ಬಸವಕಲ್ಯಾಣ: ಮಾಧ್ಯಮಗಳು ಲೋಕಪ್ರಜ್ಞೆ, ಕಾಲಪ್ರಜ್ಞೆ ಜೀವಂತವಾಗಿಟ್ಟಿವೆ. ಸಮಕಾಲಿನ ಬಿಕ್ಕಟ್ಟುಗಳನ್ನು ಪ್ರಜ್ಞಾಪೂರ್ವಕವಾಗಿ ಸ್ಪಂದಿಸುವ ಗುಣ ಮಾಧ್ಯಮಗಳಿಗಿದೆ. ಮುದ್ರಣ ಮಾಧ್ಯಮ ಲೋಕ ವಿಮರ್ಶೆಯ ಬಹು ದೊಡ್ಡ ಮಾದರಿ ಆಗಿದೆ ಎಂದು ಪ್ರಾಚಾರ್ಯ ಡಾ.ಭೀಮಾಶಂಕರ ಬಿರಾದಾರ ಹೇಳಿದರು.
ನಗರದ ಶ್ರೀ ಬಸವೇಶ್ವರ ಪದವಿ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ಮಾಧ್ಯಮ, ಸಮಾಜ ಮತ್ತು ಸ್ವಾತಂತ್ರ್ಯ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿ, ಮುದ್ರಣ ಮಾಧ್ಯಮಗಳು ಸಮಾಜ, ರಾಜಕಾರಣ, ಅರ್ಥವ್ಯವಸ್ಥೆ, ಎಲ್ಲದರ ಕುರಿತು ವಿವೇಚನೆಯಲ್ಲಿ ತೊಡಗಿವೆ ಎಂದರು.
ಸರ್ಕಾರಗಳ ಕಣ್ಣಿಗೆ ಬೀಳದ ಸಮಸ್ಯೆ, ನಿರ್ಲಕ್ಷಿತ ಅಸಂಘಟಿತ ವಲಯಗಳ, ಕೃಷಿಕರ ಸವಾಲು ಸೇರಿ ಹಲವು ಕ್ಷೇತ್ರಗಳು ಎದುರಿಸುತ್ತಿರುವ ಸಮಸ್ಯೆಗೆ ಪರಿಹಾರ ಮಾಧ್ಯಮಗಳಿಂದ ಸಾಧ್ಯ. ಮಾಧ್ಯಮ ಈ ನಿಟ್ಟಿನಲ್ಲಿ ಚುರುಕಾಗಿ ಕಾರ್ಯ ನಿರ್ವಹಿಸಲಿ ಎಂದರು.
ಸಂಸ್ಥೆ ಆಡಳಿತಾಧಿಕಾರಿ ಡಾ.ಮಲ್ಲಿಕಾರ್ಜುನ ಲಕಶೆಟ್ಟೆ ಮಾತನಾಡಿದರು. ಪತ್ರಕರ್ತ ಬಾಲಾಜಿ ಕುಂಬಾರ ವಿಶೇಷ ಉಪನ್ಯಾಸ ನೀಡಿ, ಜನಪರ ಕಾಳಜಿಯೇ ಮಾಧ್ಯಮದ ಜವಾಬ್ದಾರಿ. ಮುದ್ರಣ ಮಾಧ್ಯಮಕ್ಕೆ ನಿಖರತೆ, ಸಾಮಾಜಿಕ ಹೊಣೆಗಾರಿಕೆಯಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ಮತ್ತು ಹೋರಾಟದಲ್ಲಿ ಪತ್ರಿಕೆಗಳು ಮಹತ್ವದ ಪಾತ್ರ ನಿರ್ವಹಿಸಿವೆ ಎಂದರು.
ವಿದ್ಯಾರ್ಥಿಗಳು ಮಾಧ್ಯಮ ಕ್ಷೇತ್ರಕ್ಕೆ ಬರಬೇಕು. ಭಾಷೆ, ಬರಹ ಮತ್ತು ಸಾಮಾಜಿಕ ಪ್ರಜ್ಞೆ ಹಾಗೂ ಕಳಕಳಿಗಳಿಂದ ಉತ್ತಮ ಪತ್ರಕರ್ತನಾಗಲು ಸಾಧ್ಯ. ಪತ್ರಿಕಾ ರಂಗದಲ್ಲಿ ವೃತ್ತಿಪರತೆಯಿಂದ ಹೆಚ್ಚು ಬೆಳೆಯಲು ಸಾಧ್ಯ. ಮೂಲ ಸೌಕರ್ಯ, ಜನರ ಕೊರತೆ ಬಿಂಬಿಸುವ ಕೆಲಸ ಮಾಧ್ಯಮಗಳಿಂದ ನಡೆಯಬೇಕು ಎಂದರು.
ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಮಾರ್ಥಂಡ ಜೋಶಿ ಮಾತನಾಡಿ, ಮಾಧ್ಯಮಕ್ಕೆ ಸಾಮಾಜಿಕ ಬದ್ಧತೆ ಮತ್ತು ಹೊಣೆಗಾರಿಕೆ ಮುಖ್ಯ. ವ್ಯಕ್ತಿಯ ಜ್ಞಾನ ವ್ಯಕ್ತಿತ್ವ ವಿಕಾಸದಲ್ಲಿ ಮಾಧ್ಯಮಗಳ ಪಾತ್ರ ದೊಡ್ಡದು. ವಿದ್ಯಾರ್ಥಿಗಳು ಪತ್ರಿಕೆಗಳನ್ನು, ಪುಸ್ತಕಗಳನ್ನು ಓದುವುದು ರೂಢಿಸಿಕೊಳ್ಳಬೇಕು. ಮೊಬೈಲ್ ಬಳಕೆ ಒಳ್ಳೆಯದಕ್ಕೆ ಆಗಲಿ ಎಂದರು.
ಪತ್ರಕರ್ತ ನಾಗಪ್ಪ ನಿಣ್ಣೆ, ಡಾ.ಶಾಂತಲಾ ಪಾಟೀಲ್, ಶ್ರೀನಿವಾಸ ಉಮಾಪುರೆ, ವಿವೇಕಾನಂದ ಶಿಂಧೆ, ಸಚಿನ ಬಿಡವೆ, ಜಗದೇವಿ ಜವಳಗೆ, ಅಶೋಕರೆಡ್ಡಿ ಗದಲೇಗಾಂವ ಇತರರಿದ್ದರು. ಗಂಗಾಧರ ಸಾಲಿಮಠ ಸ್ವಾಗತಿಸಿದರು. ರೋಶನ್ ಬೀ ವಂದಿಸಿದರು. ಸೌಮ್ಯ ಕರಿಗೌಡ ನಿರೂಪಣೆ ಮಾಡಿದರು.