ಜಿಲ್ಲೆ

ಮಾದಪ್ಪನ ಜಾತ್ರೆ ಅಂಗವಾಗಿ ವ್ಯಾಪಾರ ಭರಾಟೆ ಜೋರು

ಕೊಳ್ಳೇಗಾಲ: ಪ್ರಸಿದ್ಧ ಪುಣ್ಯ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಮಹಾಲಯ ಅಮಾವಾಸ್ಯೆ ಜಾತ್ರೆ ನಡೆಯುತ್ತಿದ್ದು, ಶುಕ್ರವಾರ ಕೊಳ್ಳೇಗಾಲದಲ್ಲಿ ಮಾದಪ್ಪನ ಭಕ್ತರ ವ್ಯಾಪಾರ ಭರಾಟೆ ಜೋರಾಗಿತ್ತು.


ಹಿಂದಿನಿಂದಲೂ ಮಲೆ ಮಹದೇಶ್ವರ ಬೆಟ್ಟದಲ್ಲಿ ಯಾವುದೇ ಜಾತ್ರೆ ನಡೆದರೂ ಮನೆಗಳಿಗೆ ಹೋಗುವಾಗ ಅಗತ್ಯ ತಿಂಡಿ ತಿನಿಸುಗಳನ್ನು ಕೊಳ್ಳೇಗಾಲ ಪಟ್ಟಣದಲ್ಲಿ ಖರೀದಿ ಮಾಡುವುದು ವಾಡಿಕೆ.


ಮಲೆ ಮಹದೇಶ್ವರನಿಗೆ ಮಹಾಲಯ ಅಮಾವಾಸ್ಯೆ ಜಾತ್ರೆ ಎಂದರೆ ಪರಿಶೆಯ ಲೆಕ್ಕ ಬರೆಯುವ ಜಾತ್ರೆ ಎಂದೇ ಪ್ರತೀತಿ. ಈ ಜಾತ್ರೆಗೆ ಬರುವ ಭಕ್ತರ ಲೆಕ್ಕವನ್ನು ಮಲೆಮಾದಪ್ಪ ಬೆಟ್ಟದ ಆನೆ ತಲೆ ದಿಂಬದಲ್ಲಿ ಕುಳಿತು ಬರೆಯುತ್ತಾನೆ ಎಂಬ ನಂಬಿಕೆ ಇದೆ. ಅದಕ್ಕಾಗಿ ಈ ಜಾತ್ರೆಗೆ ಮಹದೇಶ್ವರನ ಭಕ್ತರು ಪ್ರತಿ ಮನೆಯಿಂದ ತಪ್ಪದೆ ಬರುತ್ತಾರೆ. ಆದ್ದರಿಂದ ಈ ಜಾತ್ರೆ ಮಹಾಲಯ ಅಮಾವಾಸ್ಯೆಯಿಂದ ಪ್ರಾರಂಭವಾದರೆ ನಿರಂತರವಾಗಿ ದೀಪಾವಳಿ ಕಾರ್ತಿಕ ಮಾಸದವರೆಗೂ ವಿವಿಧ ಭಾಗಗಳ ಗ್ರಾಮಗಳಿಂದ ಭಕ್ತರು ಬರುತ್ತಾರೆ.


ತಮ್ಮ ಊರುಗಳಿಂದ ನೇರವಾಗಿ ಮಹದೇಶ್ವರ ಬೆಟ್ಟದ ಜಾತ್ರೆಗಳಿಗೆ ತೆರಳುವ ಮಂದಿ ಹಿಂತಿರುಗಿ ಮನೆಗಳಿಗೆ ವಾಪಸ್ ಹೋಗುವಾಗ ಕೊಳ್ಳೇಗಾಲ ಪಟ್ಟಣದಲ್ಲಿ ಬಸ್ ಇಳಿದು ಜಾತ್ರಾ ಪ್ರಯುಕ್ತ ಮನೆಗಳಿಗೆ ಬೇಕಾದ ಅಗತ್ಯ ತಿಂಡಿ, ಕಡಲೆಪುರಿ, ಹಣ್ಣುಗಳು, ಸಿಹಿ ಮಿಠಾಯಿಗಳು, ಹೂ, ಹಣ್ಣು ಸೇರಿದಂತೆ ಇನ್ನಿತರ ತಿಂಡಿ ತಿನಿಸುಗಳನ್ನು ಖರೀದಿ ಮಾಡುತ್ತಾರೆ. ಹಾಗೆಯೇ ಜಾತ್ರೆಗೆ ಬಂದಿದ್ದ ನೆನಪಾಗಿ ಮನೆಗೆ ಬೇಕಾದ ಗೃಹಬಳಕೆ ವಸ್ತುಗಳನ್ನು ಖರೀದಿಸುತ್ತಾರೆ.


ಇದ್ದರಿಂದಾಗಿ ಪಟ್ಟಣದ ಪ್ರಮುಖ ರಸ್ತೆಗಳಾದ ಡಾ.ಬಿ.ಆರ್.ಅಂಬೇಡ್ಕರ್ ರಸ್ತೆ, ಚೌಡೇಶ್ವರಿ ಕಲ್ಯಾಣ ಮಂಟಪ ರಸ್ತೆ ಸೇರಿದಂತೆ ಅಂಗಡಿ ಬೀದಿಗಳಲ್ಲಿ ಜನದಟ್ಟಣೆ ಹೆಚ್ಚಾಗಿ ಕಂಡು ಬಂತು. ಜಾತ್ರೆಯ ಜನ ಅಗತ್ಯವಸ್ತುಗಳನ್ನು ಖರೀದಿಸಲು ಮುಗಿಬಿದ್ದರೆ ಸ್ಥಳೀಯ ವ್ಯಾಪಾರಿಗಳು ಖುಷಿಯಿಂದ ವ್ಯಾಪಾರ ಮಾಡಿದರು.