ತಿ.ನರಸೀಪುರ: ತುಮಕೂರಿನ ಸಿದ್ಧಗಂಗಾ ಮಠದ ಡಾ. ಶಿವಕುಮಾರ ಸ್ವಾಮೀಜಿ ಅವರು ತಮ್ಮ ಜೀವಿತದ ಅವಧಿಯನ್ನು ಮಾನವ ಕಲ್ಯಾಣಕ್ಕಾಗಿ ಮುಡಿಪಿಟ್ಟದ್ದ ಮಹಾ ಪುರುಷರು ಎಂದು ವಾಟಾಳು ಸೂರ್ಯ ಸಿಂಹಾಸನಮಠದ ಶ್ರೀ ಸಿದ್ದಲಿಂಗಶಿವಾಚಾರ್ಯ ಸ್ವಾಮೀಜಿ ಹೇಳಿದರು.
ತ್ರಿವಿಧ ದಾಸೋಹಿ ತುಮಕೂರಿನ ಡಾ.ಶಿವಕುಮಾರ ಸ್ವಾಮಿ ಅವರ 6 ನೇ ವರ್ಷದ ಪುಣ್ಯ ಸ್ಮರಣೆ ಹಿನ್ನೆಲೆಯಲ್ಲಿ ಪಟ್ಟಣದ ಡಾ.ಶಿವಕುಮಾರ ಸ್ವಾಮಿ ಸೇವಾಟ್ರಸ್ಟ್ ವತಿಯಿಂದ ವಿದ್ಯೋದಯ ಕಾಲೇಜು ವೃತ್ತದಲ್ಲಿ ಹಮ್ಮಿಕೊಳ್ಳಲಾಗಿದ್ದ ದಾಸೋಹ ದಿನದ ಕಾರ್ಯಕ್ರಮದಲ್ಲಿ ಶ್ರೀಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಅವರು ಮಾತನಾಡಿದರು.
ಡಾ. ಶಿವಕುಮಾರಸ್ವಾಮೀಜಿ ಅವರು ತಮ್ಮ ಜೀವಿತದ ಕೊನೆಯವರೆಗೂ ಮಾನವ ಕಲ್ಯಾಣಕ್ಕಾಗಿ ಕಾಯಕ ಮಾಡಿದರು. 12ನೇ ಶತಮಾನದ ಬಸವಾದಿ ಶರಣರ ಕಾಯಕ ನಿಷ್ಠೆ, ತತ್ವದಾರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಅವರಂತೆ ನಡೆದು ಕಾಯಕ ಯೋಗಿಯಾದರು. ಆದ್ದರಿಂದಲೇ ಈ ದಿನವನ್ನು ದಾಸೋಹ ದಿನವನ್ನಾಗಿ ಆಚರಿಸಲಾಗುತ್ತಿದೆ. ಯಾವುದೇ ಜಾತಿ, ಭೇದ, ಧರ್ಮವಿಲ್ಲದೆ ಎಲ್ಲ ವರ್ಗದ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಿ, ಅನ್ನದಾಸೋಹ, ಜ್ಞಾನ ದಾಸೋಹ ನೀಡಿ ಸಾವಿರಾರು ಬಡ ಕುಟುಂಬಗಳಿಗೆ ಬೆಳಕು ನೀಡಿದರು ಎಂದು ಹೇಳಿದರು.
ಇದೇ ವೇಳೆ ಅನ್ನ ಸಂತರ್ಪಣೆ ಕಾರ್ಯಕ್ರಮಕ್ಕೆ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹೆಳವರಹುಂಡಿ ಸಿದ್ದಪ್ಪ ಚಾಲನೆ ನೀಡಿದರು. ನೂರಾರು ಮಂದಿ ಸಾರ್ವ ಜನಿಕರು ಹಾಗು ಕಾಲೇಜು ವಿದ್ಯಾರ್ಥಿ- ವಿದ್ಯಾರ್ಥಿನಿಯರು ಪ್ರಸಾದ ಸ್ವೀಕರಿಸಿದರು.
ಡಾ.ಶಿವಕುಮಾರಸ್ವಾಮಿಗಳು ನಡೆದಾಡುವ ದೇವರು, ತ್ರಿವಿಧ ದಾಸೋಹಿ ಎಂದೇ ಭಕ್ತರ ಮನ, ಮನೆಯಲ್ಲಿ ನೆಲೆಗೊಂಡವರು. ಸಾಮಾನ್ಯ ಬಡ ಕುಟುಂಬವೊಂದರಿಂದ ಬಂದ ಶ್ರೀಗಳು ಅಸಾಮಾನ್ಯರಾಗಿ ಜಗತ್ತಿಗೆ ಬೆಳಕಾಗಿದ್ದು ಈ ಶತಮಾನದ ಭಾಗ್ಯ. ಶಿಕ್ಷಣ, ಆರೋಗ್ಯ, ಧರ್ಮದ ಏಳಿಗೆಗೆ ಶ್ರೀಗಳು ತಮ್ಮ ಇಡೀ ಜೀವನವನ್ನು ಮುಡಿಪಾಗಿರಿಸಿದವರು. ಈ ಕಾರಣದಿಂದಲೇ ಇಂದು ಸಿದ್ಧಗಂಗಾ ಮಠದ ಕೀರ್ತಿ ವಿಶ್ವಮಟ್ಟದಲ್ಲಿ ರಾರಾಜಿಸುತ್ತಿದೆ ಎಂದರು.
ಡಾ. ಶಿವಕುಮಾರಸ್ವಾಮಿ ಸೇವಾ ಟ್ರಸ್ಟ್ ಅಧ್ಯಕ್ಷ ಬಜ್ಜಿ ನಿಂಗಪ್ಪ, ಕಾರ್ಯದರ್ಶಿ ತುರುಗನೂರು ಮಲ್ಲೇಶ್, ಉಪಾಧ್ಯಕ್ಷ ಮಾವಿನ ಹಳ್ಳಿ ಸೋಮಣ್ಣ, ಖಜಾಂಚಿ ಕೆಬ್ಬೇಹುಂಡಿ ಮಾಯಪ್ಪ, ಸಹ ಕಾರ್ಯದರ್ಶಿ ವಾಟಾಳು ಗುರುಪಾದ ಸ್ವಾಮಿ, ಸಂಚಾಲಕರಾದ ಅದೃಷ್ಟ ಮಾದಪ್ಪ, ಕಾರ್‌ಮಲ್ಲಪ್ಪ, ಹೆಳವರ ಹುಂಡಿ ಬಸಪ್ಪ, ಬಸವ ಬಳಗದ ಅಧ್ಯಕ್ಷ ಪರಮೇಶ್ ಪಟೇಲ್, ನಾಗಭೂಷಣ್, ಎಸ್.ಎಂ.ಆರ್. ಪ್ರಕಾಶ್, ದೊಡ್ಡನಹುಂಡಿ ನಂಜುಂಡಸ್ವಾಮಿ, ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಸೋಮಶೇಖರ್, ಮೂಗೂರು ಕುಮಾರ ಸ್ವಾಮಿ, ಪುಟ್ಟಬುದ್ಧಿ, ಮಾಯಪ್ಪ, ಮೂರ್ತಿ, ವಿಚಾರವಾದಿ ಕೆ.ಎನ್. ಪ್ರಭುಸ್ವಾಮಿ, ಕೆಇಬಿ ನಿವೃತ್ತ ನೌಕರ ಸಿದ್ದಲಿಂಗಸ್ವಾಮಿ, ಪೂಜಿತ್ ಮೆಡಿಕಲ್ ಕುಮಾರ್, ಪುರಸಭೆ ಮಾಜಿ ಸದಸ್ಯ ಜೆರಾಕ್ಸ್ ಲೋಕೇಶ್ ಮತ್ತಿತರರಿದ್ದರು.