ಜಿಲ್ಲೆ

ಮಾದರಿ ನಗರ ನಿರ್ಮಾಣಕ್ಕೆ ಆದ್ಯತೆ; ಸಚಿವ ಡಾ.ಕೆ.ಸುಧಾಕರ್

ಚಿಕ್ಕಬಳ್ಳಾಪುರ : ಜಿಲ್ಲಾ ಕೇಂದ್ರದಲ್ಲಿ ಉತ್ತಮ ರಸ್ತೆಗಳ ನಿರ್ಮಾಣದ ಮೂಲಕ ಸುಂದರ ಮಾದರಿ ನಗರವನ್ನಾಗಿ ಮಾಡಲು ಆದ್ಯತೆ ನೀಡಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.

ನಗರದಲ್ಲಿ ಗುರುವಾರ ವಿವಿಧ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ನಗರವು ತ್ವರಿತವಾಗಿ ಅಭಿವೃದ್ಧಿ ಹೊಂದುತ್ತಿದೆ. ಇದನ್ನು ಸುಂದರ ನಗರವನ್ನಾಗಿಸುವ ನಿಟ್ಟಿನಲ್ಲಿ ಗ್ರಾಮೀಣ ಭಾಗದಿಂದ ನಗರಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಗಳನ್ನು ಉತ್ತಮ ಗುಣಮಟ್ಟದ ಕಾಂಕ್ರಿಟ್ ರಸ್ತೆಗಳನ್ನಾಗಿ ಪರಿವರ್ತಿಸಲಾಗುತ್ತಿದೆ ಎಂದರು.

ನಂದಿ, ಮುಸ್ಟೂರು, ಮೈಲಪ್ಪನಹಳ್ಳಿ ಮತ್ತು ಮಂಚನಬಲೆ ಮಾರ್ಗವಾಗಿ ನಗರವನ್ನು ಸಂಪರ್ಕಿಸುವ ರಸ್ತೆಗಳ ಅಭಿವೃದ್ಧಿ, ರಸ್ತೆ ಇಕ್ಕೆಲಗಳಲ್ಲಿ ಚರಂಡಿ ನಿರ್ಮಾಣಕ್ಕೆ ಅಗತ್ಯ ಅನುದಾನವನ್ನು ಬಿಡುಗಡೆಗೊಳಿಸಲಾಗಿದೆ. ನಗರದ ಕೃಷ್ಣಾ ಟಾಕೀಸ್ ಮುಂಭಾಗದಲ್ಲಿ ಐಡಿಎಸ್‌ಎಂಟಿ ಯೋಜನೆಯಡಿ ನೂತನ 13 ಮಳಿಗೆಗಳನ್ನು ನಿರ್ಮಿಸಲಾಗಿದೆ. ಇದರಿಂದ ನಗರಸಭೆಗೆ ಒಳ್ಳೆಯ ಆದಾಯ ಸಿಗಲಿದೆ. ಇದಕ್ಕೆ ವಾರದೊಳಗೆ ಹರಾಜು ಕರೆದು, ಬಾಡಿಗೆಗೆ ನೀಡಲು ಅಧಿಕಾರಿಗಳಿಗೆ ಈಗಾಗಲೇ ಸೂಚಿಸಲಾಗಿದೆ ಎಂದರು.

ಜಿಲ್ಲಾಧಿಕಾರಿ ಆರ್.ಲತಾ, ಜಿಪಂ ಸಿಇಒ ಪಿ.ಶಿವಶಂಕರ್, ಉಪ ವಿಭಾಗಾಧಿಕಾರಿ ಜಿ.ಸಂತೋಷ್ ಕುಮಾರ್, ತಹಸೀಲ್ದಾರ್ ಗಣಪತಿ ಶಾಸ್ತ್ರಿ, ರಾಜ್ಯ ಮಾವು ಅಭಿವೃದ್ಧಿ ನಿಗಮದ ಅಧ್ಯಕ್ಷ ಕೆ.ವಿ.ನಾಗರಾಜು, ನಗರಸಭೆ ಅಧ್ಯಕ್ಷ ಡಿ.ಎಸ್.ಆನಂದರೆಡ್ಡಿ ಬಾಬು, ಪೌರಾಯುಕ್ತ ಮಹಾಂತೇಶ್ ಮತ್ತಿತರರು ಇದ್ದರು.

ಡಿಜಿಟಲ್ ಪಾವತಿ ಕೇಂದ್ರ ಉದ್ಘಾಟನೆ: ನಗರಸಭೆ ಕಚೇರಿ ಆವರಣದಲ್ಲಿ ಬ್ಯಾಂಕ್ ಆಫ್ ಬರೋಡಾ ಸಹಯೋಗದೊಂದಿಗೆ ಡಿಜಿಟಲ್ ಪಾವತಿ ನೂತನ ಕೇಂದ್ರ ಕಾರ್ಯಾರಂಭಕ್ಕೆ ಚಾಲನೆ ನೀಡಲಾಗಿದೆ. ನಗರಸಭಾ ಸದಸ್ಯೆ ನೇತ್ರಾವತಿ ನಗರಸಭೆಯಲ್ಲಿ ಹಣ ಸ್ವೀಕಾರಕ್ಕೆ ಸಂಬಂಧಿಸಿದಂತೆ ಡಿಜಿಟಲ್ ಬ್ಯಾಂಕಿಂಗ್ ವ್ಯವಸ್ಥೆಗೆ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಡಳಿತ, ನಗರಾಭಿವೃದ್ಧಿ ಕೋಶಕ್ಕೆ ಒತ್ತಾಯಿಸಿದ್ದರು. ಇದರ ನಡುವೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯ ಡಿಜಿಟಲ್ ಬ್ಯಾಂಕಿಂಗ್ ವ್ಯವಸ್ಥೆಯ ಕನಸಿನ ಯೋಜನೆಗೆ ಪೂರಕವಾಗಿ ಬ್ಯಾಂಕ್ ಆಫ್ ಬರೋಡಾದೊಂದಿಗೆ ಒಪ್ಪಂದ ಮಾಡಿಕೊಂಡು ಡಿಜಿಟಲ್ ಬ್ಯಾಂಕಿಂಗ್ ಶಾಖೆಯನ್ನು ಪ್ರಾರಂಭಿಸಲಾಗಿದೆ. ಇಲ್ಲಿ ಡಿಜಿಟಲ್ ಕಾರ್ಡ್ ಮತ್ತು ಸ್ವೈಪಿಂಗ್ ವ್ಯವಸ್ಥೆ ಇದೆ. ಇದರಿಂದ ಹಣ ಪಾವತಿಗೆ ಸಾಲಿನಲ್ಲಿ ನಿಲ್ಲುವಿಕೆ ಸೇರಿ ನಾನಾ ಸಮಸ್ಯೆಗಳು ಬಗೆಹರಿಯಲಿವೆ.

2 ಕೋಟಿ ರೂ.ವೆಚ್ಚದಲ್ಲಿ ಆಸ್ಪತ್ರೆ : ತಾಲೂಕಿನ ಹೊನ್ನೇನಹಳ್ಳಿ ಸಮೀಪ ಜಿಲ್ಲಾ ಪಾಲಿಕ್ಲಿನಿಕ್ ಆಸ್ಪತ್ರೆ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಲಾಯಿತು. ಈಗಾಗಲೇ ಜಿಲ್ಲಾಡಳಿತವು ಸುಸಜ್ಜಿತ ಆಸ್ಪತ್ರೆಗೆ 1.20 ಎಕರೆ ಜಾಗವನ್ನು ಮಂಜೂರು ಮಾಡಿದ್ದು, 2 ಕೋಟಿ ಅನುದಾನ ಬಿಡುಗಡೆಯಾಗಿದೆ. ಸುಸಜ್ಜಿತ ಪ್ರಯೋಗಾಲಯ, ಪ್ರಾಣಿಗಳ ತುರ್ತುಚಿಕಿತ್ಸೆಗಾಗಿ ಆಂಬುಲೆನ್ಸ್ ಸೇವೆ ಹಾಗೂ ತಜ್ಞ ಪಶು ವೈದ್ಯರಿಂದ ಜಾನುವಾರುಗಳಿಗೆ ಚಿಕಿತ್ಸೆ ನೀಡಲು ಅಗತ್ಯ ವ್ಯವಸ್ಥೆ ಯೋಜನೆ ರೂಪಿಸಲಾಗಿದೆ.

ವಿವಿಧ ಕಾಮಗಾರಿಗೆ ಚಾಲನೆ : ನಗರದ ಬುದ್ಧ ವೃತ್ತದಿಂದ ಮೈಲಪ್ಪನಹಳ್ಳಿ ಮಾರ್ಗ, ಕೆಎಸ್‌ಆರ್‌ಟಿಸಿ ಡಿಪೋದಿಂದ ಮುಸ್ಟೂರು ಮಾರ್ಗ, ಬಿ.ಬಿ.ರಸ್ತೆಯಿಂದ ಬೈಪಾಸ್ ರಸ್ತೆವರೆಗಿನ ಮಂಚನಬಲೆ ಮಾರ್ಗದಲ್ಲಿ ಸಿ.ಸಿ.ರಸ್ತೆ ಮತ್ತು ಚರಂಡಿ ನಿರ್ಮಾಣ, ತುಮಕಲಹಳ್ಳಿಯಲ್ಲಿ ಚಿಕ್ಕಬಳ್ಳಾಪುರ ನಗರಾಭಿವೃದ್ಧಿ ಪ್ರಾಧಿಕಾರದ ಕಟ್ಟಡದ ನೆಲ ಅಂತಸ್ತು ಮತ್ತು ಒಂದನೇ ಅಂತಸ್ತು ನಿರ್ಮಾಣ ಕಾಮಗಾರಿಗೆ ಸಚಿವರು ಭೂಮಿ ಪೂಜೆ ನೆರವೆರಿಸಿದರು.