ಜಿಲ್ಲೆ

ಮಾದಿಗ ಸಮಾವೇಶಕ್ಕೆ ಸಮುದಾಯದವರು ಪಾಲ್ಗೊಳ್ಳಲಿ

ತಿ.ನರಸೀಪುರ: ಪರಿಶಿಷ್ಟ ಜಾತಿಯ ಒಳಮೀಸಲಾತಿಗೆ ಆಗ್ರಹಿಸಿ ಕ್ರಾಂತಿಕಾರಿ ಹೋರಾಟ ನಿರಂತರವಾಗಿ ನಡೆಯಲಿದೆ. ಜೂನ್ 9ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಮಾದಿಗ ಸಮುದಾಯದ ಸಮಾವೇಶ ಆಯೋಜಿಸಿದ್ದು, ಸಮುದಾಯದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಒಳಮೀಸಲಾತಿ ಹೋರಾಟಗಾರ ಬಿ.ಆರ್.ಭಾಸ್ಕರ್‌ಪ್ರಸಾದ್ ಹೇಳಿದರು.

ತಾಲೂಕಿನ ಬನ್ನೂರು ಪಟ್ಟಣದಲ್ಲಿ ಬುಧವಾರ ಪಾದಯಾತ್ರೆಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಒಳಮೀಸಲು ಜಾರಿ ಮಾಡದೆ, ಒಳ ಮೀಸಲಾತಿಗೆ ಜಾತಿ ಜನಗಣತಿಯ ಮರುಸಮೀಕ್ಷೆ ನೆಪದಲ್ಲಿ ಬ್ಯಾಕ್‌ಲಾಗ್ ಹುದ್ದೆಗಳನ್ನು ಭರ್ತಿ ಮಾಡುವ ಮೂಲಕ ಸಮುದಾಯವನ್ನು ವಂಚಿಸಲು ಮುಂದಾಗಿದೆ ಎಂದು ಆರೋಪಿಸಿದರು.

ಮಲಿಯೂರು ಗ್ರಾಮದಲ್ಲಿ ಒಳ ಮೀಸಲಾತಿ ಹೋರಾಟಗಾರರಿಗೆ ಸ್ವಾಗತವನ್ನು ನೀಡಿದರಲ್ಲದೆ ಸಮುದಾಯದ ಮುಖಂಡರು, ಯುವಕರು ಸೇರಿ ಹೋರಾಟಕ್ಕೆ ದೇಣಿಗೆಯನ್ನು ನೀಡಿದರು. ಮಲಿಯೂರು ಬಳಿಕ ನಂಜಾಪುರ ಹಾಗೂ ಹೆಗ್ಗೂರು ಮಾರ್ಗವಾಗಿ ಮಳವಳ್ಳಿ ತಾಲೂಕಿಗೆ ಪಾದಯಾತ್ರೆ ಸಂಚರಿಸಿತು.

ಏಪ್ರಿಲ್‌ನಲ್ಲಿ ನಡೆದಂತಹ ರಥಯಾತ್ರೆಯ ಸಂದರ್ಭದಲ್ಲಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದ ಬಿ.ಆರ್.ಭಾಸ್ಕರ್‌ಪ್ರಸಾದ್ ವಿರುದ್ಧ ದೂರು ದಾಖಲಾಗಿದ್ದ ಹಿನ್ನೆಲೆಯಲ್ಲಿ ಬನ್ನೂರು ಪೋಲಿಸರು ಭಾಸ್ಕರ್ ಪ್ರಸಾದ್‌ಗೆ ಮಂಗಳವಾರ ನೋಟಿಸ್ ನೀಡಿದ್ದರಿಂದ ಬುಧವಾರ ಠಾಣೆಗೆ ಹಾಜರಾಗಿ ಪೊಲೀಸರ ವಿಚಾರಣೆಗೆ ಹಾಜರಾಗಿದ್ದರು.

ಪುರಸಭೆ ಸದಸ್ಯ ಶಿವಣ್ಣ, ರವಿಕುಮಾರ್, ವಿಜಯಲಕ್ಷ್ಮೀ, ಸ್ವಾಮಿ, ಗೋಪಿ, ಭಾಸ್ಕರ್, ತಾಲೂಕು ಜಗಜೀವನರಾಮ್ ಸಂಘದ ಅಧ್ಯಕ್ಷ ಪುಟ್ಟಯ್ಯ, ಪ್ರಸನ್ನ, ಸುನೀಲ್, ಹನುಮಂತ, ದಸಂಸ ಜಿಲ್ಲಾ ಸಂಚಾಲಕ ಶಂಕರ್, ಮಂಜುನಾಥ್, ನಾರಾಯಣ, ರಾಚಪ್ಪ, ಗ್ರಾಪಂ ಸದಸ್ಯ ಬಾಬು, ರಾಜು, ರಾಜೇಶ್, ಗ್ರಾಪಂ ಮಾಜಿ ಸದಸ್ಯ ದೊಳ್ಳಯ್ಯ, ನಾಗೇಶ್, ಮಹೇಶ್, ಶಿವು, ರಾಜು, ಶಿವಪ್ರಕಾಶ್, ಯ.ಶಿವಣ್ಣ, ಕೆಂಪಯ್ಯ ಇತರರು ಇದ್ದರು.