ವಿಜಯವಾಣಿ ಸುದ್ದಿಜಾಲ ಧಾರವಾಡ
ವಿಶ್ವದಲ್ಲಿ 27 ಲಕ್ಷ ಜನರು ಮಾನವ ಕಳ್ಳ ಸಾಗಾಣಿಕೆಗೆ ಬಲಿಯಾಗಿದ್ದಾರೆ. ಮಾನವ ಕಳ್ಳ ಸಾಗಾಣಿಕೆ 3 ಪ್ರಕಾರಗಳಾಗಿ ಗುರುತಿಸಬಹುದು. ಪುರುಷರ, ಮಹಿಳೆಯರ ಮತ್ತು ಮಕ್ಕಳ ಕಳ್ಳ ಸಾಗಾಣಿಕೆ. ಇವರನ್ನು ವಿವಿಧ ಹೀನ ಕೃತ್ಯಗಳಿಗೆ ಬಳಸಿರುವುದು ಮಾನವ ಕುಲಕ್ಕೆ ಕಪ್ಪುಚುಕ್ಕೆಯಾಗಿ ಪರಿಣಮಿಸಿದೆ. ವಿದ್ಯಾರ್ಥಿಗಳು ಜಾಗೃತರಾಗಿ ಅರಿವು ಮೂಡಿಸಬೇಕು ಎಂದು ಪ್ರಾಧ್ಯಾಪಕ ಪ್ರೊ. ಪಿ.ಜಿ. ನಾಗನೂರಿ ಅಭಿಪ್ರಾಯಪಟ್ಟರು.
ನಗರದ ಜೆಎಸ್‌ಎಸ್‌ನ ಬನಶಂಕರಿ ಕಲಾ, ವಾಣಿಜ್ಯ ಹಾಗೂ ಶಾಂತಿಕುಮಾರ ಗುಬ್ಬಿ ವಿಜ್ಞಾನ ಮಹಾವಿದ್ಯಾಲಯದ ಮಾನವ ಹಕ್ಕುಗಳ ಸಂಘ, ರಾಜ್ಯಶಾಸ್ತ್ರ ವಿಭಾಗ, ಎನ್‌ಎಸ್‌ಎಸ್ ಮತ್ತು ಎನ್‌ಸಿಸಿ ಘಟಕ ಇವುಗಳ ಸಹಯೋಗದಲ್ಲಿ ಸೋಮವಾರ ಏರ್ಪಡಿಸಿದ್ದ ಮಾನವ ಕಳ್ಳ ಸಾಗಾಣಿಕೆ ತಡೆ ದಿನ ಆಚರಣೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯೆ ಡಾ. ವೈ. ಜಯಮ್ಮ ಪ್ರತಿಜ್ಞಾವಿಧಿ ಬೋಧಿಸಿ ಮಾತನಾಡಿ, ಸ್ವಾಸ್ಥ ಸಮಾಜದ ನಿರ್ಮಾಣಕ್ಕೆ ಮಾನವ ಕಳ್ಳ ಸಾಗಾಣಿಕೆ ವಿರುದ್ಧ ಪ್ರತಿಯೊಬ್ಬರು ಹೊರಾಡಬೇಕಿದೆ ಎಂದರು.
ಮಾನವ ಹಕ್ಕುಗಳ ಸಂಘದ ಕಾರ್ಯಾಧ್ಯಕ್ಷ ಡಾ. ಆರ್.ವಿ. ಚಿಟಗುಪ್ಪಿ, ಹಿಂದಿ ವಿಭಾಗದ ಮುಖ್ಯಸ್ಥೆ ಡಾ. ಎನ್.ಡಿ. ಕುಲಕರ್ಣಿ, ಅರ್ಥಶಾಸ್ತ್ರ ವಿಭಾಗ ಮುಖ್ಯಸ್ಥ ಡಾ. ಶೌಕತ ಅಲಿ, ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಮಂಜುನಾಥ ಜೋಗಣ್ಣವರ, ಪ್ರೊ. ಕವಿತಾ ಭಜಂತ್ರಿ, ವಿದ್ಯಾರ್ಥಿಗಳು, ಶಿಕ್ಷಕರು, ಇತರರು ಇದ್ದರು. ವಸಂತ ಸ್ವಾಗತಿಸಿದರು. ನಿಧಿ ವಂದಿಸಿದರು.