ಜಿಲ್ಲೆ

ಮಾದರಿ ನೀತಿ ಸಂಹಿತೆ ಕಟ್ಟುನಿಟ್ಟಾಗಿ ಪಾಲಿಸಿ

ಬಾಗಲಕೋಟೆ: ಲೋಕಸಭಾ ಚುನಾವಣೆ-2024 ಹಿನ್ನಲೆಯಲ್ಲಿ ಜಾರಿಯಾದ ಮಾದರಿ ನೀತಿ ಸಂಹಿತೆಯನ್ನು ಎಲ್ಲ ರಾಜಕೀಯ ಪಕ್ಷಗಳು ಕಟ್ಟುನಿಟ್ಟಾಗಿ ಪಾಲಿಸುವಂತೆ ಜಿಲ್ಲಾಧಿಕಾರಿಗಳು ಆಗಿರುವ ಜಿಲ್ಲಾ ಚುನಾವಣಾಧಿಕಾರಿ ಜಾನಕಿ ಕೆ.ಎಂ ತಿಳಿಸಿದರು.

ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿಂದು ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ರಾಜ್ಯದಲ್ಲಿ ಎರಡು ಹಂತದಲ್ಲಿ ಚುನಾವಣೆ ನಡೆಯಲಿದ್ದು, ಅದರಲ್ಲಿ ಎರಡನೇ ಹಂತದಲ್ಲಿ ಬಾಗಲಕೋಟೆ ಲೋಕಸಭಾ ಚುನಾವಣೆ ಜರುಗಲಿದೆ. ಈ ಹಿನ್ನಲೆಯಲ್ಲಿ ಚುನಾವಣಾ ಆಯೋಗವು ಜಾರಿಗೊಳಿಸಿದ ಮಾದರಿ ನೀತಿ ಸಂಹಿತೆಯನ್ನು ತಪ್ಪದೇ ಪಾಲಿಸುವಂತೆ ಸೂಚನೆ ನೀಡಿದರು.

ಚುನಾವಣಾ ವೇಳಾ ಪಟ್ಟಿಯಂತೆ ಎಪ್ರೀಲ್ 12 ರಂದು ಚುನಾವಣೆಗೆ ಅಧಿಸೂಚನೆ ಹೊರಡಿಸಲಾಗುತ್ತಿದೆ. ನಾಮಪತ್ರ ಸಲ್ಲಿಕೆಗೆ ಎಪ್ರೀಲ್ 19 ಕೊನೆಯ ದಿನವಾಗಿದೆ. ಎಪ್ರೀಲ್ 20 ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, ಎಪ್ರೀಲ್ 22 ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿರುತ್ತದೆ. ಮತದಾನ ಮೇ 7 ರಂದು ನಡೆಯಲಿದ್ದು, ಮತ ಎಣಿಕೆ ಜೂನ್ 4 ರಂದು ನಡೆಸಲಾಗುತ್ತಿದೆ. ನೀತಿ ಸಂಹಿತೆಯು ಜೂನ್ 6ಕ್ಕೆ ಮುಕ್ತಾಯಗೊಳ್ಳಲಿದೆ ಎಂದು ತಿಳಿಸಿದರು.

ಅಭ್ಯರ್ಥಿಗಳು ಹಾಗೂ ರಾಜಕೀಯ ಪಕ್ಷದವರು ಸಭೆ, ರ್ಯಾಲಿ, ವಾಹನಗಳಿಗೆ, ತಾತ್ಕಾಲಿಕ ಪಕ್ಷದ ಕಚೇರಿಗೆ, ಧ್ವನಿವರ್ಧಕಗಳಿಗೆ, ಹೆಲಿಪ್ಯಾಡ ಹಾಗೂ ಹೆಲಿಕ್ಯಾಪ್ಟರ ಪರವಾನಿಗೆ ಕೋರಿ ಸುವಿಧಾ ಅಡಿ ಅರ್ಜಿ ಸಲ್ಲಿಸಿ ಅನುಮತಿ ಪಡೆಯಬಹುದಾಗಿದೆ. ಮ್ಯಾನುವಲ್ ಅರ್ಜಿಗಳಿಗೆ ಅವಕಾಶವಿರುವದಿಲ್ಲ ಎಂದರು.
ಭಾರತ ಚುನಾವಣಾ ಆಯೋಗವು ಸಿವಿಜಿಲ್ ಮೊಬೈಲ್ ಆಪ್‍ನ್ನು ಪ್ರಾರಂಭಿಸಿದ್ದು, ಇದರಲ್ಲಿ ಯಾವುದೇ ವ್ಯಕ್ತಿಯ ಚುನಾವಣೆಗೆ ಸಂಬಂಧಿಸಿದಂತೆ ದೂರುಗಳನ್ನು ಸಲ್ಲಿಸಲು ಅವಕಾಶವಿದೆ. ಸದರಿ ಆಪ್ ಮೂಲಕ ಬಂದ ದೂರುಗಳ ಬಗ್ಗೆ ಮಾದರಿ ನೀತಿ ಸಂಹಿತೆ ತಂಡಕ್ಕೆ ಆನ್‍ಲೈನ್ ಮುಖಾಂತರ ತಿಳಿಸುವದರ ಜೊತೆಗೆ ನಿಗದಿಪಡಿಸಿದ ಸಮಯದೊಳಗೆ ಕ್ರಮ ಜರುಗಿಸಲಾಗುತ್ತದೆ. ಮುಕ್ತ, ನ್ಯಾಯಸಮ್ಮತ ಚುನಾವಣೆ ನಡೆಸಲು ಸಹಕರಿಸಲು ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ, ಯುಕೆಪಿ ಮಹಾವ್ಯವಸ್ಥಾಪಕ ರಮೇಶ ಕಳಸದ, ಅಪರ ಜಿಲ್ಲಾಧಿಕಾರಿ ಪರಶುರಾಮ ಶಿನ್ನಾಳಕರ ಸೇರಿದಂತೆ ವಿವಿಧ ರಾಜಕೀಯ ಪಕ್ಷದ ಪ್ರತಿನಿಧಿಗಳು ಉಪಸ್ಥಿತರಿದ್ದರು.