ಚಾಮರಾಜನಗರ: ಯುವ ಜನಾಂಗ ಮಾದಕ ವ್ಯಸನಗಳಿಗೆ ದಾಸರಾಗಿ ತಮ್ಮ ಅಮೂಲ್ಯವಾದ ಜೀವನವನ್ನ ಹಾಳು ಮಾಡಿಕೊಳ್ಳಬಾರದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಬಿ.ಟಿ.ಕವಿತಾ ತಿಳಿಸಿದರು.
ನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಸಿಇಎನ್ ಅಪರಾಧ ಪೊಲೀಸ್ ಠಾಣೆಯ ಸಹಯೋಗದಲ್ಲಿ ಸೋಮವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಾದಕ ವ್ಯಸನ ತಡೆ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರಸ್ತುತ ಸಂದರ್ಭದಲ್ಲಿ 20 ರಿಂದ 30 ವರ್ಷದೊಳಗಿನವರು ಹೆಚ್ಚಾಗಿ ಮಾದಕ ವ್ಯಸನಕ್ಕೆ ದಾಸರಾಗುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ. ವಿದ್ಯಾಭ್ಯಾಸದ ಸಮಯದಲ್ಲಿ ಇಂಥ ದುಶ್ಚಟಗಳಿಗೆ ಬಲಿಯಾದರೆ, ಜೀವನವು ಹಾಳಾಗುವ ತೆಗೆ ಇಡೀ ಕುಟುಂಬವು ಸರ್ವ ನಾಶವಾಗುತ್ತದೆ. ಹೀಗಾಗಿ ಯುವಜನಾಂಗ ಮಾದಕ ವ್ಯಸನಗಳ ಬಗ್ಗೆ ಜಾಗೃತರಾಗಬೇಕು. ವಿದ್ಯಾರ್ಥಿಗಳು ಇದರ ದುಷ್ಪರಿಣಾಮಗಳನ್ನು ಅರಿತು ಉತ್ತಮ ಸಮಾಜವನ್ನು ನಿರ್ಮಾಣ ಮಾಡಲು ಮುಂದಾಗಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಎಚ್.ಜಿ. ಲೋಕೇಶ್, ಡಿವೈಎಸ್ಪಿ ಲಕ್ಷ್ಮಯ್ಯ, ಪಟ್ಟಣ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಸಾಗರ್, ಶಿವಪ್ರಸಾದ್ ಹಾಗೂ ಇತರರು ಹಾಜರಿದ್ದರು.