ಜಿಲ್ಲೆ

ಮಾದಪ್ಪನಿಗೆ ಎಳ್ಳಮಾವಾಸ್ಯೆ ವಿಶೇಷ ಪೂಜೆ

ಹನೂರು: ತಾಲೂಕಿನ ಪ್ರಸಿದ್ಧ ಧಾರ್ಮಿಕ ಯಾತ್ರಾ ಸ್ಥಳ ಮಲೆ ಮಹದೇಶ್ವರ ಬೆಟ್ಟದ ಮಾದಪ್ಪನ ಸನ್ನಿಧಿಯಲ್ಲಿ ಸೋಮವಾರ ಎಳ್ಳಮಾವಾಸ್ಯೆ ಅಂಗವಾಗಿ ಮಾದಪ್ಪನಿಗೆ ವಿಶೇಷ ಪೂಜಾ ಕೈಂಕರ್ಯಗಳು ನಡೆದವು. ನೂರಾರು ಭಕ್ತರು ದೇವರ ದರ್ಶನ ಪಡೆದು ಧನ್ಯತೆ ಮೆರೆದರು.

ಅಮಾವಾಸ್ಯೆಯ ಹಿನ್ನೆಲೆಯಲ್ಲಿ ದೇಗುಲವನ್ನು ತಳಿರು, ತೋರಣ ಹಾಗೂ ವಿವಿಧ ಪುಷ್ಪಗಳಿಂದ ಸಿಂಗರಿಸಲಾಗಿತ್ತು. ವಿವಿಧ ಬಣ್ಣದ ವಿದ್ಯುತ್ ದೀಪಗಳಿಂದ ಸನ್ನಿಧಿಯ ಆವರಣ ಕಂಗೊಳಿಸುತ್ತಿತ್ತು. ಸೋಮವಾರ ಬೆಳಗಿನ ಜಾವ 3.30ರಿಂದ 6.30 ರವರೆಗೆ ಸ್ವಾಮಿಗೆ ಪ್ರಥಮ ಹಾಗೂ ದ್ವಿತೀಯ ವಿಶೇಷ ಪೂಜೆಯನ್ನು ಸಾಲೂರು ಬೃಹನ್ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಸಮ್ಮುಖದಲ್ಲಿ ಬೇಡಗಂಪಣ ಅರ್ಚಕರು ಅಮಾವಾಸ್ಯೆ ಪೂಜೆ ನೆರವೇರಿಸಿದರು. ವಾರಾಂತ್ಯದ ರಜೆ ಹಿನ್ನೆಲೆಯಲ್ಲಿ ಭಾನುವಾರವೇ ಆಗಮಿಸಿ ಬೀಡು ಬಿಟ್ಟಿದ್ದ ಭಕ್ತರು ವಿವಿಧ ಪೂಜಾ ಕೈಂಕರ್ಯಗಳಲ್ಲಿ ಭಾಗಿಯಾಗಿದ್ದರು. ಹರಕೆ ಹೊತ್ತವರು ಇಷ್ಟಾರ್ಥ ಉತ್ಸವಾದಿ ಸೇವೆಗಳನ್ನು ನೆರವೇರಿಸಿದರು.

ಉಪವಾಸವಿದ್ದ ಬೇಡಗಂಪಣ ಅರ್ಚಕರು ಸ್ವಾಮಿಗೆ ಏಕವಾರ ರುದ್ರಾಭಿಷೇಕ, ಪಂಚಾಮೃತ ಅಭಿಷೇಕ, ಶತನಾಮ ಬಿಲ್ವಾರ್ಚನೆ, ಎಳನೀರು, ಜೇನುತುಪ್ಪ, ಮೊಸರು, ಸಕ್ಕರೆ, ಖರ್ಜೂರ, ದ್ರಾಕ್ಷಿ ಹಾಗೂ ಹಾಲಿನ ಅಭಿಷೇಕ ಮಾಡಿದರು. 2ನೇ ಅಭಿಷೇಕದ ಸಂದರ್ಭ ನವರತ್ನ ಕಿರೀಟಧಾರಣೆಯೊಂದಿಗೆ ಮೂರ್ತಿಯನ್ನು ವಿವಿಧ ಪುಷ್ಪಗಳಿಂದ ಸಿಂಗರಿಸಿ ಧೂಪ, ದೀಪದಾರತಿ ಬೆಳಗಿಸಿದರು. ಬಳಿಕ ಭಕ್ತರಿಗೆ ದರ್ಶನಕ್ಕೆ ಅವಕಾಶ ನೀಡಲಾಯಿತು.

ಉತ್ಸವದಲ್ಲಿ ಭಾಗಿ: ನೂರಾರು ಭಕ್ತರು ಹುಲಿ, ರುದ್ರಾಕ್ಷಿ ಹಾಗೂ ಬಸವ ವಾಹನವನ್ನು ದೇಗುಲದ ಸುತ್ತ ಪ್ರದಕ್ಷಿಣೆ ಹಾಕಿಸುವುದರ ಮೂಲಕ ಉತ್ಸವದಲ್ಲಿ ಭಾಗಿಯಾಗಿದ್ದರು. ಹರಕೆ ಹೊತ್ತ ಭಕ್ತರು ದಂಡಿನ ಕೋಲನ್ನು ಹೊತ್ತು ಸಾಗಿದ ಸಂದರ್ಭ ಉಘೇ ಮಾದಪ್ಪ ಉಘೇ, ಜೈಮಹತ್ ಮಲೆಯಾ ಎಂಬಿತ್ಯಾದಿ ಜಯಘೋಷ ಮೊಳಗಿಸಿ ಭಕ್ತಿಭಾವ ಮೆರೆದರು. ಕೆಲವರು ಮುಡಿಸೇವೆ, ಉರುಳು ಸೇವೆ, ಪಂಜಿ ಸೇವೆ ಹರಕೆ ತೀರಿಸಿದರು.

ಚಾಮರಾಜನಗರ ಸೇರಿದಂತೆ ಮೈಸೂರು, ಬೆಂಗಳೂರು, ರಾಮನಗರ, ಕನಕಪುರ, ಚನ್ನಪಟ್ಟಣ, ಮದ್ದೂರು ಹಾಗೂ ಮಂಡ್ಯದಿಂದ ಹೆಚ್ಚಿನ ಭಕ್ತರು ಆಗಮಿಸಿದ್ದರು. ಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಕುಡಿಯುವ ನೀರು, ದಾಸೋಹ ಸೇರಿದಂತೆ ಅಗತ್ಯ ಸೌಕರ್ಯ ಕಲ್ಪಿಸಲಾಗಿತ್ತು. ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಬಂದೋಬಸ್ತ್ ಹಾಗೂ ಭಕ್ತರ ಸಂಖ್ಯೆಗೆ ಅನುಗುಣವಾಗಿ ಬಸ್ ಸೌಕರ್ಯ ಒದಗಿಸಲಾಗಿತ್ತು.