ಜಿಲ್ಲೆ

ಮಾದರಿ ನೀಡಲು ಇಡೀ ದಿನ ನಿಂತರು !

ಚಿಂತಾಮಣಿ : ಇಲ್ಲಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಜನರ ಗಂಟಲು ದ್ರವ ಮಾದರಿ ಸಂಗ್ರಹ ವಿಳಂಬ, ಪರಸ್ಪರ ಅಂತರ ಕಾಪಾಡಿಕೊಳ್ಳುವ ನಿಯಮ ಉಲ್ಲಂಘನೆಯು ಆತಂಕಕ್ಕೆ ಕಾರಣವಾಗಿದೆ.

ತಾಲೂಕಿನಲ್ಲಿ ಕರೊನಾ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿಗಳ ಸಂಖ್ಯೆ ಏರಿಕೆಯಾಗುತ್ತಿದ್ದು, ಹಲವರು ಪರೀಕ್ಷೆಗಾಗಿ ಆಸ್ಪತ್ರೆಗೆ ಬಂದು ಗಂಟಲು ದ್ರವ ಮಾದರಿಯನ್ನು ಪರೀಕ್ಷೆಗೆ ನೀಡುತ್ತಿದ್ದಾರೆ.ಆದರೆ ಈ ವೇಳೆ ಪರಸ್ಪರ ಅಂತರವಿಲ್ಲದೇ ಗುಂಪಿನಲ್ಲಿ ಕೂರುವುದು, ಸರದಿ ಸಾಲಿನಲ್ಲಿ ಗಂಟೆಗಟ್ಟಲೇ ನಿಂತಿರುವ ದೃಶ್ಯಗಳು ಕಂಡು ಬರುತ್ತಿವೆ.

ಸಾರ್ವಜನಿಕ ಆಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆಯಿದ್ದು ಮಾದರಿ ಸಂಗ್ರಹ ತ್ವರಿತಗತಿಯಲ್ಲಿ ನಡೆಯುತ್ತಿಲ್ಲ. ಮತ್ತೊಂದೆಡೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಜಮಾಯಿಸುತ್ತಿರುವುದರಿಂದ ನಿಯಮಗಳ ಉಲ್ಲಂಘಟನೆಯಾಗುತ್ತಿದೆ. ಇದರ ನಡುವೆ ಗಾಳಿ, ಬಿಸಿಲು ಮಳೆಯಲ್ಲಿ ಅಂಗವಿಕಲರು, ವೃದ್ಧರ ಮತ್ತು ಗರ್ಭಿಣಿಯರ ಪಾಡು ಹೇಳತೀರದು.