ಜಿಲ್ಲೆ

ಮಾಧ್ಯಮಕ್ಕೆ ಸ್ವಯಂ ನೀತಿ ಸಂಹಿತೆ ಅಗತ್ಯ

ಮೈಸೂರು: ಪತ್ರಿಕೋದ್ಯಮದ ವಾಣಿಜ್ಯೀಕರಣವನ್ನು ತಡೆದು, ಸೇವಾ ಕೇಂದ್ರವಾಗಿ ರೂಪಿಸಬೇಕಾಗಿದೆ ಎಂದು ಹೈಕೋರ್ಟ್ ವಿಶ್ರಾಂತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ ದಾಸ್ ಹೇಳಿದರು.

ನಗರದ ರಾಜೇಂದ್ರ ಕಲಾಮಂದಿರದಲ್ಲಿ ಶನಿವಾರ ಆಯೋಜಿಸಿದ್ದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ದತ್ತಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿ, ಮಾಧ್ಯಮ ನಿಯಂತ್ರಣಕ್ಕೆ ಕಾಯ್ದೆ ಅಗತ್ಯವಿಲ್ಲ. ಇದು ಸದ್ಬಳಕೆಗಿಂತ ದುರ್ಬಳಕೆಯೇ ಆಗಲಿದೆ. ಆದ್ದರಿಂದ ಎಲ್ಲ ಮಾಧ್ಯಮ ಸಂಸ್ಥೆಗಳು ಸ್ವಯಂ ನೀತಿ ಸಂಹಿತೆ ಹಾಕಿಕೊಳ್ಳಬೇಕು. ಕಾಸಿಗಾಗಿ ಸುದ್ದಿ ಮತ್ತು ಪೀತ ಪತ್ರಿಕೋದ್ಯಮ ಸಮಸ್ಯೆಯನ್ನು ಸ್ವಯಂ ಸರಿಪಡಿಸಿಕೊಳ್ಳಬೇಕು ಎಂದರು.

ಮಾಧ್ಯಮ ಜನರ ಧ್ವನಿಯಾಗಿ ಕೆಲಸ ಮಾಡಬೇಕು. ಜನಸಾಮಾನ್ಯರ ಸಂಕಷ್ಟವನ್ನು ಸರ್ಕಾರದ ಗಮನಕ್ಕೆ ತಂದು ಪರಿಹಾರ ಆಗುವಂತೆ ನೋಡಿಕೊಳ್ಳಬೇಕು. ಸರ್ಕಾರ ಮತ್ತು ಜನರ ನಡುವೆ ಸೇತುವೆಯಾಗಿ ಸಮಾಜಮುಖಿ ಕೆಲಸಮಾಡಬೇಕು. ಜತೆಗೆ, ಸರ್ಕಾರದ ಅವ್ಯವಹಾರಗಳನ್ನೂ ಬಯಲು ಮಾಡಬೇಕು ಎಂದರು.

ದೇಶಕ್ಕೆ ಎದುರಾಗಿರುವ ಸಂಕಷ್ಟ ಕಾಲದಲ್ಲಿ ಮಾಧ್ಯಮ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕಿದೆ. ಏನು ಓದಬೇಕು, ಏನು ಮಾಹಿತಿ ಕೊಡಬೇಕು ಎಂಬುದನ್ನು ಮಾಲೀಕರು ನಿರ್ಧರಿಸುವ ಕಾಲದ ಬಂದಿದೆ. ಇಡೀ ಮಾಧ್ಯಮ ಏಕಸ್ವಾಮ್ಯತೆಯತ್ತ ಮುಖ ಮಾಡಿದೆ. ಲೈಂಗಿಕತೆ, ಅಪರಾಧ, ಕೋಮವಾದದ ಸುದ್ದಿಗಳಿಗೆ ಆದ್ಯತೆ ದೊರೆಯುತ್ತಿದೆ. ಜನರಿಗೆ ಅಗತ್ಯವಾದ ಸುದ್ದಿಗಳೇ ಸಿಗುತ್ತಿಲ್ಲ ಎಂದು ಕಳವಳವ್ಯಕ್ತಪಡಿಸಿದರು.

‘ಸಂವಿಧಾನ ಬದಲಿಸುತ್ತೇವೆ’ ಎಂಬಂತಹ ಅಪಸ್ವರ ಇದೀಗ ಹಿಂದೆ ಸರಿದಿದೆ. ಆದರೆ, ಸಂವಿಧಾನವನ್ನೇ ಅಪವ್ಯಾಖ್ಯಾನ ಮಾಡುತ್ತಿದ್ದು, ಅದನ್ನು ಅಪ್ರಸ್ತುಗೊಳಿಸಲಾಗುತ್ತಿದೆ. ಇದನ್ನು ತಿದ್ದುಪಡಿ ಮಾಡಲು ಆಗಲ್ಲ. ಹೀಗಾಗಿ, ಸಂವಿಧಾನವನ್ನೇ ದುರ್ಬಲಗೊಳಿಸಲಾಗುತ್ತಿದೆ ಎಂದು ಬೇಸರವ್ಯಕ್ತಪಡಿಸಿದರು.

‘ಸಂಸತ್ ಸುಪ್ರೀಂ ಆಗಿದ್ದು, ಇದು ಸಂವಿಧಾನ ಸೇರಿದಂತೆ ಎಲ್ಲ ಕಾಯ್ದೆಯನ್ನು ತಿದ್ದುಪಡಿ ಮಾಡಬಹುದು’ ಎಂದು ಉಪರಾಷ್ಟ್ರಪತಿ ಜಗದೀಪ್ ಧನಕರ್ ಹೇಳಿಕೆ ಆತಂಕಕಾರಿ. ಇದೆಲ್ಲ ಪ್ರಜಾಪ್ರಭುತ್ವದಿಂದ ಸರ್ವಾಧಿಕಾರದತ್ತ, ಜಾತ್ಯತೀತೆಯಿಂದ ಕೋಮುವಾದದತ್ತ, ಒಕ್ಕೂಟ ವ್ಯವಸ್ಥೆಯಿಂದ ಅಧಿಕಾರ ಕೇಂದ್ರೀಕರಣದತ್ತ ದೇಶವನ್ನು ತೆಗೆದೊಯ್ಯುವ ಮುನ್ಸೂಚನೆಯಾಗಿದೆ. ಕೇಂದ್ರ ಕಾನೂನು ಸಚಿವರ ಹೇಳಿಕೆಗಳು ನ್ಯಾಯಾಂಗದ ಮೇಲಿನ ದಾಳಿಯಾಗಿದೆ ಎಂದರು ಕಿಡಿಕಾರಿದರು.

ಸಂಸತ್‌ನಲ್ಲಿ ಜನರ ಸಮಸ್ಯೆಗಳು ಚರ್ಚೆಯಾಗುತ್ತಿಲ್ಲ. ಭಾವೋದ್ವೇಗ ವಿಷಯಗಳೇ ಮುನ್ನೆಲೆಗೆ ಬರುತ್ತಿವೆ. ಇಡಿ, ಐಟಿ, ಸಿಬಿಐಯಂತಹ ಸಂಸ್ಥೆಗಳು ಪ್ರತಿಪಕ್ಷಗಳ ನಾಯಕರ ಮೇಲೆ ದಾಳಿ ಮಾಡುತ್ತಿವೆ. ಹೀಗಾದರೆ, ಆಡಳಿತ ಪಕ್ಷದವರು ಸತ್ಯ ಹರಿಶ್ಚಂದ್ರರೇ? ಸರ್ಕಾರದ ಟೀಕಾರರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಿ ವಿಚಾರಣೆ ಇಲ್ಲದೆ ಜೈಲಿಗೆ ಹಾಕಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಮಾಧ್ಯಮ ಕೆಲಸ ಮಹತ್ವವಾಗಿದೆ ಎಂದರು.

ಹಿರಿಯ ಪತ್ರಕರ್ತ ಕೃಷ್ಣಪ್ರಸಾದ್ ಮಾತನಾಡಿ, ಕರ್ನಾಟಕದ ಹೆಸರು ಕೆಳಗಿಳಿಯುತ್ತಿದೆಯೇ? ದಕ್ಷಿಣ ರಾಜ್ಯಗಳಿಗಿಂತ ಕರ್ನಾಟಕ ಹಿಂದೆ ಉಳಿಯುತ್ತಿದೆಯೇ ಎಂಬ ಪ್ರಶ್ನೆಗೆ ಉತ್ತರ ಹುಡುಕಬೇಕಿದೆ. ರಾಜ್ಯ ಸಂಕಷ್ಟದ ದಾರಿಯಲ್ಲಿ ಸಾಗುತ್ತಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ರಾಜ್ಯದ ಮಾಧ್ಯಮದ ಪಾತ್ರ ಏನು? ಇದು ತನ್ನ ಕೆಲಸವನ್ನು ಸರಿಯಾಗಿ ಮಾಡುತ್ತಿದೆಯೇ ಎಂಬುದರ ಕುರಿತು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದರು.

ಚುನಾವಣೆ ಹೊಸ್ತಲಿನಲ್ಲಿರುವ ಮುಂದಿನ 3 ತಿಂಗಳು ರಾಜ್ಯದ ಪಾಲಿಗೆ ಬಹಳ ಮಹತ್ವದ್ದು. ಇದು ರಾಜ್ಯದ ಭವಿಷ್ಯವನ್ನು ಬರೆಯುತ್ತದೆ. ಆದ್ದರಿಂದ ಸುಳ್ಳು ಸುದ್ದಿಗಳನ್ನು ಪರಿಶೀಲನೆ ಮಾಡಬೇಕು. ಸತ್ಯವನ್ನು ಶೋಧಿಸಿ ಬರೆಯಬೇಕು ಎಂದರು.

ದೇಶದಲ್ಲಿ ಪತ್ರಿಕಾ ಸ್ವಾತಂತ್ರೃದ ಸೂಚ್ಯಂಕ 27ರಿಂದ 53, ಅಭಿವ್ಯಕ್ತಿ ಸ್ವಾತಂತ್ರೃದ ಸೂಚ್ಯಂಕ 75ರಿಂದ 119, ಪ್ರಜಾಪ್ರಭುತ್ವದ ಸೂಚ್ಯಂಕ 66ರಿಂದ 79, ಮಾನವ ಅಭಿವೃದ್ಧಿ ಸೂಚ್ಯಂಕ 121ರಿಂದ 134, ಹಸಿವಿನ ಸೂಚ್ಯಂಕ 55ರಿಂದ 140ಕ್ಕೆ, ಇಂಟರ್‌ನೆಟ್ ಸ್ಥಗಿತದ ಸೂಚ್ಯಂಕ 108ರಿಂದ 1ಕ್ಕೆ ಕುಸಿದಿದೆ. ಇದು ದೇಶ ಸಂಕಷ್ಟಕ್ಕೆ ಸಿಲುಕಿರುವುದಕ್ಕೆ ಸಾಕ್ಷಿ. ಇಂತಹ ಕಷ್ಟಕಾಲದಲ್ಲಿ ಮಾಧ್ಯಮ ಹೊಣೆಗಾರಿಕೆಯಿಂದ ಕಾರ್ಯನಿರ್ವಹಿಸಬೇಕು ಎಂದರು.

ಕೆಯುಡಬ್ಲುೃಜೆ ಹೆಸರಿನಲ್ಲಿರುವ ದತ್ತಿ ಪ್ರಶಸ್ತಿಗಳು ಸೇರಿದಂತೆ 28 ಪುರಸ್ಕಾರವನ್ನು ಪತ್ರಕರ್ತರಿಗೆ ಪ್ರದಾನ ಮಾಡಲಾಯಿತು. ಮೇಯರ್ ಶಿವಕುಮಾರ್, ಪತ್ರಕರ್ತ ಜಿ.ಎನ್.ಮೋಹನ್, ಮೈಸೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ.ನಾರಾಯಣಗೌಡ, ಸಂಘದ ಅಧ್ಯಕ್ಷ ಶಿವಾನಂದ ತಗಡೂರು, ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ್, ಮೈಸೂರು ಜಿಲ್ಲಾಧ್ಯಕ್ಷ ಎಸ್.ಟಿ.ರವಿಕುಮಾರ್ ಇತರರು ಇದ್ದರು.