ಹನೂರು: ಮಲೆಮಹದೇಶ್ವರ ಬೆಟ್ಟದ ಮಾದಪ್ಪನ ಸನ್ನಿಧಿಯಲ್ಲಿ ಬುಧವಾರ ಸಾಲೂರು ಬೃಹನ್ಮಠದ ಪೀಠಾಧಿಪತಿ ಡಾ. ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅವರ ಸಮ್ಮುಖದಲ್ಲಿ ಉತ್ಸವಾದಿ ವಾಹನಗಳು ಹಾಗೂ ಆಯುಧಗಳಿಗೆ ಬೇಡಗಂಪಣ ಅರ್ಚಕರು ವಿಶೇಷ ಪೂಜೆ ಸಲ್ಲಿಸಿದರು.
ವಿಜಯದಶಮಿಯ ಅಂಗವಾಗಿ ದೇಗುಲವನ್ನು ವಿವಿಧ ಪುಷ್ಪ, ತಳಿರು ತೋರಣ ಹಾಗೂ ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುವಂತೆ ವ್ಯವಸ್ಥೆ ಮಾಡಲಾಗಿತ್ತು. ಬೆಳಗಿನ ಜಾವ 3.30ರಿಂದ 6.30ರವರೆಗೆ ಮಾದಪ್ಪನ ಸನ್ನಿಧಿಯಲ್ಲಿ ಬೇಡಗಂಪಣ ಸಂಪ್ರದಾಯದಂತೆ ಸಾಲೂರು ಬೃಹನ್ಮಠದ ಪೀಠಾಧಿಪತಿ ಡಾ. ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಸಾನ್ನಿಧ್ಯದಲ್ಲಿ ವಿವಿಧ ಅಭಿಷೇಕ, ಬಿಲ್ವಾರ್ಚನೆ ಮೂಲಕ ವಿಶೇಷ ಪೂಜೆ ಸಲ್ಲಿಸಿ ಮಹಾಮಂಗಳಾರತಿ ಬೆಳಗಿಸಲಾಯಿತು. ಬಳಿಕ ವಿವಿಧ ಪುಷ್ಪಗಳಿಂದ ಸಿಂಗರಿಸಲಾಗಿದ್ದ ಚಿನ್ನದ ತೇರು, ಬೆಳ್ಳಿ ತೇರು ಸೇರಿದಂತೆ ಹುಲಿ, ಬಸವ ಹಾಗೂ ರುದ್ರಾಕ್ಷಿ ಉತ್ಸವಾದಿ ವಾಹನಗಳಿಗೆ ಪೂಜೆ ಸಲ್ಲಿಸಿ ದೇಗುಲದ ಸುತ್ತ ಪ್ರದಕ್ಷಿಣೆ ಹಾಕಿಸಲಾಯಿತು. ಈ ವೇಳೆ ಸಾಕಾನೆ ಉಮಾಮಹೇಶ್ವರಿ ಭಾಗಿಯಾಗಿ ಎಲ್ಲರ ಗಮನ ಸೆಳೆಯಿತು.
ರಾತ್ರಿ ದೇಗುಲದಲ್ಲಿ ತ್ರಿಕಾಲ ಪೂಜೆಯನ್ನು ನೆರವೇರಿಸಿದ ಬಳಿಕ ಸಾಲೂರು ಶ್ರೀಗಳ ಸಾನ್ನಿಧ್ಯದಲ್ಲಿ ಉಪವಾಸವಿದ್ದ ಬೇಡಗಂಪಣ ಅರ್ಚಕರು ಮಡಿವಸ್ತ್ರ ಧರಿಸಿ ಸ್ವಾಮಿಯ ಪಟ್ಟದ ಕತ್ತಿ, ಬಂಗಾರದ ಆಯುಧಗಳನ್ನು ಹೊತ್ತು ಸತ್ತಿಗೆ, ಸೂರಿಪಾನಿ, ಛತ್ರಿ ಚಾಮರ, ನಂದಿ ಧ್ವಜಕಂಬ, ತಮಟೆ, ನಗಾರಿ, ಜಾಗಟೆ ಹಾಗೂ ಮಂಗಳವಾದ್ಯಮೇಳದೊಂದಿಗೆ ದೇಗುಲ ಸಮೀಪದ ನಂದನವನದ ಮಜ್ಜನ ಬಾವಿಗೆ ತೆರಳಿದರು. ಅಲ್ಲಿ ಆಯುಧಗಳನ್ನಿಟ್ಟು ಬ್ರಹ್ಮಸ್ತೋತ್ರದ ಪೂಜೆಯ ಜತೆಗೆ ಸಾಂಪ್ರದಾಯಿಕ ಪೂಜೆಯನ್ನು ನೆರವೇರಿಸಿದರು. ಸ್ವಾಮಿಗೆ ಫಲ ತಾಂಬೂಲ ನೈವೇದ್ಯ ಅರ್ಪಿಸಿ ಮಹಾ ಮಂಗಳಾರತಿ ಬೆಳಗಿಸಲಾಯಿತು. ಕಂಕಣ ಕಟ್ಟಿಸಿಕೊಂಡ ಬೇಡಗಂಪಣ ಅರ್ಚಕರು ವಿವಿಧ ಆರತಿ ಸೇವೆಗಳನ್ನು ಮಾಡಿದರು.
ಆಯುಧಗಳನ್ನು ಹೊತ್ತ ಅರ್ಚಕರು ಮೆರವಣಿಗೆಯ ಮೂಲಕ ದೇಗುಲಕ್ಕೆ ಆಗಮಿಸಿ 3 ಸುತ್ತು ಪ್ರದಕ್ಷಿಣೆ ಹಾಕಿದರು. ದಕ್ಷಿಣ ದ್ವಾರದ ಮಹಾಗಣಪತಿ ಸನ್ನಿಧಿಯಲ್ಲಿ ಮಂಗಳಾರತಿ ಬೆಳಗಿಸಿ ಬೂದು ಕುಂಬಳಕಾಯಿ ಒಡೆದು ದೃಷ್ಟಿ ತೆಗೆಯಲಾಯಿತು. ಬಳಿಕ ಪಟ್ಟದ ಉಯ್ಯಲೆ ಮಂಟಪದಲ್ಲಿ ಆಯುಧಗಳನ್ನಿರಿಸಿ 3 ರೀತಿಯ ಗೋಪುರದ ಆರತಿ, ನೈವೇದ್ಯ ಅರ್ಪಿಸಿ ಪೂಜೆ ಸಲ್ಲಿಸಲಾಯಿತು. ಇದೇ ವೇಳೆ ಶಿವಶಕ್ತಿ ಉತ್ಸವ, ವೀರಭದ್ರಸ್ವಾಮಿ, ಬಂಡಳ್ಳಿ ಬಸವ, ಗಾಳಿ ಬಸವೇಶ್ವರ ವಿಗ್ರಹಮೂರ್ತಿ, ಬೆಳ್ಳಿಸತ್ತಿಗೆ, ದೊಡ್ಡ ಸತ್ತಿಗೆ, ನಂದಿಕಂಬಗಳಿಗೂ ಪೂಜೆ ಸಲ್ಲಿಸಲಾಯಿತು. ಶಿವಪಾರ್ವತಿ ಉತ್ಸವ ಮೂರ್ತಿಯನ್ನು ದೇಗುಲದ ಸುತ್ತ 3 ಬಾರಿ ಪ್ರದಕ್ಷಿಣೆ ಹಾಕಿಸಲಾಯಿತು.
ಸಾಲೂರು ಮಠದಿಂದ ಪಡಿತರ ಸೇವೆ
ಮೈಸೂರು ಅರಸರು ನೀಡಿದ್ದ ಬಂಗಾರದ ದಾಳಿಂಬೆಯ ವಜ್ರಾಭರಣ ಕಿರೀಟ, ಬಂಗಾರದ ಕೊರಂಬು, ಮುತ್ತಿನ ಹಾರಗಳ ಪದಕ, ಮೈಸೂರು ರಾಜಮನೆತನದ ಗಂಡಭೇರುಂಡ ಲಾಂಛನದ ವಜ್ರ, ಮುತ್ತು, ರತ್ನಗಳಿಂದ ಶಿವ ಪಾರ್ವತಿ ಉತ್ಸವ ಮೂರ್ತಿಯನ್ನು ಸಿಂಗರಿಸಲಾಯಿತು. ವಿವಿಧ ಪುಷ್ಪಗಳು, ವಿದ್ಯುತ್ ದೀಪಾಲಂಕಾರದಿಂದ ಸಿಂಗರಿಸಿದ್ದ ಶರನ್ನವರಾತ್ರಿ ತೂಗುಯ್ಯಲೆ ಮಂಟಪಕ್ಕೆ ತಂದು ಕೂರಿಸಲಾಯಿತು. ಈ ವೇಳೆ ಶ್ರೀಶಾಂತಮಲ್ಲಿಕಾರ್ಜುನ ಸ್ವಾಮೀಜಿ ಸಮ್ಮುಖದಲ್ಲಿ ಸಾಲೂರು ಮಠದ ಪಡಿತರ ಸೇವೆಯನ್ನು ನೆರವೇರಿಸಲಾಯಿತು.
ಸಾಂಪ್ರದಾಯಿಕ ಹಾಡುಗಳನ್ನು ಹಾಡುವುದರ ಮೂಲಕ ತೊಟ್ಟಿಲು ತೂಗುತ್ತಾ, ಬಿಲ್ವಾರ್ಚನೆ, ನೈವೇದ್ಯ ಇನ್ನಿತರ ಸೇವೆ ಸಲ್ಲಿಸಿ ಮಹಾಮಂಗಳಾರತಿ ಬೆಳಗಿಸಲಾಯಿತು. ಭಕ್ತರಿಂದ ಶಿವಶಕ್ತಿಯ ಆರಾಧನೆ ಮಾಡಲಾಯಿತು. ಸಂಜೆ ಜರುಗಿದ ಚಿನ್ನದ ತೇರಿನ ಉತ್ಸವದಲ್ಲಿ ಹೆಚ್ಚಿನ ಭಕ್ತರು ಭಾಗಿಯಾಗಿ ದಂಡಿನ ಕೋಲನ್ನು ಹೊತ್ತು ಸಾಗಿದರು. ಉಘೇ ಮಾದಪ್ಪ ಉಘೇ, ಜೈ ಮಹತ್ ಮಲೆಯಾ ಘೋಷಣೆಯನ್ನು ಕೂಗಿದರು. ಶ್ರೀಮಲೆಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎ.ಈ. ರಘು, ಬೇಡಗಂಪಣ ಅರ್ಚಕರು, ಪ್ರಾಧಿಕಾರದ ನೌಕರರು ಇದ್ದರು.