ಜಿಲ್ಲೆ

ಮಾಧ್ಯಮಗಳಿಂದ ಆರೋಗ್ಯ ವ್ಯವಸ್ಥೆ ಸುಧಾರಣೆ

ಚಿತ್ರದುರ್ಗ: ಸಾರ್ವಜನಿಕರೊಂದಿಗೆ ನೇರ ಸಂಪರ್ಕವಿರುವ ಇಲಾಖೆಗಳ ಪೈಕಿ ಹೆಲ್ತ್ ಡಿಪಾರ್ಟ್‌ಮೆಂಟ್ ಅತಿ ಮುಖ್ಯವಾದದು. ಇದರಲ್ಲಿನ ವ್ಯವಸ್ಥೆ ಸುಧಾರಣೆಗೆ ಮಾಧ್ಯಮಗಳ ಸಹಕಾರ ಅಗತ್ಯ ಎಂದು ಜಿಪಂ ಸಿಇಒ ಎಸ್.ಜೆ.ಸೋಮಶೇಖರ್ ಅಭಿಪ್ರಾಯಪಟ್ಟರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವಿವಿಧ ಕಾರ್ಯಕ್ರಮಗಳ ಕುರಿತು ನಗರದ ಐಶ್ವರ್ಯಾ ನವೀನ್ ಹೋಟೆಲ್‌ನಲ್ಲಿ ಜಿಲ್ಲೆಯ ಮಾಧ್ಯಮ ಪ್ರತಿನಿಧಿಗಳಿಗಾಗಿ ಬುಧವಾರ ಆಯೋಜಿಸಿದ್ದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ದೇಶದ ಅಭಿವೃದ್ಧಿ ಸೂಚ್ಯಂಕದಲ್ಲೂ ಗುಣಮಟ್ಟದ ಆರೋಗ್ಯ ಪ್ರಧಾನವಾಗಿದೆ. ಹೀಗಾಗಿ ಆಶಾ ಕಾರ್ಯಕರ್ತೆಯರು, ನರ್ಸ್‌ಗಳು ನಗರ, ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.

ಜಿಲ್ಲೆಯಲ್ಲಿ ಗರ್ಭಿಣಿ-ಬಾಣಂತಿಯರ ಆರೈಕೆ, ತಾಯಿ-ಶಿಶು ಮರಣ ತಗ್ಗಿಸುವುದು, ಲಸಿಕಾಕರಣ, ಸಾಂಕ್ರಮಿಕ ಹಾಗೂ ಮಾರಕ ರೋಗಗಳ ತಡೆ ಮತ್ತು ನಿಯಂತ್ರಣ, ಶಾಲಾ ಮಕ್ಕಳ ಬೆಳವಣಿಗೆ ಹಾಗೂ ಆರೋಗ್ಯ ಬಗ್ಗೆಯೂ ನಿಗಾ ಇರಿಸಲಾಗಿದೆ. ಇದಕ್ಕಾಗಿ ಜಿಲ್ಲಾ ಮಟ್ಟದಲ್ಲಿ ತಜ್ಞ ವೈದ್ಯರ ತಂಡ ಅವಿರತವಾಗಿ ಕರ್ತವ್ಯ ನಿರ್ವಹಿಸುತ್ತಿದೆ ಎಂದು ತಿಳಿಸಿದರು.

ಸೂಕ್ತ ವೈದ್ಯರು, ವೈದ್ಯಕೀಯ ಸಿಬ್ಬಂದಿ ಕೊರತೆಯ ನಡುವೆಯೂ ಸಾಧ್ಯವಾದಷ್ಟು ಉತ್ತಮ ಸೇವೆ ಒದಗಿಸಲಾಗುತ್ತಿದೆ. ಜಿಲ್ಲೆಯಲ್ಲಿ ಮಾಧ್ಯಮಗಳು ಪ್ರಕಟಿಸುವ ವರದಿಗಳನ್ನು ಸಮಚಿತ್ತ ಮನೋಭಾವದಿಂದ ಸ್ವೀಕರಿಸಿ, ಸುಧಾರಣಾ ಕ್ರಮ ಕೈಗೊಳ್ಳುತ್ತಿರುವುದು ಸ್ವಾಗತಾರ್ಹ ಬೆಳವಣಿಗೆ ಎಂದರು.

ಡಿಎಚ್‌ಒ ಡಾ. ರೇಣುಪ್ರಸಾದ್ ಮಾತನಾಡಿ, ಜಿಲ್ಲೆಯ ಮಾಧ್ಯಮಗಳು ಆರೋಗ್ಯ ಇಲಾಖೆಯ ಕುರಿತು ಸಕಾರಾತ್ಮಕ ವರದಿ ನೀಡಿದಾಗ ಕರ್ತವ್ಯದಲ್ಲಿ ಸ್ಪೂರ್ತಿ ಹೆಚ್ಚಲಿದೆ. ಅದೇ ರೀತಿ ನಕಾರಾತ್ಮಕ ವರದಿಗಳನ್ನು ಪ್ರಕಟಿಸಿದಾಗ ಎಚ್ಚೆತ್ತು, ಲೋಪದೋಷಗಳನ್ನು ಸರಿಪಡಿಸಿ ಸಾರ್ವಜನಿಕರಿಗೆ ಉತ್ತಮ ಸೇವೆ ಒದಗಿಸಲು ಸಾಧ್ಯವಾಗುತ್ತಿದೆ ಎಂದರು.

ಜಿಲ್ಲಾ ವಾರ್ತಾಧಿಕಾರಿ ಬಿ.ವಿ.ತುಕಾರಾಂರಾವ್ ಮಾತನಾಡಿ, ಕೋವಿಡ್ ಸಮಯದಲ್ಲಿ ಮಾಧ್ಯಮಗಳು ಸಾಕಷ್ಟು ಸಂಕಷ್ಟ ಎದುರಿಸಿವೆ. ಪತ್ರಕರ್ತರು ಕೂಡ ಮೃತಪಟ್ಟ ನಿದರ್ಶನಗಳಿವೆ. ಯಾವುದೇ ಸಾಂಕ್ರಾಮಿಕ ರೋಗ, ಗಂಭೀರ ಕಾಯಿಲೆಗಳಿರಲಿ ವಸ್ತುಸ್ಥಿತಿ ತಿಳಿಸಬೇಕೆ ಹೊರತು ಸಾರ್ವಜನಿಕರಲ್ಲಿ ಭಯ-ಭೀತಿ ಉಂಟು ಮಾಡಬಾರದು ಎಂದು ಮನವಿ ಮಾಡಿದರು.

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ದಿನೇಶ್ ಬಿ. ಗೌಡಗೆರೆ ಮಾತನಾಡಿ, ಮಾಧ್ಯಮ ಕ್ಷೇತ್ರದಲ್ಲಿ ಪತ್ರಕರ್ತರು ಒತ್ತಡದಲ್ಲಿಯೇ ಕಾರ್ಯನಿರ್ವಹಿಸುತ್ತಾರೆ. ಆರೋಗ್ಯದ ಕುರಿತು ಗಮನ ಹರಿಸುವುದಿಲ್ಲ. ಇದರಿಂದಾಗಿ ಚಿಕ್ಕ ವಯಸ್ಸಿನಲ್ಲಿಯೇ ರೋಗಗಳನ್ನು ಆಹ್ವಾನಿಸಿಕೊಳ್ಳುವ ಪರಿಣಾಮ ಕಳೆದ ವರ್ಷ ರಾಜ್ಯಾದ್ಯಂತ ಬಹಳಷ್ಟು ಪತ್ರಕರ್ತರು ಅಕಾಲಿಕ ಮರಣಕ್ಕೆ ತುತ್ತಾಗಿದ್ದಾರೆ. ಹೀಗಾಗಿ ಆರೋಗ್ಯದ ಕಾಳಜಿಗೂ ಒತ್ತು ನೀಡಬೇಕಿದೆ ಎಂದು ಸಲಹೆ ನೀಡಿದರು.

ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ಅಭಿನವ್, ಇಲಾಖೆಯ ಕಾರ್ಯಕ್ರಮ ಅನುಷ್ಠಾನಾಧಿಕಾರಿಗಳಾದ ಡಾ.ಕಾಶಿ, ಡಾ.ಚಂದ್ರಶೇಖರ್ ಕಂಬಾಳಿ ಮಠ್, ಡಾ. ನಾಗರಾಜ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಕೃಷ್ಣಾನಾಯಕ್, ಸಹಾಯಕ ಆರೋಗ್ಯ ಶಿಕ್ಷಣಾಧಿಕಾರಿ ಮಂಜುನಾಥ್, ಮೂಗಪ್ಪ, ಜಾನಕಿ ಸೇರಿ ಇತರರಿದ್ದರು.