ಹಾಸನ : ವಿಧಾನಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಲು ಗುರುವಾರ ಕೊನೆಯ ದಿನವಾಗಿದ್ದು, ಹಲವು ಹೊಸ ರಾಜಕೀಯ ಬೆಳವಣಿಗೆಗಳ ಜತೆಗೆ ಹಲವು ಹೈಡ್ರಾಮಾಗಳು ನಡೆದವು. ಹಾಸನದಲ್ಲಿ ದೇವೇಗೌಡರ ಕುಟುಂಬ ಅಬ್ಬರದ ಪ್ರಚಾರ ನಡೆಸಿದ್ದರೆ, ಶಾಸಕ ಹಾಗೂ ಹಾಸನ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರೀತಂ ಗೌಡ ಅವರು ‘ಹೊಳೆನರಸೀಪುರದಲ್ಲಿ ಸ್ಪರ್ಧೆ ಮಾಡುವಂತೆ ದೆಹಲಿ ವರಿಷ್ಠರು ತಂತ್ರ ಹೆಣೆಯುತ್ತಿದ್ದಾರೆ,’ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದರು.
ಗುರುವಾರ ಬೆಳಗ್ಗೆ ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರೀತಂ ಜೆ ಗೌಡ ಅವರು, ‘ಹೊಳೆನರಸೀಪುರದಿಂದ ಸ್ಪರ್ಧೆ ಮಾಡುವ ಬಗ್ಗೆ ದೆಹಲಿಯಲ್ಲಿ ವರಿಷ್ಠರು ತಂತ್ರಗಾರಿಕೆ ಹೆಣೆಯುತ್ತಿದ್ದಾರೆ. ಅವರ ಸೂಚನೆ ನೀಡಿದರೆ ಮಧ್ಯಾಹ್ನ ಹೊಳೆನರಸೀಪುರಕ್ಕೆ ಹೋಗಿ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲಿಸುತ್ತೇನೆ. ಕಾದು ನೋಡುತ್ತಿರಿ,’ ಎಂದು ಹೇಳುವ ಮೂಲಕ ಹೊಸ ಚರ್ಚೆ ಹುಟ್ಟು ಹಾಕಿದ್ದರು.
ಇದರ ಬೆನ್ನಲ್ಲೇ ಹೊಳೆನರಸೀಪುರದ ಬಿಜೆಪಿ ಅಭ್ಯರ್ಥಿ ದೇವರಾಜೇಗೌಡ ಅವರು ಹಾಸನದಲ್ಲಿ ಸುದ್ದಿಗೋಷ್ಠಿ ನಡೆಸಿ, ‘ಪ್ರೀತಂ ಗೌಡ ಅವರು ಹೊಳೆನರಸೀಪುರದಲ್ಲಿ ಸ್ಪರ್ಧೆ ಮಾಡುವುದಾದರೆ ನಾನು ಕ್ಷೇತ್ರ ಬಿಟ್ಟುಕೊಡಲು ಸಿದ್ಧ,’ ಎಂದು ಹೇಳಿದ್ದು ಸಾಕಷ್ಟು ಕುತೂಹಲಗಳಿಗೆ ಎಡೆ ಮಾಡಿಕೊಟ್ಟಿತ್ತು. ಇದಷ್ಟೇ ಅಲ್ಲದೇ, ಬುಧವಾರ ಪ್ರೀತಂ ಗೌಡ ಅವರ ಹೆಂಡತಿ ಎಚ್.ಜಿ. ಕಾವ್ಯಾ ಅವರು ಸಹ ಹಾಸನ ಕ್ಷೇತ್ರದಿಂದ ಸ್ವತಂತ್ರ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡಿದ್ದು ಈ ಎಲ್ಲ ಬೆಳವಣಿಗೆಗಳಿಗೆ ಮತ್ತಷ್ಟು ಇಂಬು ನೀಡುವಂತಿತ್ತು.
ರೇವಣ್ಣಗೆ ಹಾಸನ ಸ್ಪರ್ಧೆಗೆ ಸವಾಲು ಹಾಕಿದ್ದ ಪ್ರೀತಂ!
ಕಳೆದ ಆರು ತಿಂಗಳ ಹಿಂದೆ ಪ್ರೀತಂ ಗೌಡ ಅವರು ‘ಎಚ್.ಡಿ. ರೇವಣ್ಣ ಅವರೇ ಹಾಸನದಲ್ಲಿ ಸ್ಪರ್ಧೆ ಮಾಡಿದರೆ 50 ಸಾವಿರ ಮತಗಳ ಅಂತರದಿಂದ ಗೆಲುವು ದಾಖಲಿಸುತ್ತೇನೆ. ಅದರಲ್ಲಿ ಒಂದು ಮತ ಕಡಿಮೆಯಾದರೂ ರಾಜೀನಾಮೆ ನೀಡುತ್ತೇನೆ,’ ಎಂದು ಸವಾಲು ಹಾಕಿದ್ದರು. ಈ ಹೇಳಿಕೆ ರೇವಣ್ಣ ಕುಟುಂಬದ ಸ್ವಾಭಿಮಾನಕ್ಕೆ ಪೆಟ್ಟು ನೀಡುವಂತೆ ಮಾಡಿತ್ತು. ಹೀಗಾಗಿ ಹಾಸನದಲ್ಲಿ ಸ್ಪರ್ಧೆ ಮಾಡಲು ಸ್ವತಃ ರೇವಣ್ಣ ಅವರ ಪತ್ನಿ ಭವಾನಿ ಅವರು ಮುಂದಾಗಿ ಟಿಕೆಟ್‌ಗೆ ಪಟ್ಟು ಹಿಡಿದಿದ್ದರು. ಒಂದಷ್ಟು ತಿಂಗಳುಗಳ ಕಾಲ ದೇವೇಗೌಡರ ಕುಟುಂಬದಲ್ಲಿ ಈ ವಿಷಯ ದೊಡ್ಡ ಸಂಚಲನವನ್ನೇ ಉಂಟು ಮಾಡಿತ್ತು. ಕೊನೆಗೂ ಭವಾನಿ ಮನವೊಲಿಸಿ ಮಾಜಿ ಶಾಸಕ ದಿ. ಎಚ್.ಎಸ್. ಪ್ರಕಾಶ್ ಅವರ ಮಗ ಎಚ್.ಪಿ. ಸ್ವರೂಪ್ ಅವರಿಗೆ ಹಾಸನ ಟಿಕೆಟ್ ನೀಡಲಾಯಿತು. ಹೀಗಾಗಿ ಎಚ್.ಡಿ. ರೇವಣ್ಣ ವಿರುದ್ಧ ಪ್ರೀತಂ ಗೌಡ ಹೊಳೆನರಸೀಪುರ ಕ್ಷೇತ್ರದಿಂದಲೇ ಸ್ಪರ್ಧೆ ಮಾಡಲು ಮುಂದಾಗಿದ್ದಾರೆಯೇ? ಎಂಬ ಪ್ರಶ್ನೆ ಸಹ ಎಲ್ಲರಲ್ಲೂ ಮೂಡಿತ್ತು.
ಬಿಜೆಪಿ ವರಿಷ್ಠರು ವರುಣಾ ಹಾಗು ಕನಕಪುರದಲ್ಲಿ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರಿಗೆ ಟಕ್ಕರ್ ನೀಡಲು ವಿ. ಸೋಮಣ್ಣ ಹಾಗೂ ಆರ್. ಅಶೋಕ್ ಅವರನ್ನು ಕಣಕ್ಕಿಳಿಸಿದಂತೆ ಜೆಡಿಎಸ್ ಭದ್ರಕೋಟೆಯಾಗಿರುವ ಹೊಳೆನರಸೀಪುರದಲ್ಲಿ ಎಚ್.ಡಿ.ರೇವಣ್ಣ ಅವರ ಗೆಲುವಿನ ಓಟಕ್ಕೆ ಬ್ರೇಕ್ ಹಾಕಲು ಪ್ರೀತಂ ಗೌಡ ಅವರನ್ನು ಕಣಕ್ಕಿಳಿಸಲು ಚಿಂತನೆ ನಡೆಸಿದೆಯಾ? ಎಂಬ ವಾದಗಳೆಲ್ಲಾ ಕೇಳಿಬಂದವು. ಆದರೆ, ಮಧ್ಯಾಹ್ನದ ನಂತರ ಈ ವಿಷಯವಾಗಿ ಯಾವುದೇ ಬೆಳವಣಿಗೆಗಳು ನಡೆಯದೆ ಇದ್ದಾಗ ಬೇರೊಂದು ರೀತಿಯ ಮಾತುಗಳು ಹಾಸನದಲ್ಲಿ ಕೇಳಿಬರಲು ಆರಂಭವಾದವು.
ಜೆಡಿಎಸ್ ವರಿಷ್ಠ ಹಾಗು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ಅನಾರೋಗ್ಯದ ನಡುವೆಯೂ ಗುರುವಾರ ಅರಸೀಕೆರೆ ಹಾಗೂ ಹಾಸನ ಕ್ಷೇತ್ರದಲ್ಲಿ ಬೃಹತ್ ರೋಡ್ ಶೋ ನಡೆಸುವ ಮೂಲಕ ಹಾಸನದ ರಾಜಕೀಯ ಅಖಾಡಕ್ಕೆ ದುಮುಕ್ಕಿದ್ದರು. ಅಷ್ಟೇ ಅಲ್ಲದೇ ದೇವೇಗೌಡರ ಕುಟುಂಬವೇ ಗುರುವಾರ ಹಾಸನದಲ್ಲಿ ಸಾವಿರಾರು ಸಂಖ್ಯೆಯ ಕಾರ್ಯಕರ್ತರೊಂದಿಗೆ ರೋಡ್ ಶೋ ನಡೆಸಿ, ಬಿಜೆಪಿ ಅಭ್ಯರ್ಥಿ ಪ್ರೀತಂ ಗೌಡರಿಗೆ ತಿರುಗೇಟು ನೀಡಿತ್ತು. ಈ ಬೆಳವಣಿಗೆಯ ಪರಿಣಾಮ ತಗ್ಗಿಸಲು ಮಾಧ್ಯಮ ಹಾಗೂ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಪ್ರೀತಂ ಗೌಡ ಅವರು ಹೊಳೆನರಸೀಪುರದಲ್ಲಿ ಸ್ಪರ್ಧೆ ಎಂಬ ಗುಲ್ಲು ಹಬ್ಬಿಸಿದರೆ? ಎಂಬ ಮಾತುಗಳು ಸಹ ಕೇಳಿಬರುತ್ತಿವೆ.