ಜಿಲ್ಲೆ

ಮಾದನಾಯಕನಹಳ್ಳಿ ಬಳಿ ಲಾರಿಗೆ ಬಸ್ ಡಿಕ್ಕಿಯಾಗಿ 6 ಮಂದಿಗೆ ಗಾಯ

ನೆಲಮಂಗಲ: ಕೆಎಸ್‌ಆರ್‌ಟಿಸಿ ಬಸ್ ರಾ. ಹೆದ್ದಾರಿ 4ರ ಬೆಂಗಳೂರು ಉತ್ತರ ತಾಲೂಕಿನ ದಾಸನಪುರ ಹೋಬಳಿಯ ಮಾದನಾಯಕನಹಳ್ಳಿ ಬಳಿ ಹಿಂಬದಿಯಿಂದ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಆರು ಮಂದಿ ಗಾಯಗೊಂಡಿದ್ದಾರೆ. ಬಸ್ ಚಾಲಕ ರಾಘವೇಂದ್ರ ಗಜಕೋಲ್ (40), ನಿರ್ವಾಹಕ ಅಡವಿಯಪ್ಪ (45), ಹೆಚ್ಚುವರಿ ಚಾಲಕ ಕೆ.ಎಸ್. ಕುಲಕರ್ಣಿ (32), ಪ್ರಯಾಣಿಕರಾದ ನಾಗರಾಜು (55), ಲಲಿತಾ (56), ಮಹಮ್ಮದ್‌ಗೌಸ್ (27) ಗಾಯಗೊಂಡವರು.

ಗದಗ ಜಿಲ್ಲೆಯ ರೋಣದಿಂದ ಬೆಂಗಳೂರಿಗೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಮಾದನಾಯಕನಹಳ್ಳಿ ಬಳಿ ಲಾರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಚಾಲಕರು ಹಾಗೂ ನಿರ್ವಾಹಕನಿಗೆ ಸಣ್ಣಪುಟ್ಟ ಗಾಯಗಾಳಾಗಿವೆ. ಮುಂಭಾಗದಲ್ಲಿ ಕುಳಿತಿದ್ದ ಮಹಮ್ಮದ್ ಗೌಸ್, ನಾಗರಾಜು, ಲಲಿತಾ ಅವರಿಗೆ ಗಂಭೀರ ಗಾಯವಾಗಿದೆ. ನಗರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಟ್ರಾಫಿಕ್ ಜಾಮ್: ಅಪಘಾತದ ಹಿನ್ನೆಲೆಯಲ್ಲಿ ಮಾದನಾಯಕನಹಳ್ಳಿ ಬಳಿ 2 ಕಿ.ಮೀ ವರೆಗೆ ಟ್ರಾಫಿಕ್ ಜಾಮ್ ಉಂಟಾಗಿತ್ತು. ಸ್ಥಳಕ್ಕೆ ಬಂದ ನಗರ ಸಂಚಾರ ಠಾಣೆ ಪೊಲೀಸರು ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.