ಜಿಲ್ಲೆ

ಮಾದಪ್ಪನ ಸನ್ನಿಧಿಯಲ್ಲಿ ‘ಕಂಕಣ ಭಾಗ್ಯ’

ಚಾಮರಾಜನಗರ: ಮೈಸೂರು, ಮಂಡ್ಯ, ರಾಮನಗರ, ಬೆಂಗಳೂರು, ಚಾಮರಾಜನಗರ ಇನ್ನಿತರೆ ಜಿಲ್ಲೆಗಳಲ್ಲಿ ಕಂಕಣ ಭಾಗ್ಯ ಕೂಡಿಬಂದು ಮದುವೆಯಾಗಲು ದೇವರ ಸನ್ನಿಧಿ ಹುಡುಕುತ್ತಿರುವವರಿಗೊಂದು ಶುಭ ಸುದ್ದಿ.

ಅಸಂಖ್ಯಾತ ಭಕ್ತರ ಪಾಲಿನ ದೈವ ಮಾದಪ್ಪನ ಸನ್ನಿಧಿಯಲ್ಲಿ ನೀವು ಹಸೆಮಣೆ ಏರಬಹುದು. ಪ್ರತಿ ವರ್ಷದಂತೆ ಈ ಸಲವೂ ಮಹದೇಶ್ವರ ಬೆಟ್ಟದಲ್ಲಿ ಶ್ರೀಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಆ.18ರಂದು ಉಚಿತ ಸಾಮೂಹಿಕ ವಿವಾಹವನ್ನು ಏರ್ಪಡಿಸಲಾಗಿದೆ. ಕಳೆದ ವರ್ಷಗಳಿಗಿಂತ ಈ ಬಾರಿ ಅಧಿಕ ಸಂಖ್ಯೆಯ ಜೋಡಿಗಲಿಗೆ ಮದುವೆ ಮಾಡಿಸುವ ಗುರಿ ಹೊಂದಿರುವ ಪ್ರಾಧಿಕಾರಿ, ಸಾಮೂಹಿಕ ವಿವಾಹನದ ದಿನಾಂಕವನ್ನು ಮುಂಚಿತವಾಗಿಯೇ ೋಷಿಸಿ, ಪ್ರಚಾರ ನಡೆಸುತ್ತಿದೆ.

ಸಾವಿರಾರು ಜೋಡಿಗಳು ಹಸೆಮಣೆಗೆ: ಮಲೆ ಮಹದೇಶ್ವರ ಬೆಟ್ಟದಲ್ಲಿ ಪ್ರಾಧಿಕಾರದ ವತಿಯಿಂದ ಇವರೆಗೆ ಏರ್ಪಡಿಸುತ್ತಾ ಬಂದಿರುವ ಉಚಿತ ಸಾಮೂಹಿಕ ವಿವಾಹಗಳಲ್ಲಿ ಸಾವಿರಾರು ಜೋಡಿಗಳು ಹಸೆಮಣೆ ಏರಿವೆ. ಈ ವರ್ಷ ವಿವಾಹವಾಗುವ ಜೋಡಿಗಳ ಸಂಖ್ಯೆ ಏರಿಕೆಯಾದರೆ 2 ಸಾವಿರದ ಗಡಿಯನ್ನು ದಾಟಲಿದೆ.

ಬೆಟ್ಟದಲ್ಲಿ ಸಾಮೂಹಿಕ ವಿವಾಹ ಮಹೋತ್ಸವವನ್ನು 1989ರಲ್ಲಿ ಆರಂಭಿಸಲಾಯಿತು. ಅಂದು 18 ಜೋಡಿಗಳ ಮದುವೆಯಿಂದ ಶುರುವಾದ ವಿವಾಹ ಮಹೋತ್ಸವ ಇಂದಿಗೆ 1,931 ಜೋಡಿಗಳಿಗೆ ಬಂದು ನಿಂತಿದೆ. ಆರಂಭದಿಂದ ಈವರೆಗೆ ನಡೆದಿರುವ ಸಾಮೂಹಿಕ ವಿವಾಹ ಮಹೋತ್ಸವಗಳಲ್ಲಿ ನೂರಕ್ಕೂ ಹೆಚ್ಚು ಜೋಡಿಗಳು ಮದುವೆಯಾಗಿರುವ ವರ್ಷಗಳೆಂದರೆ, 2002(137 ಜೋಡಿಗಳು), 2007(101 ಜೋಡಿಗಳು)ರಲ್ಲಿ ಮಾತ್ರ. 90ಕ್ಕೂ ಹೆಚ್ಚೆಂದರೆ, 1998ರಲ್ಲಿ 93, 2003ರಲ್ಲಿ 2003ರಲ್ಲಿ 97, 2005ರಲ್ಲಿ 99, 2006ರಲ್ಲಿ 92 ಜೋಡಿಗಳು ಮದುವೆಯಾಗಿದ್ದವು. ಮಹಾಮಾರಿ ಕೋವಿಡ್ ಸಂದರ್ಭದಲ್ಲಿ ಮಾತ್ರ ಉಚಿತ ಸಾಮೂಹಿಕ ವಿವಾಹ ಮಹೋತ್ಸವವನ್ನು ನಡೆಸಿರಲಿಲ್ಲ. ಉಳಿದಂತೆ ವರ್ಷ ವರ್ಷವೂ ಏರ್ಪಡಿಸಲಾಗುತ್ತಲೇ ಇದೆ. ಈ ವರ್ಷ ಮದುವೆಯಾಗುವ ಜೋಡಿಗಳ ಸಂಖ್ಯೆಯನ್ನು 100ರ ಗಡಿ ದಾಟಿಸಬೇಕೆಂಬ ಉದ್ದೇಶವನ್ನು ಪ್ರಾಧಿಕಾರ ಹೊಂದಿದೆ.

ವಿಶೇಷ ಜೋಡಿಗಳ ಮೆರುಗು:

ಉಚಿತ ಸಾಮೂಹಿಕ ವಿವಾಹ ಮಹೋತ್ಸವವು ಆದರ್ಶಮಯ ಜೋಡಿಗಳಿಂದ ಮೆರುಗು ತುಂಬಿಕೊಳ್ಳುತ್ತಿದೆ. ದೇವರ ಮುಂದೆ ಬಡವ-ಶ್ರೀಮಂತನೆಂಬ ಬೇಧವಿಲ್ಲ. ವಿವಾಹ ಮಹೋತ್ಸವದಲ್ಲೂ ಸಹ ಸಿರವಂತರು ಮತ್ತು ಬಡವರು ಎಂಬ ಭಾವನೆ ಇಲ್ಲದೆ ಪಾಲ್ಗೊಳ್ಳುತ್ತಾರೆ. ಮಲೆ ಮಹದೇಶ್ವರ ಬೆಟ್ಟದಂತ ಪುಣ್ಯಸ್ಥಳದಲ್ಲಿ ವಿವಾಹವಾಗುವ ಸೌಭಾಗ್ಯವೇ ಇದಕ್ಕೆ ಕಾರಣ. ಅಲ್ಲದೇ, ಈವರೆಗೆ ನಡೆದಿರುವ ಉಚಿತ ಸಾಮೂಹಿಕ ವಿವಾಹ ಮಹೋತ್ಸವಗಳಲ್ಲಿ ವಿಶೇಷ ಜೋಡಿಗಳು ನವಜೀವನಕ್ಕೆ ಕಾಲಿಟ್ಟು ಗಮನ ಸೆಳೆದಿವೆ. ಪ್ರಾಧಿಕಾರಕ್ಕೆ ಮುಖ್ಯಮಂತ್ರಿಗಳೇ ಅಧ್ಯಕ್ಷರಾಗಿರುವ ಹಿನ್ನೆಲೆಯಲ್ಲಿ ಅವರ ಉಪಸ್ಥಿತಿ, ಶ್ರೀಗಳ ಆಶೀರ್ವಾದ, ಸಚಿವರ ಭಾಗವಹಿಸುವಿಕೆಯಲ್ಲಿ ಮದುವೆ ನಡೆಯುತ್ತಾ ಬಂದಿದೆ.

ಹರಕೆ ಲಿಸಿದವರ ಮದುವೆ:

ಮದುವೆಯಾಗಲು ಹೆಣ್ಣು ಸಿಗದೆ ಬೇಸರಗೊಂಡಿರುವ ಯುವಕರು ಹರಕೆ ಹೊತ್ತು ಮಲೆ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆಗೆ ಬರುವುದು ಈಗ ಸಂಪ್ರದಾಯವಾಗಿಬಿಟ್ಟಿದೆ. ಈ ರೀತಿ ಕಾಲ್ನಡಿಗೆಯಲ್ಲಿ ಬಂದು ಹರಕೆ ತೀರಿಸಿರುವ ಭಕ್ತರಲ್ಲಿ ಹಲವರಿಗೆ ಕಂಕಣ ಭಾಗ್ಯ ಕೂಡಿಬಂದಿದೆ. ಇದು ಹರಕೆಯ ಮೇಲಿನ ನಂಬಿಕೆಯನ್ನು ಹೆಚ್ಚು ಮಾಡಿದೆ. ಊರೂರುಗಳಿಂದ ಪಾದಯಾತ್ರೆ ಬಂದ ಸಂದರ್ಭದಲ್ಲಿ ತಂದೆ-ತಾಯಂದಿರ ಪರಿಚಯವಾಗಿ ತಮ್ಮ ಮಕ್ಕಳಿಗೆ ಮದುವೆ ಮಾತುಕತೆ ನಡೆಸಿ ವಿವಾಹ ಮಾಡಿರುವ ಉದಾಹರಣೆಗಳೂ ಇವೆ. ಇಂತಹ ಜೋಡಿಗಳು ಉಚಿತ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಹಸೆಮಣೆ ಏರಿದ್ದೂ ಇದೆ.

2023ರಲ್ಲಿ ದಿನಾಂಕದ್ದೇ ಗೊಂದಲ:

2023ರಲ್ಲಿ ನಿಗದಿಯಾಗಿದ್ದ ಸಾಮೂಹಿಕ ವಿವಾಹದ ದಿನಾಂಕವನ್ನು 2 ಸಲ ಮುಂದೂಡಲಾಗಿತ್ತು. ಆ.23ರಂದು ಸಾಮೂಹಿಕ ವಿವಾಹ ನಿಗದಿ ಮಾಡಿ, ಬಳಿಕ ಆ.28ಕ್ಕೆ ಮುಂದೂಡಿದ್ದ ಹಿನ್ನೆಲೆಯಲ್ಲಿ ಏಳು ಜೋಡಿಗಳು ಸಾಲೂರು ಮಠದಲ್ಲಿ ಮದುವೆ ಮಾಡಿಕೊಂಡಿದ್ದರು. ಈ ಸಲ ದಿನಾಂಕ ಮುಂದೂಡಿಕೆಯಾಗದೆ ನಿಗದಿಯಾಗಿರುವ ಆ.18ರಂದೇ ಸಾಮೂಹಿಕ ವಿವಾಹ ನಡೆದರೆ ಗೊಂದಲವೇ ಇರುವುದಿಲ್ಲ.

ವಧು-ವರರ ಮಾಹಿತಿಗೆ:

ಮದುವೆಯಾಗುವವ ವರನಿಗೆ 21 ವರ್ಷ, ವಧುವಿಗೆ 18 ವರ್ಷ ಪೂರ್ಣಗೊಂಡಿರಬೇಕು. ವಯಸ್ಸಿನ ಬಗ್ಗೆ ಶಾಲೆಯಿಂದ ದಾಖಲಾತಿ ಪತ್ರ ಅಥವಾ ಮೂಲೆ ತಜ್ಞರಿಂದ ಪಡೆದ ಧೃಡೀಕರಣ ಪತ್ರ, ವಧು ಮತ್ತು ವರನ ಜೋಡಿ 2 ಬಿ ಅಳತೆಯ 3 ಭಾವಚಿತ್ರ, ಆಧಾರ್‌ಕಾರ್ಡ್, ವಾಸಸ್ಥಳ ದೃಢೀಕರಣ ಪತ್ರ, ಈ ಹಿಂದೆ ವಿವಾಹವಾಗಿರದ ಬಗ್ಗೆ ಸ್ಥಳೀಯ ಸಂಸ್ಥೆಯಿಂದ ರುಜವಾತು ಪತ್ರ, ಮರು ಮದುವೆಯಾಗುವವರು ಮೊದಲನೆ ವಿವಾಹಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಿಂದ ಮಾನ್ಯವಾಗಿರುವ ವಿವಾಹ ವಿಚ್ಛೇದನ ಪತ್ರವನ್ನು ಲಗತ್ತಿಸಬೇಕು.

ಮುಹೂರ್ತ ಎಷ್ಟೊತ್ತಿಗೆ? ಆ.18ರಂದು ಬೆಳಗ್ಗೆ 9.20ರಿಂದ 10.10ವರಗೆ ವಿಶ್ವಾವಸುನಾಮ ಸಂವತ್ಸವರ ದಕ್ಷಿಣಾಯನ, ವರ್ಷಋತು, ಶ್ರಾವಣ ಮಾಸ, ಕೃಷ್ಣಪಕ್ಷ ಮೃಗಶಿರ ನಕ್ಷತ್ರ, ದಶಮಿತಿಥಿ, ಕನ್ಯಾ ಲಗ್ನದಲ್ಲಿ ಉಚಿತ ಸಾಮೂಹಿಕ ವಿವಾಹ ಏರ್ಪಡಿಸಲಾಗಿದೆ. ಮಧುವಿಗೆ ಚಿನ್ನದ ಮಾಂಗಲ್ಯ, ಬೆಳ್ಳಿ ಕಾಲುಂಗುರ, ಸೀರೆ-ರವಿಕೆ, ವರನಿಗೆ ಪಂಚೆ-ಶರ್ಟ್, ಟವಲ್‌ಅನ್ನು ಉಚಿತವಾಗಿ ನೀಡಲಾಗುತ್ತಿದೆ. ಪ್ರಾಧಿಕಾರದಿಂದ ಅರ್ಜಿಯನ್ನು ಪಡೆದು ಹೆಸರು ನೊಂದಣಿಗೆ ಜು.31ರ ಸಂಜೆ 5 ಗಂಟೆ ಸಲ್ಲಿಸಬೇಕಾಗಿದೆ. ಆಸಕ್ತರು ಅರ್ಜಿಗಾಗಿ 9902593369, 827724493, 08225-272128 ಸಂಪರ್ಕಿಸಬಹುದು. ಕೊಳ್ಳೇಗಾಲದವರು ಮಹದೇಶ್ವರ ಕಲ್ಯಾಣ ಮಂಟಪದಲ್ಲಿಯೂ ಸಹ ಅರ್ಜಿಯನ್ನು ಪಡೆಯಬಹುದು.

ಶ್ರೀಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಆ.18ರಂದು ಉಚಿತ ಸಾಮೂಹಿಕ ವಿವಾಹ ಏರ್ಪಡಿಸಲಾಗಿದೆ. ಈ ಸಲ ನೂರಕ್ಕೂ ಹೆಚ್ಚು ಜೋಡಿಗಳಿಗೆ ಭಾಗವಹಿಸಲೆಂದು ವ್ಯಾಪಕ ಪ್ರಚಾರ ಕೈಗೊಳ್ಳಲಾಗುತ್ತಿದೆ. ರಘು, ಪ್ರಾಧಿಕಾರದ ಕಾರ್ಯದರ್ಶಿ