ಜಿಲ್ಲೆ

ಮಾದಾರ ಚೆನ್ನಯ್ಯರ ವಚನಗಳಲ್ಲಿ ಸಾರ್ವಕಾಲಿಕ ಮೌಲ್ಯ

ಮೈಸೂರು: ಮಾದಾರ ಚೆನ್ನಯ್ಯ ಅವರ ವಚನಗಳು ಪ್ರಗತಿಶೀಲ ಮತ್ತು ವೈಚಾರಿಕತೆಯಿಂದ ಕೂಡಿದೆ ಎಂದು ವಿಶ್ರಾಂತ ಪ್ರಾಧ್ಯಾಪಕ ಡಾ.ಎಸ್.ಶಿವರಾಜಪ್ಪ ಹೇಳಿದರು.

ಮೈಸೂರು ವಿಶ್ವವಿದ್ಯಾಲಯದ ಶ್ರೀ ಬಸವೇಶ್ವರ ಸಾಮಾಜಿಕ ಪರಿಷ್ಕರಣೆ, ಸಂಶೋಧನೆ ಅಧ್ಯಯನ ಹಾಗೂ ವಿಸ್ತರಣಾ ಕೇಂದ್ರದ ವತಿಯಿಂದ ಶೇಷಾದ್ರಿಪುರಂ ಪದವಿ ಕಾಲೇಜಿನಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಮಾದಾರ ಚೆನ್ನಯ್ಯನವರ ವಚನಗಳಲ್ಲಿನ ಚಿಂತನೆಗಳ ಕುರಿತು ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಾದಾರ ಚೆನ್ನಯ್ಯ ಅವರು 12ನೇ ಶತಮಾನದ ಮಹಾನ್ ಶರಣರು. ಅವರು ರಚಿಸಿದ ಕೇವಲ 10 ವಚನಗಳು ದೊರಕಿವೆ. ಆದರೆ, ಆ 10 ವಚನಗಳು ಹತ್ತು ಸಾವಿರ ವಚನಗಳ ಸಾರದ ಸಂದೇಶವನ್ನು ನೀಡುವಂತಹವು. ಅವರ ವಚನಗಳೆಲ್ಲವೂ ಸಾರ್ವಕಾಲಿಕ ಮೌಲ್ಯ ಪ್ರತಿಪಾದಿಸುತ್ತವೆ ಎಂದರು.

ದೇವರನ್ನು ತನ್ನ ಕಾಯಕದಲ್ಲಿ ಕಂಡವರು. ತಮ್ಮ ವಚನಗಳಲ್ಲಿ ವೇದ, ಶಾಸ್ತ್ರ, ಜ್ಯೋತಿಷ್ಯ, ಧರ್ಮವನ್ನು ಧಿಕ್ಕರಿಸಿ ಜನ ಸಂಸ್ಕೃತಿಯನ್ನು ಬೆಳೆಸುವಂತಹ ಸಂದೇಶವನ್ನು ನೀಡಿದರು. ಆ ಕಾಲದಲ್ಲಿ ಸಮಾಜದಲ್ಲಿ ಕಟ್ಟ ಕಡೆಯದೆಂದು ಗುರುತಿಸಿಕೊಂಡಿದ್ದ ಸಕಲ ಜೀವಗಳಿಗೂ ಒಳಿತನ್ನು ಬಯಸಿದವರು. ಇವರ ಎಲ್ಲ ವಚನಗಳು ಪ್ರಗತಿಶೀಲ ವೈಚಾರಿಕತೆಯನ್ನೊಳಗೊಂಡ ವಚನಗಳಾಗಿವೆ ಎಂದು ಹೇಳಿದರು.

ಸಂದರ್ಶಕ ಪ್ರಾಧ್ಯಾಪಕ ಪ್ರೊ.ಅರವಿಂದ ಮಾಲಗತ್ತಿ ಮಾತನಾಡಿ, ರಾಜರ ಆಡಳಿತ ವ್ಯವಸ್ಥೆಯ ಕಾಲಘಟ್ಟದಲ್ಲಿ ಮನುಷ್ಯರನ್ನು ಜಾತಿ ವ್ಯವಸ್ಥೆ ಮೂಲಕ ವಿಭಜಿಸಲಾಗಿತ್ತು. ಇದನ್ನು ಬಸವಾದಿ ಶರಣರು ಪ್ರಶ್ನಿಸಿ, ವರ್ಣ ವ್ಯವಸ್ಥೆಯ ಅತ್ಯಂತ ಕೆಳಸ್ತರದವರ ಹಕ್ಕುಗಳನ್ನು ಪ್ರತಿಪಾದಿಸಿ ತಳ ಸಮುದಾಯದವರ ಒಳಿತಿಗಾಗಿ ಚಳವಳಿ ನಡೆಸಿದರು ಎಂದರು.

ಇಂದು ಅಂತರ್ಜಾತಿ ವಿವಾಹಗಳು ನಡೆದರೆ ಮರ್ಯಾದಾ ಹತ್ಯೆಗಳಾಗುತ್ತವೆ. ಆದರೆ ಬಸವಾದಿ ಶರಣರಿದ್ದ ಈ ನೆಲದಲ್ಲಿದ್ದ ನಾವೇ ಪುಣ್ಯವಂತರು ಎಂದು ನಾವು ಅರಿಯಬೇಕು. ಅವರ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದರು.

ಮೈವಿವಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕಿ ಪ್ರೊ.ಎನ್.ಕೆ. ಲೋಲಾಕ್ಷಿ ಮಾತನಾಡಿ, 12ನೇ ಶತಮಾನದಲ್ಲಿದ್ದ ಕಲುಷಿತ ಸಮಾಜವನ್ನು ಬದಲು ಮಾಡಲಾಯಿತು. ಆದರೆ, ಅದು 21ನೇ ಶತಮಾನದಲ್ಲಿ ಸಮಾಜ ಬದಲಾಗುತ್ತಿಲ್ಲ. ಮತ್ತೆ ಬಸವಾದಿ ಶರಣರ ವಿಚಾರಗಳು ಬರಬೇಕಿದೆ ಎಂದರು.

ಸಾಹಿತ್ಯ ಜಗತ್ತಿನ ಎಲ್ಲ ಜ್ಞಾನಗಳ ತಾಯಿಬೇರು. ಅದನ್ನು ಓದಿದಾಗ ನಮ್ಮ ಜ್ಞಾನಶಿಸ್ತಿಗೆ ಬೇಕಾದ ವಿಷಯ ದೊರೆಯುತ್ತದೆ. ಹೀಗಾಗಿ ವಚನ ಸಾಹಿತ್ಯದೊಂದಿಗೆ ಎಲ್ಲ ಪ್ರಕಾರದ ಸಾಹಿತ್ಯವನ್ನು ಓದಿಕೊಳ್ಳಬೇಕು ಎಂದು ನುಡಿದರು.

ಪ್ರಾಂಶುಪಾಲೆ ಡಾ.ಸೌಮ್ಯಾ ಈರಪ್ಪ ಮಾತನಾಡಿ, ಇತಿಹಾಸದ ಮಹಾತ್ಮರ ಆದರ್ಶ ಮತ್ತು ಮೌಲ್ಯ ಅರಿತುಕೊಳ್ಳಬೇಕು. ಇದರ ಆಧಾರದ ಮೇಲೆ ಬದುಕನ್ನು ರೂಪಿಸಿಕೊಳ್ಳಬೇಕು ಎಂದರು. ಕನ್ನಡ ವಿಭಾಗದ ಮುಖ್ಯಸ್ಥೆ ಡಾ.ಸಿ.ಪಿ.ಲಾವಣ್ಯ, ವಿದ್ಯಾರ್ಥಿ ಸಂಯೋಜಕ ಟಿ.ಆರ್.ಚಿರಂತ್, ಸಹಾಯಕ ಪ್ರಾಧ್ಯಾಪಕ ಬಿ.ಕೆ.ರಶ್ಮಿ ಇನ್ನಿತರರಿದ್ದರು.