿಂದ ವಿಡಿಯೋ ಮಾಡುತ್ತಾರೆ. ಕೇವಲ ಒಬ್ಬರು ರಕ್ಷಣೆಗೆ ಮುಂದಾಗುವ ಸ್ಥಿತಿ ನಮ್ಮಲ್ಲಿದೆ. ಮಕ್ಕಳನ್ನು ಕಳ್ಳದಾರಿ ಮೂಲಕ ಸಾಗಿಸಿ ಬೇರೆ ದೇಶಕ್ಕೆ ಮಾರಾಟ ಮಾಡುವ ಜಾಲವಿದೆ ಎಂದು ಹೇಳಿದರು.
ಕ್ಷೇತ್ರಸಂಪನ್ಮೂಲ ಸಮನ್ವಯಾಧಿಕಾರಿ ಶಿವಮರಿಯಪ್ಪ, ಶಿಕ್ಷಣ ಸಂಯೋಜಕ ರವಿಕುಮಾರ್, ವಕೀಲರ ಸಂಘದ ಉಪಾಧ್ಯಕ್ಷ ಬಿ.ವಿ.ರವಿ, ಶಾಲೆ ಖಜಾಂಚಿ, ಸಿ.ಎಚ್.ಲೋಕೇಶ್, ಮುಖ್ಯ ಶಿಕ್ಷಕ ರಘುರಾಮ್, ಎಂ.ಎನ್.ದೀಪಾ ಇತರರು ಇದ್ದರು.