ಆಲೂರು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನಿಕಟಪೂರ್ವ ಅಧ್ಯಕ್ಷ ನಟರಾಜ್ ನಾಕಲಗೂಡು ಸಂಘದ ನಿರ್ಣಯ ಪುಸ್ತಕ ಹಾಗೂ ಇತರ ದಾಖಲಾತಿಗಳನ್ನು ನೂತನ ಅಧ್ಯಕ್ಷ ಪೃಥ್ವಿ ಜಯರಾಮ್ ಗೆ ಹಸ್ತಾಂತರಿಸಿದರು. 
ಜಿಲ್ಲೆ

ಮಾಧ್ಯಮ ಘನತೆ ಹೆಚ್ಚಿಸುವ ಕಾರ್ಯವಾಗಲಿ

ಆಲೂರು: ಪತ್ರಿಕೋದ್ಯಮದಲ್ಲಿ ತೊಡಗಿಕೊಂಡವರಿಗೆ ನೆರವಾಗುವ ಮೂಲಕ ಮತ್ತು ಮಾಧ್ಯಮದ ಘನತೆ ಹೆಚ್ಚಿಸುವ ಕಾರ್ಯ ಸಾಂಘಿಕವಾಗಿ ಆಗಬೇಕು ಎಂದು ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಹೇಳಿದರು.

ಪಟ್ಟಣದ ಅಂಬೇಡ್ಕರ್ ಭವನದಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಭಾನುವಾರ ಆಯೋಜಿಸಿದ್ದ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಆಲೂರು-ಸಕಲೇಶಪುರ ತಾಲೂಕಿನ ಪತ್ರಕರ್ತರ ಕೊಡುಗೆ ಅಪಾರವಾದದ್ದು. ಅದನ್ನು ಮುಂದೆಯೂ ಉಳಿಸಿ ಬೆಳೆಸಬೇಕಾಗಿರುವುದು ಈ ಭಾಗದ ಪತ್ರಕರ್ತರ ಜವಾಬ್ದಾರಿಯಾಗಿದೆ. ಮಾಧ್ಯಮ ಕ್ಷೇತ್ರ ವೇಗವಾಗಿ ಬೆಳೆಯುತ್ತಿದ್ದು, ಎಚ್ಚರಿಕೆಯಿಂದ ಕೆಲಸ ಮಾಡಬೇಕಿದೆ. ತಾಲೂಕಿನಲ್ಲಿ ಪತ್ರಕರ್ತರ ಸಂಘದ ಭವನ ನಿರ್ಮಾಣಕ್ಕೆ ನೂತನ ಅಧ್ಯಕ್ಷರು ಎಲ್ಲ ಸದಸ್ಯರನ್ನು ಒಗ್ಗೂಡಿಸಿಕೊಂಡು ಶ್ರಮಿಸಬೇಕು. ಭವನ ನಿರ್ಮಾಣಕ್ಕೆ ರಾಜ್ಯ ಸಂಘದಿಂದ ಅನುದಾನ ನೀಡುವ ಮೂಲಕ ಸಹಕಾರ ನೀಡಲಾಗುವುದು ಎಂದರು.

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಾಳ್ಳು ಗೋಪಾಲ್ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಮುಖ ಅಂಗವಾಗಿರುವ ಪತ್ರಿಕಾರಂಗದಲ್ಲಿ ಕೆಲಸ ಮಾಡುತ್ತಿರುವ ಪತ್ರಕರ್ತರ ಬದುಕಿನಲ್ಲಿ ಅಭದ್ರತೆ ಕಾಡುತ್ತಿದೆ. ಸಮಾಜಕ್ಕಾಗಿ ಸೇವೆ ಸಲ್ಲಿಸುತ್ತಿರುವ ಪತ್ರಕರ್ತರ ಬದುಕು ಸಹ ಉತ್ತಮವಾಗಬೇಕಾದರೆ ಸಂಘಟನೆ ಅತೀ ಮುಖ್ಯವಾಗಿದೆ ಎಂದರು.

ಸಂಘದ ಮಾಜಿ ಅಧ್ಯಕ್ಷ ರವಿ ನಾಕಲಗೂಡು ಮಾತನಾಡಿ, ಆಲೂರು ಪತ್ರಕರ್ತರ ಸಂಘ ಒಂದು ಮಾದರಿ ಸಂಘವಾಗಿದೆ. ಈ ಸಂಘದಿಂದ ಎಲ್ಲ ಪತ್ರಕರ್ತರಿಗೆ ಅನುಕೂಲವಾಗುವಂತಹ ಕಾರ್ಯಕ್ರಮಗಳನ್ನು ನೂತನ ಪದಾಧಿಕಾರಿಗಳು ನೀಡಬೇಕು. ಏನೇ ಭಿನ್ನಾಭಿಪ್ರಾಯಗಳಿದ್ದರೂ ಅದನ್ನು ಬದಿಗಿಟ್ಟು ಸಂಘದಲ್ಲಿ ಎಲ್ಲರೂ ಒಂದೇ ಎನ್ನುವ ಭಾವನೆ ಹೊಂದಬೇಕು. ಅಧಿಕಾರ ಯಾರಿಗೂ ಶಾಶ್ವತವಲ್ಲ. ಆದರೆ ಅಧಿಕಾರದಲ್ಲಿದ್ದಾಗ ನಾಲ್ಕು ಜನರಿಗೆ ಅನುಕೂಲವಾಗುವಂತಹ ಕಾರ್ಯಕ್ರಮಗಳನ್ನು ಮಾಡಬೇಕು ಎಂದು ತಿಳಿಸಿದರು.

ನೂತನ ಅಧ್ಯಕ್ಷರಿಗೆ ದಾಖಲಾತಿ ಹಸ್ತಾಂತರ: ನಿಕಟಪೂರ್ವ ತಾಲೂಕು ಅಧ್ಯಕ್ಷ ನಟರಾಜ್ ನಾಕಲಗೂಡು ಸಂಘದ ನಿರ್ಣಯ ಪುಸ್ತಕ ಹಾಗೂ ಇತರ ದಾಖಲಾತಿಗಳನ್ನು ನೂತನ ಅಧ್ಯಕ್ಷ ಪೃಥ್ವಿ ಜಯರಾಮ್ಗೆ ಹಸ್ತಾಂತರಿಸುವ ಮೂಲಕ ಜವಾಬ್ದಾರಿ ವಹಿಸಿಕೊಟ್ಟರು.

ಕಾರ್ಯಕ್ರಮದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ವೇಣುಗೋಪಾಲ್, ಮಾಜಿ ಅಧ್ಯಕ್ಷರಾದ ಉದಯಕುಮಾರ್, ಲೀಲಾವತಿ, ರಾಷ್ಟ್ರೀಯ ಮಂಡಳಿಯ ಸದಸ್ಯ ಪ್ರಕಾಶ್, ಹಿರಿಯ ಪತ್ರಕರ್ತರಾದ ಕೆಪಿಎಸ್ ಪ್ರಮೋದ್, ಜೋಸೆಫ್ ಡಿಸೋಜಾ, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಪದಾಧಿಕಾರಿಗಳು ಹಾಗೂ ಸದಸ್ಯರು ಹಾಜರಿದ್ದರು.