ಹನೂರು: ತಾಲೂಕಿನ ಪ್ರಸಿದ್ಧ ಧಾರ್ಮಿಕ ಯಾತ್ರಾ ಸ್ಥಳ ಮಲೈಮಹದೇಶ್ವರ ಬೆಟ್ಟದ ಮಾದಪ್ಪನ ಸನ್ನಿಧಿಯಲ್ಲಿ ಭಾನುವಾರ ಅಕ್ಷತ್ತದಗಿ ಅಮಾವಾಸ್ಯೆ ಹಿನ್ನೆಲೆಯಲ್ಲಿ ಸಾಲೂರು ಬೃಹನ್ಮಠದ ಪೀಠಾಧಿಪತಿ ಡಾ.ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅವರ ಸಮ್ಮುಖದಲ್ಲಿ ಬೇಡಗಂಪಣ ಅರ್ಚಕರು ಮಾದಪ್ಪನಿಗೆ ವಿಶೇಷ ಪೂಜೆ ನೆರವೇರಿಸಿದರು.
ನಿರೀಕ್ಷೆಗೂ ಮೀರಿ ಲಕ್ಷಾಂತರ ಭಕ್ತರು ಭೇಟಿ ನೀಡಿ ದೇವರ ದರ್ಶನ ಪಡೆದರು. ಅಮಾವಾಸ್ಯೆ ಹಿನ್ನೆಲೆಯಲ್ಲಿ ದೇಗುಲವನ್ನು ತಳಿರು, ತೋರಣ ಹಾಗೂ ವಿವಿಧ ಪುಷ್ಪಗಳಿಂದ ಸಿಂಗರಿಸಲಾಗಿತ್ತಲ್ಲದೆ, ವಿವಿಧ ವಿದ್ಯುತ್ ದೀಪದಿಂದ ಕಂಗೊಳಿಸುವಂತೆ ವ್ಯವಸ್ಥೆ ಮಾಡಲಾಗಿತ್ತು. ಅಮಾವಾಸ್ಯೆ ಹಾಗೂ ಭಾನುವಾರ ರಜೆ ಹಿನ್ನೆಲೆಯಲ್ಲಿ ಶ್ರೀ ಕ್ಷೇತ್ರಕ್ಕೆ ಅಪಾರ ಸಂಖ್ಯೆಯಲ್ಲಿ ಭಕ್ತರ ದಂಡೇ ಹರಿದು ಬಂತು. ಇದರಿಂದ ಮ.ಬೆಟ್ಟ ಭಕ್ತರಿಂದ ತುಂಬಿ ತುಳುಕುತ್ತಿತ್ತು.
ಮಾದಪ್ಪನಿಗೆ ಅಮಾವಾಸ್ಯೆ ವಿಶೇಷ ಪೂಜೆ:
ದೇಗುಲದಲ್ಲಿ ಬೆಳಗಿನ ಜಾವ ಸಾಲೂರು ಬೃಹನ್ಮಠದ ಪೀಠಾಧಿಪತಿ ಡಾ.ಶ್ರೀ ಶಾಂತಮಲ್ಲಿ ಕಾರ್ಜುನ ಸ್ವಾಮೀಜಿ ಅವರ ಸಮ್ಮುಖದಲ್ಲಿ ಸ್ವಾಮಿಗೆ ಪ್ರಥಮ ಹಾಗೂ ದ್ವಿತೀಯ ವಿಶೇಷ ಪೂಜೆ ನೆರವೇರಿಸಲಾಯಿತು. ಉಪವಾಸವಿದ್ದ ಬೇಡಗಂಪಣ ಸರದಿ ಅರ್ಚಕರು ಛತ್ರಿ, ಚಾಮರ ವಾದ್ಯಮೇಳ ಹಾಗೂ ಜಾಗಟೆ ಸದ್ದಿನೊಂದಿಗೆ ದೇಗುಲ ಸಮೀಪದ ನಂದನವನದ ಮಜ್ಜನ ಬಾವಿಗೆ ತೆರಳಿ ಆಗ್ರೋದಕ ಹಾಗೂ ಬಾಯಿಗೆ ಬಟ್ಟೆ ಕಟ್ಟಿಕೊಂಡು ಕರೆದ ಹಾಲಿಗೆ ವಿಶೇಷ ಪೂಜೆ ಸಲ್ಲಿಸಿ ಮೆರವಣಿಗೆ ಮೂಲಕ ದೇಗುಲಕ್ಕೆ ತಂದರು. ಬಳಿಕ ಸ್ವಾಮಿಗೆ ಸಂಕಲ್ಪಾಧಿ, ಏಕವಾರು ರುದ್ರಾಭಿಷೇಕ, ಪಂಚಾಮೃತ ಅಭಿಷೇಕ, ಶತನಾಮ ಬಿಲ್ವಾರ್ಚನೆ, ಎಳನೀರು, ಜೇನುತುಪ್ಪ, ಮೊಸರು, ಸಕ್ಕರೆ, ಖರ್ಜೂರ, ದ್ರಾಕ್ಷಿ ಹಾಗೂ ಹಾಲಿನ ಅಭಿಷೇಕವನ್ನು ನೆರವೇರಿಸಿದರು.
ಇನ್ನು 2ನೇ ಅಭಿಷೇಕದ ವಿಶೇಷ ಪೂಜೆಯಲ್ಲಿ ಮಾದಪ್ಪನಿಗೆ ವಿವಿಧ ಅಭಿಷೇಕ ಅರ್ಚನೆ, ಏಕವಾರು ರುದ್ರಾಭಿಷೇಕ, ಸಂಕಲ್ಪ ಬಿಲ್ವಾರ್ಚನೆ ನೆರವೇರಿಸಲಾಯಿತು. ನವರತ್ನ ಕೀರಿಟಧಾರಣೆಯೊಂದಿಗೆ ಧೂಪ, ದೀಪಧಾರತಿ ಹಾಗೂ ಮಹಾ ಮಂಗಳಾರತಿ ಬೆಳಗಿಸಿದ ಬಳಿಕ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ನೀಡಲಾಯಿತು. ಈ ಮೂಲಕ ಮಾದಪ್ಪನಿಗೆ ಅಕ್ಷತ್ತದಗಿ ಅಮಾವಾಸ್ಯೆ ವಿಶೇಷ ಪೂಜೆ ನೆರವೇರಿಸಲಾಯಿತು.
ನಿರೀಕ್ಷೆಗೂ ಮೀರಿ ಭಕ್ತರ ಆಗಮನ:
ಮ.ಬೆಟ್ಟಕ್ಕೆ ಸಾಮಾನ್ಯವಾಗಿ ಯುಗಾದಿ, ದೀಪಾವಳಿ ಹಾಗೂ ಮಹಾ ಶಿವರಾತ್ರಿ ಜಾತ್ರಾ ಅಮಾವಾಸ್ಯೆ ಲಕ್ಷಾಂತರ ಭಕ್ತರು ಮ.ಬೆಟ್ಟಕ್ಕೆ ಭೇಟಿ ನೀಡುತ್ತಾರೆ. ಇನ್ನುಳಿದಂತೆ ಅಮಾಮಾಸ್ಯೆಯಲ್ಲಿ ಸಾವಿರಾರು ಭಕ್ತರು ಭೇಟಿ ನೀಡುತ್ತಿದ್ದರು. ಆದರೆ ಈ ಅಮಾವಾಸ್ಯೆಯಲ್ಲಿ ಶಾಲಾ, ಕಾಲೇಜಿಗೆ ರಜೆ ಇರುವುದರಿಂದ ನಿರೀಕ್ಷೆಗೂ ಮೀರಿ ಲಕ್ಷಾಂತರ ಭಕ್ತರು, ಮಕ್ಕಳು ಹಾಗೂ ಕುಟುಂಬಸ್ಥರೊಂದಿಗೆ ಆಗಮಿಸಿದ್ದರು. ಈ ಕಾರಣಕ್ಕಾಗಿ ಬಹುತೇಕ ಭಕ್ತರು ಗಂಟೆಗಟ್ಟಲೇ ಸರತಿ ಸಾಲಿನಲ್ಲಿ ತೆರಳಿ ದೇವರ ದರ್ಶನ ಪಡೆದರು.
ಕೆಲವರು 500 ರೂ. ವಿಶೇಷ ಟಿಕೆಟ್ ಪಡೆದು ರಾಜಗೋಪುರದ ಮೂಲಕ ತೆರಳಿ ದೇವರ ದರ್ಶನ ಪಡೆದರು. ಇನ್ನು ಪ್ರಾಧಿಕಾರ ಅಂಗವಿಕಲರು ಹಾಗೂ ವೃದ್ಧರಿಗೆ ನೇರವಾಗಿ ತೆರಳಿ ದೇವರ ದರ್ಶನ ಪಡೆಯಲು ಪ್ರತ್ಯೇಕ ಕೌಂಟರ್ ತೆರೆದು ಅನುಕೂಲ ಕಲ್ಪಿಸಲಾಗಿತ್ತು. ಭಕ್ತರು ದೇವರ ದರ್ಶನ ಪಡೆದು ಪೂಜಾ ಕೈಂಕರ್ಯಗಳಲ್ಲಿ ಭಾಗಿಯಾಗುವುದರ ಜತೆಗೆ ಹರಕೆ ಹೊತ್ತವರು ಇಷ್ಟಾರ್ಥ ಸಿದ್ಧಿಗಾಗಿ ಉತ್ಸವಾದಿ ಸೇವೆಗಳಲ್ಲಿ ಭಾಗಿಯಾಗಿ ಭಕ್ತಿ ಭಾವ ಮೆರೆದರು. ಭಕ್ತರು ನಿರೀಕ್ಷೆಗೂ ಮೀರಿ ಆಗಮಿಸಿದ್ದರಿಂದ ಸಿಬ್ಬಂದಿ ಸುಸೂತ್ರ ದೇವರ ದರ್ಶನಕ್ಕೆ ಹರಸಾಹಸ ಪಡಬೇಕಾಯಿತು.
ಬಿರು ಬಿಸಿಲಿನ ನಡುವೆಯೂ ಪೂಜೆ
ಮಾದಪ್ಪನ ಸನ್ನಿಧಿಯಲ್ಲಿ ಬೆಳಗ್ಗೆ ಸಾವಿರಾರು ಭಕ್ತರು ನೆರೆದಿದ್ದರು. 10 ಗಂಟೆ ಬಳಿಕ ಆಗಮಿಸುವ ಭಕ್ತರ ಸಂಖ್ಯೆ ಹೆಚ್ಚಾಗ ತೊಡಗಿತು. ದೇಗುಲ ಆವರಣದಲ್ಲಿ ಭಕ್ತರು ಬಿರು ಬಿಸಿಲಿನ ನಡುವೆಯೂ ಪೂಜಾ ಕೈಂಕರ್ಯ ಹಾಗೂ ಸೇವಾ ಉತ್ಸಾವಾಧಿಗಳಲ್ಲಿ ಭಾಗಿಯಾಗಿದ್ದರು. ಕೆಲವರು ರಂಗಮಂದಿರ ಹಾಗೂ ದೇಗುಲದ ಆಸುಪಾಸು ನೆರಳಿನ ಸ್ಥಳವನ್ನು ಆಶ್ರಯಿಸಿ ವಿಶ್ರಾಂತಿ ಪಡೆದರು. ಪ್ರಾಧಿಕಾರದ ವತಿಯಿಂದ ಭಕ್ತರ ಅನುಕೂಲಕ್ಕಾಗಿ ಶಾಮಿಯಾನ ಹಾಕಿ ನೆರಳಿನ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ದೇಗುಲದ ಸುತ್ತಲೂ ಮ್ಯಾಟ್ ಹಾಕಲಾಗಿತ್ತು. ಜತೆಗೆ ಉರುಳು ಸೇವೆಯ ದೃಷ್ಟಿಯಿಂದ ದೇಗುಲದ ಸುತ್ತಲು ಆಗ್ಗಾಗ್ಗೆ ನೀರನ್ನು ಸಿಂಪಡಿಸಲಾಗುತ್ತಿತ್ತು. ಇನ್ನು ಕುಡಿಯುವ ನೀರು, ದಾಸೋಹ ವ್ಯವಸ್ಥೆ ಕಲ್ಪಿಸಲಾಗಿತ್ತು.
ಉತ್ಸವಗಳಲ್ಲಿ ಭಾಗಿ
ಇನ್ನು ಎಂದಿನಂತೆ ಮ.ಬೆಟ್ಟಕ್ಕೆ ಆಗಮಿಸಿದ್ದ ಹರಕೆಹೊತ್ತ ಭಕ್ತರು ಮುಡಿಸೇವೆ, ಉರುಳುಸೇವೆ, ಪಂಜಿನಸೇವೆ ಹಾಗೂ ರಜಾ ಹೊಡೆಯುವ ಸೇವೆಯನ್ನು ಕೈಗೊಂಡು ಕೆಲ ಭಕ್ತರು ದೇಗುಲದ ಸುತ್ತ ಹುಲಿ, ಬಸವ ಹಾಗೂ ರುದ್ರಾಕ್ಷಿ ವಾಹನ ಉತ್ಸವಾದಿ ಸೇವೆಗಳಲ್ಲಿ ಭಾಗಿಯಾಗಿದ್ದರು. ಈ ವೇಳೆ ಭಕ್ತರು ಉಘೇ ಮಾದಪ್ಪ ಉಘೇ, ಜೈ ಮಹತ್ ಮಲೆಯ ಜಯಘೋಷವನ್ನು ಮೊಳಗಿಸಿದರು.