ಧಾರವಾಡ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘದ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಶನಿವಾರ ಪ್ರತಿಭಟನೆ ನಡೆಸಲಾಯಿತು.
ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಪ್ರತಿಭಟನಾಕಾರರು, ಅನುದಾನ ರಹಿತ ಶಿಕ್ಷಣ ಸಂಸ್ಥೆಗಳ ಸಿಬ್ಬಂದಿಗೆ ವೇತನ ನೀಡುವುದು, ರಾಜ್ಯದಲ್ಲಿ 1995ರ ನಂತರ ಪ್ರಾರಂಭವಾದ ಶಾಲೆ-ಕಾಲೇಜುಗಳಿಗೆ ಅನುದಾನ ನೀಡುವುದು, ಎನ್ಪಿಎಸ್ ರದ್ದತಿ, ಕಾಲ್ಪನಿಕ ವೇತನ ಬಡ್ತಿಗೆ ಬಸವರಾಜ ಹೊರಟ್ಟಿ ವರದಿ ಜಾರಿ ಮಾಡುವುದು, ಜ್ಯೋತಿ ಸಂಜೀವಿನಿ ಯೋಜನೆಯನ್ನು ಅನುದಾನಿತ ಶಾಲಾ ಸಿಬ್ಬಂದಿಗೆ ವಿಸ್ತರಿಸುವುದು, 2020ರವರೆಗೆ ಖಾಲಿಯಾದ ಹುದ್ದೆಗಳ ಭರ್ತಿಗೆ ಸರ್ಕಾರ ವಿಧಿಸಿದ ಆರ್ಥಿಕ ಮಿತವ್ಯಯ ಹಿಂಪಡೆಯುವುದು ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದರು.
ಶಿಕ್ಷಕರ ಬೇಡಿಕೆಗಳ ಕುರಿತು ಸರ್ಕಾರ ಸೂಕ್ತ ನಿರ್ಣಯ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ತೀವ್ರ ಸ್ವರೂಪದ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿಪತ್ರ ರವಾನಿಸಿದರು.
ಮಾಜಿ ಶಾಸಕ ಎನ್.ಎಚ್. ಕೋನರಡ್ಡಿ, ರಾಜ್ಯ ಸಂಘಟನಾ ಕಾರ್ಯದರ್ಶಿ ಶ್ಯಾಮ ಮಲ್ಲನಗೌಡರ, ಜಿಲ್ಲಾಧ್ಯಕ್ಷ ವಿ.ಎಸ್. ಹುದ್ದಾರ, ಎಸ್.ಎನ್. ಸವಣೂರ, ಶಿವಶಂಕರ ಕಲ್ಲೂರ, ಮಲ್ಲನಗೌಡ ಪಾಟೀಲ, ಎನ್.ಎಸ್. ಗೋವಿಂದರೆಡ್ಡಿ, ವಿ.ಎಸ್. ರೇಶ್ಮಿ, ವೀರಣ್ಣ ಶಿರಗುಪ್ಪಿ, ಎನ್.ಎಚ್. ಕಾಳೆ, ವರ್ಧಮಾನ ಕುರಕುರಿ, ಐ.ಎಂ. ಮುಲ್ಲಾ, ಎಂ.ಜಿ. ಕೊಡ್ಲಿ, ಎಸ್.ಆರ್. ಮುರಕಟ್ಟಿ, ವಿ.ಕೆ. ಕುರಕುರಿ, ಬಿ.ಕೆ. ಮಳಗಿ, ಎಸ್.ವಿ. ಪಟ್ಟಣಶೆಟ್ಟಿ, ಪಿ.ಸಿ. ವಲಮಣ್ಣವರ, ಪಿ.ಐ. ಕುಂಬಾರ, ಸಂತೋಷ ಪಾಟೀಲ, ರವಿಕುಮಾರ ಬೆಳಹಾರ, ಎಚ್.ಎನ್. ಕರೆಮ್ಮನವರ, ಜಿ.ಎಸ್. ಗೌಡಪ್ಪನವರ, ಮಹಾದೇವ ಮಾನೆ, ಶಂಕರ ಮರೇದ, ಇತರರು ಇದ್ದರು.