ಜಿಲ್ಲೆ

ಮಾದರಿ ನಗರವನ್ನಾಗಿಸಲು ಎಲ್ಲರ ಸಹಕಾರ ಅಗತ್ಯ

ಕಾರವಾರ: ನಗರವನ್ನು ಮಾದರಿಯಾಗಿ ಮಾಡಲು ಎಲ್ಲರ ಸಹಕಾರ ಬೇಕು ಎಂದು ಶಾಸಕಿ ರೂಪಾಲಿ ನಾಯ್ಕ ಮನವಿ ಮಾಡಿದರು.

ಇಲ್ಲಿನ ನಗರಸಭೆಯ ವಿವಿಧ ಕಾಮಗಾರಿಗಳನ್ನು ಬುಧವಾರ ಉದ್ಘಾಟಿಸಿ, ಭೂಮಿ ಪೂಜೆ ನೆರವೇರಿಸಿ, ಅವರು ಮಾತನಾಡಿದರು.

ಶಾಸಕಿಯಾಗಿ ಅನುದಾನ ತರಬಹುದು, ಆದರೆ, ಅಭಿವೃದ್ಧಿ ಕಾರ್ಯಗಳು ಯಶಸ್ವಿಯಾಗಲು ಎಲ್ಲರ ಸಹಕಾರ ಅಗತ್ಯ. ಉತ್ತಮ ಸದಸ್ಯರು ಸಿಕ್ಕಿದ್ದಾರೆ. ಅಧಿಕಾರಿಗಳಿದ್ದಾರೆ. ಜನರ ಸಹಕಾರದಿಂದ ಕಾರವಾರವನ್ನು ಸ್ವಚ್ಛ, ಸುಂದರ, ಮಾದರಿ ನಗರ ಮಾಡಬೇಕು ಎಂಬುದು ನಮ್ಮ ಇಚ್ಛೆಯಾಗಿದೆ ಎಂದರು.

ನಗರಸಭೆ ಇಇ ಆರ್.ಪಿ.ನಾಯ್ಕ ಮಾತನಾಡಿ, ಸದ್ಯ ಎರಡು ಉದ್ಯಾನಗಳಲ್ಲಿ ಜಿಮ್ ಉದ್ಘಾಟಿಸಿದ್ದು, ಅವುಗಳನ್ನು ನಿಬಂಧನೆಗೆ ಒಳಪಟ್ಟು ಬಳಕೆ ಮಾಡಲು ಸರ್ಕಾರ ಅನುಮತಿ ನೀಡಿದೆ. ಸಾರ್ವಜನಿಕರು ಅದನ್ನು ಬಳಸಬಹುದು ಎಂದರು. ಜುಲೈ ಮೊದಲ ವಾರದಲ್ಲಿ ನಗರಸಭೆ ಕಚೇರಿಯನ್ನು ಹೊಸ ಕಟ್ಟಡಕ್ಕೆ ಸ್ಥಳಾಂತರಿಸಲಾಗುವುದು ಎಂದು ತಿಳಿಸಿದರು. ನಗರಸಭೆ ಸದಸ್ಯ ಡಾ.ನಿತಿನ್ ಪಿಕಳೆ ಅಧ್ಯಕ್ಷತೆ ವಹಿಸಿದ್ದರು. ಪ್ರಭಾರ ಪೌರಾಯುಕ್ತೆ ಪ್ರಿಯಾಂಗಾ ಎಂ., ಎಲ್ಲ ಸದಸ್ಯರು, ಬಿಜೆಪಿ ಮುಖಂಡರು ಇದ್ದರು.

ವಿವಿಧ ಕಾಮಗಾರಿಗೆ ಚಾಲನೆ: ನಗರಸಭೆ ನಿರ್ಮಾಣ ಹಂತದ ಕಟ್ಟಡದ ಹಿಂದುಗಡೆ 14 ನೇ ಹಣಕಾಸು ನಿಧಿಯಲ್ಲಿ 39 ಲಕ್ಷ ರೂ. ವೆಚ್ಚದಲ್ಲಿ 12 ವಾಣಿಜ್ಯ ಮಳಿಗೆಗಳ ನಿರ್ವಣ, 18 ಲಕ್ಷ ರೂ. ವೆಚ್ಚದಲ್ಲಿ ಹೈಟೆಕ್ ಶೌಚಗೃಹ ನಿರ್ವಣ, ಈಜುಕೊಳ ಹಿಂದುಗಡೆ 20 ಲಕ್ಷ ರೂ. ವೆಚ್ಚದಲ್ಲಿ ಹೂವು, ಹಣ್ಣಿನ ಮಾರುಕಟ್ಟೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು. ಗಾಂಧಿನಗರದಲ್ಲಿ 2017-18 ನೇ ಸಾಲಿನ ಎಸ್​ಎಫ್​ಸಿ ಮೀಸಲು 10 ಲಕ್ಷ ರೂ. ವೆಚ್ಚದಲ್ಲಿ ನಿರ್ವಣವಾದ ಸಭಾಭವನ, ಹಬ್ಬುವಾಡ ಹಾಗೂ ನಗರಸಭೆ ಕಚೇರಿ ಪಕ್ಕದ ಉದ್ಯಾನದಲ್ಲಿ 16 ಲಕ್ಷ ರೂ. ವೆಚ್ಚದ ಓಪನ್ ಜಿಮ್ಳನ್ನು, ನಗರಸಭೆ ಎದುರು 9 ಲಕ್ಷ ರೂ.ಗಳ ಶುದ್ಧ ಕುಡಿಯುವ ನೀರಿನ ಘಟಕ, ಕಾರವಾರ-ಕೋಡಿಬಾಗ ರಸ್ತೆಯಲ್ಲಿ ಅಳವಡಿಸಿದ 33 ಲಕ್ಷ ರೂ.ಗಳ ಸೊಲಾರ್ ಎಲ್​ಇಡಿ ದೀಪಗಳನ್ನು ಶಾಸಕಿ ರೂಪಾಲಿ ನಾಯ್ಕ ಉದ್ಘಾಟಿಸಿದರು.