ಗದಗ: ಸಮುದಾಯದ ಸಹಭಾಗಿತ್ವದೊಂದಿಗೆ ಜನರಿಗೆ ಲಭ್ಯವಾಗುವ ಹಾಗೂ ಅವರ ಅಗತ್ಯಗನುಸಾರವಾಗಿ ಯೋಜನೆಗಳನ್ನು ಸಿದ್ಧಪಡಿಸಬೇಕು. ದೇಶದಲ್ಲಿಯೇ ರಾಜ್ಯವು ವಿಕೇಂದ್ರೀಕರಣದಲ್ಲಿ ಮುಂಚೂಣಿಯಲ್ಲಿದ್ದು, ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿ ಉಮಾ ಮಹಾದೇವನ್ ಹೇಳಿದರು.
ನಗರದ ಜಿಲ್ಲಾಡಳಿತ ಭವನದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಜಿಲ್ಲಾ ಸಮಗ್ರ ಅಭಿವೃದ್ಧಿ ಯೋಜನೆಯ ಎರಡು ದಿನಗಳ ಕಾರ್ಯಾಗಾರ ಉದ್ದೇಶಿಸಿ ವಿಡಿಯೋ ಕಾನ್ಪರೆನ್ಸ್ನಲ್ಲಿ ಅವರು ಮಾತನಾಡಿದರು.
‘ವೋಕಲ್ ಫಾರ್ ಲೋಕಲ್ ಎಂಬ ದೇಶದ ಪ್ರಧಾನಿಗಳ ಆಶಯದಂತೆ ಸ್ಥಳೀಯವಾಗಿ ಸಿಗುವ ಪ್ರಾಕೃತಿಕ ಹಾಗೂ ಮಾನವಾಭಿವೃದ್ಧಿ ಸಂಪನ್ಮೂಲಗಳನ್ನು ಪರಿಣಾಮಕಾರಿಯಾಗಿ ಸದ್ಬಳಕೆ ಮಾಡಿಕೊಳ್ಳಬೇಕು. ಅಲ್ಲದೆ, ದೇಶಕ್ಕೆ ಮಾದರಿಯಾಗುವಂತಹ ಸಮಗ್ರ ಜಿಲ್ಲಾ ಅಭಿವೃದ್ಧಿ ಯೋಜನಾ ವರದಿ ಸಿದ್ಧಪಡಿಸಬೇಕು’ ಎಂದರು.
ಅಬ್ದುಲ್ ನಜೀರ್ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಸಂಸ್ಥೆಯ (ಎಎನ್ಎಸ್ಎಸ್ಐಆರ್ಡಿ) ನಿರ್ದೇಶಕಿ ಶಿಲ್ಪಾನಾಗ್ ಮಾತನಾಡಿ, ಗ್ರಾಮೀಣ ಮಟ್ಟದಿಂದಲೇ ಯೋಜನಾಭಿವೃದ್ಧಿ ವರದಿ ಸಿದ್ಧಪಡಿಸಬೇಕು. ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ಜನರ ಆದ್ಯತೆ ಮೇರೆಗೆ ಯೋಜನೆಗಳು ಸಿದ್ಧವಾಗುವಂತೆ ಕ್ರಮ ಕೈಗೊಳ್ಳಬೇಕು ಎಂದರು.
ಯೋಜನೆಗಳ ಅನುಷ್ಠಾನದಲ್ಲಿ ಜಿಲ್ಲೆಯಲ್ಲಿ ಲಭ್ಯವಿರುವ ಮಾನವ ಸಂಪನ್ಮೂಲ ಹಾಗೂ ಜನರ ಸಹಕಾರ ಅತಿ ಮುಖ್ಯವಾಗಿದೆ. ಮೊದಲ ಹಂತದಲ್ಲಿ ಗದಗ ಜಿಲ್ಲೆಯಿಂದ ಆರಂಭಿಸಲಾಗಿದ್ದು, ನಂತರ ಮೈಸೂರು ಸೇರಿದಂತೆ ಇನ್ನುಳಿದ ಜಿಲ್ಲೆಗಳಲ್ಲಿ ಹಂತಹಂತವಾಗಿ ಪ್ರಾರಂಭಿಸಲಾಗುವುದು ಎಂದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಆನಂದ್ ಕೆ. ಮಾತನಾಡಿ, ಜಿಲ್ಲೆಯ ಅಭಿವೃದ್ಧಿಗಾಗಿ ಮುಕ್ತವಾಗಿ ರ್ಚಚಿಸಬೇಕು. ಯೋಜನಾ ವರದಿ ಸಿದ್ಧಪಡಿಸುವಾಗ ಉಂಟಾಗುವ ಸಮಸ್ಯೆ ಹಾಗೂ ಸವಾಲುಗಳ ಬಗ್ಗೆ ಹೆಚ್ಚು ನಿಗಾವಹಿಸಬೇಕು ಎಂದರು.
‘ಲೋ ಕಾಸ್ಟ್ ನೋ ಕಾಸ್ಟ್’ ಎಂಬಂತೆ ಕೆಲವು ಯೋಜನೆಗಳಿಗೆ ಮಾತ್ರ ಹಣಕಾಸಿನ ಅವಶ್ಯಕತೆ ಇದ್ದು, ಅಪೌಷ್ಟಿಕ, ಪ್ಲಾಸ್ಟಿಕ್, ವಿಕಲಚೇತನ ಮುಕ್ತ ಗ್ರಾಮ ಹಾಗೂ ಯಾವುದೇ ಮಗು ಶಿಕ್ಷಣ ವಂಚಿತವಾಗದಂತಹ ಯೋಜನಾನುಷ್ಠಾನ ಸೇರಿ ಕೆಲವುಗಳಿಗೆ ಹಣದ ಅಗತ್ಯವಿರುವುದಿಲ್ಲ. ಇಂಥವುಗಳನ್ನು ಗಮನದಲ್ಲಿರಿಸಿಕೊಂಡು ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದರು.
ಕರ್ನಾಟಕ ಪಂಚಾಯತ್ ರಾಜ್ ಪರಿಷತ್ ಉಪಾಧ್ಯಕ್ಷ ಡಿ.ಆರ್. ಪಾಟೀಲ ಮಾತನಾಡಿ, ಜನರ ಬೇಡಿಕೆಗನುಸಾರವಾಗಿ ಯೋಜನೆಗಳು ಸಿದ್ಧವಾಗಬೇಕು. ಜನರ ಅಪೇಕ್ಷೆಗನುಗುಣವಾಗಿ ಅಭಿವೃದ್ಧಿ ಕೆಲಸಗಳು ಆಗಬೇಕು. ಕೋವಿಡ್-19 ಸಂದಿಗ್ಧ ಪರಿಸ್ಥಿತಿಯಲ್ಲೂ ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ಯೋಜನಾ ವರದಿ ಸಿದ್ಧಪಡಿಸುತ್ತಿರುವುದು ಶ್ಲಾಘನೀಯ. ಜಿಲ್ಲಾ ಮಟ್ಟದಲ್ಲಿ ಸಿದ್ಧವಾಗುವ ಯೋಜನಾ ವರದಿಯಲ್ಲಿ ಗ್ರಾಮೀಣ ಜನರ ಬೇಡಿಕೆಗಳನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳುವ ಮೂಲಕ ಜವಾಬ್ದಾರಿಯುತವಾಗಿ ಕರ್ತವ್ಯ ನಿರ್ವಹಿಸೋಣ ಎಂದರು.
ಮೈಸೂರಿನ ಎಎನ್ಎಸ್ಎಸ್ಐಆರ್ಡಿಯ ಡಾ.ಜಿ.ಎಸ್.ಗಣೇಶ ಪ್ರಸಾದ್ ಮಾತನಾಡಿ, ಯೋಜನಾ ವರದಿ ಸಿದ್ಧಪಡಿಸುವಿಕೆಯಲ್ಲಿ ಸಮಗ್ರ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಬೇಕು. ವಿಕೇಂದ್ರಿಕೃತ ಯೋಜನಾ ತಯಾರಿಕೆಗೆ ಸಾಂಸ್ಥಿಕ ಸ್ವರೂಪ ನೀಡಿರುವುದು ಅಭಿವೃದ್ಧಿಗೆ ಸಹಕಾರಿಯಾಗಿದೆ ಎಂದರು.
ಅರಣ್ಯ ಉಪ ಸಂರಕ್ಷಣಾಧಿಕಾರಿ ಸೂರ್ಯಸೇನಾ, ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ಕುಲಸಚಿವ ಬಸವರಾಜ ಲಕ್ಕಣ್ಣವರ ಮಾತನಾಡಿದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷ ರಾಜುಗೌಡ ಕೆಂಚನಗೌಡ್ರ, ಜಿ.ಪಂ. ಉಪ ಕಾರ್ಯದರ್ಶಿ ಕಲ್ಲೇಶ, ಜಿ.ಪಂ. ಮುಖ್ಯ ಯೋಜನಾಧಿಕಾರಿ ಅನ್ನದಾನಿಸ್ವಾಮಿ, ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು, ಎಎನ್ಎಸ್ಎಸ್ಐಆರ್ಡಿ ಹಾಗೂ ಆರ್ಡಿಪಿಆರ್ ಬೋಧಕ ಸಿಬ್ಬಂದಿ ಕಾರ್ಯಾಗಾರದಲ್ಲಿ ಇದ್ದರು.
ಯೋಜನೆಗಳನ್ನು ಜನರ ಬಳಿ ಕೊಂಡೊಯ್ಯಲು ಪ್ರತಿಯೊಬ್ಬರೂ ಶ್ರಮಿಸಬೇಕು. ಸಾಂಸ್ಥಿಕ ಅಭಿವೃದ್ಧಿಯೊಂದಿಗೆ ದೂರದೃಷ್ಟಿ ಗುರಿ ಗಮನದಲ್ಲಿಟ್ಟುಕೊಂಡು ವರದಿ ಸಿದ್ಧಪಡಿಸಬೇಕು. ರಾಜ್ಯದಲ್ಲಿಯೇ ಪ್ರಪ್ರಥಮವಾಗಿ ಗದಗ ಜಿಲ್ಲೆಯಿಂದ ಪ್ರಾರಂಭಿಸಲಾಗಿದ್ದು, ಇಲ್ಲಿ ಸಿದ್ಧವಾಗುವ ಯೋಜನಾ ವರದಿಯೇ ಇನ್ನುಳಿದ ಜಿಲ್ಲೆಗಳಿಗೂ ಅನ್ವಯಿಸಲಿದೆ. ಪ್ರಾಯೋಗಿಕ ಹಾಗೂ ಪಾರದರ್ಶಕ ಯೋಜನಾ ವರದಿ ಸಿದ್ಧಪಡಿಸುವ ಮೂಲಕ ಪ್ರತಿ ಯೋಜನೆಗಳ ಅನುಷ್ಠಾನದಲ್ಲಿ ಸ್ಥಳೀಯರನ್ನು ತೊಡಗಿಸಿಕೊಂಡು ಕಾರ್ಯಕ್ರಮ ಯಶಸ್ವಿಗೊಳಿಸಬೇಕು. | ಉಮಾ ಮಹಾದೇವನ್