ಆಲಮೇಲ: ದಶಕಗಳ ಹೋರಾಟದ ನಂತರ ದಿ. ಎಂ.ಸಿ. ಮನಗೂಳಿಯವರ ಪ್ರಯತ್ನದ ಫಲವಾಗಿ ಆಲಮೇಲ ತಾಲೂಕು ಕೇಂದ್ರವಾಗಿದೆ. ಇದು ಇನ್ನು ಬಹಳಷ್ಟು ಅಭಿವೃದ್ಧಿ ಹೊಂದಬೇಕಿದೆ. ಅದಕ್ಕಾಗಿ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳ ನೇತೃತ್ವದಲ್ಲಿ ಸಭೆಗಳನ್ನು ನಡೆಸಿ ಪಟ್ಟಣದ ಅಭಿವೃದ್ಧಿಗೆ ಅವಶ್ಯಕ ಅನುದಾನ ತಂದು ಮಾದರಿಯಾಗಿ ಅಭಿವೃದ್ಧಿಪಡಿಸುವ ಗುರಿ ಹೊಂದಿದ್ದೇನೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ಪಪಂ ಕಚೇರಿಯಲ್ಲಿ ಶನಿವಾರ ಆಯೋಜಿಸಿದ್ದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸದ್ಯ ಪಟ್ಟಣದಲ್ಲಿ ಸಾಕಷ್ಟು ಸ್ಲಂ ಬಡಾವಣೆಗಳಿವೆ. ಆದರೆ ಸ್ಲಂ ಪ್ರದೇಶವೆಂದು ಘೋಷಣೆಯಾಗಿಲ್ಲ. ಪಟ್ಟಣದಲ್ಲಿನ ಸ್ಲಂಗಳನ್ನು ಸರ್ಕಾರದ ಮಟ್ಟದಲ್ಲಿ ಅಧಿಕೃತವಾಗಿ ಘೋಷಿಸಿ ಅಭಿವೃದ್ಧಿಗೆ ಅನುದಾನ ತರಲಾಗುವುದು. ನೆನೆಗುದಿಗೆ ಬಿದ್ದ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುವುದು ಎಂದರು.
ಸರ್ಕಾರದ ವಿಶೇಷ ಅನುದಾನದಡಿ 20ಕೋಟಿ ಮೊತ್ತದಲ್ಲಿ ಪಟ್ಟಣದ ಕಲಬುರ್ಗಿ ರಸ್ತೆಯ ಬಡದಾಳ ಪೆಟ್ರೋಲ್ ಪಂಪ್‌ನಿಂದ ಇಂಡಿ ರಸ್ತೆಯ ಪ್ರವಾಸಿಮಂದಿರದವರೆಗೆ ಸಿಸಿ ರಸ್ತೆ ಹಾಗೂ ಬೀದಿದೀಪಗಳನ್ನು ಅಳವಡಿಸಲು ಲೋಕೋಪಯೋಗಿ ಇಲಾಖೆಯ ವತಿಯಿಂದ ಅಂದಾಜು ಪ್ರತಿ ತಯಾರಿಸಲಾಗಿದೆ. ಶೀಘ್ರದಲ್ಲಿ ಟೆಂಡರ್ ಕರೆದು ಕೆಲಸ ಆರಂಭಿಸಲಾಗುವುದು. ಸಾರ್ವಜನಿಕರ ಅನುಕೂಲಕ್ಕಾಗಿ ಬೇಕಾಗುವ ಮೂಲ ಸೌಲಭ್ಯಗಳನ್ನು ಒದಗಿಸುವಂತೆ ಈಗಾಗಲೇ ಪುರಸಭೆ, ಪಪಂ, ಗ್ರಾಪಂಗಳಿಗೆ ಸರ್ಕಾರದಿಂದ ಸಾಕಷ್ಟು ಅನುದಾನ ಕೊಡಲಾಗುತ್ತಿದೆ ಎಂದರು.
ತಹಸೀಲ್ದಾರ್ ಸುರೇಶ ಚಾವಲರ, ಪಿಡಬ್ಲುೃಡಿ ಎಇಇ ತಾರಾನಾಥ ರಾಠೋಡ್, ಪಿಎಸ್‌ಐ ಕುಮಾರ ಹಾಡಕಾರ, ಶಿಶು ಅಭಿವೃದ್ಧಿ ಇಲಾಖೆಯ ಅಧಿಕಾರಿ ಬಸವರಾಜ ಜಿಗಲೂರ, ಹೆಸ್ಕಾಂ ಶಾಖಾಧಿಕಾರಿ ಎನ್.ಎಚ್. ಭಂತನಾಳ, ಪಪಂ ಮುಖ್ಯಾಧಿಕಾರಿ ವಿ.ಜಿ. ಹಣ್ಣಿಕೇರಿ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಪಪಂ ಸದಸ್ಯರು, ಸಿಬ್ಬಂದಿ ಇದ್ದರು.