ಜಿಲ್ಲೆ

ಮಾದಕ ವ್ಯಸನ ನಿಷ್ಕಲ್ಮಶ ಬದುಕಿಗೆ ಕಂಟಕ

ಚಿತ್ರದುರ್ಗ: ವಿಶ್ವದಲ್ಲಿ 30 ಕೋಟಿ ಮಂದಿ ಮಾದಕ ವಸ್ತುಗಳಿಗೆ ವ್ಯಸನಿಗಳಾಗಿದ್ದಾರೆ. ಯುವಸಮೂಹಕ್ಕೂ ಮಾರಕವಾಗಿದ್ದು, ಇದನ್ನು ಸಂಪೂರ್ಣವಾಗಿ ತಡೆಯಬೇಕಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ವಿಜಯ್ ಸಲಹೆ ನೀಡಿದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ವಕೀಲರ ಸಂಘ, ಪೊಲೀಸ್, ಆರೋಗ್ಯ ಇಲಾಖೆ, ಟಿಎಚ್‌ಒ ಕಚೇರಿ, ಜಿಲ್ಲಾ ಮಾನಸಿಕ ಆರೋಗ್ಯ ವಿಭಾಗ, ಎಸ್‌ಜೆಎಂ ತಾಂತ್ರಿಕ ಮಹಾವಿದ್ಯಾಲಯದಿಂದ ವಿದ್ಯಾಲಯದ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ವಿಶ್ವ ಮಾದಕ ವಸ್ತುಗಳ ವ್ಯಸನ ಮತ್ತು ಕಳ್ಳ ಸಾಗಾಣಿಕೆ ವಿರೋಧಿ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ಅಮಲು ಬರುವ ವಸ್ತುಗಳನ್ನು ಅಕ್ರಮವಾಗಿ ಕಳ್ಳ ಸಾಗಾಣಿಕೆ ಮಾಡಲಾಗುತ್ತಿದೆ. ಇದರ ಹಿಂದೆ ದೊಡ್ಡ ಜಾಲವಿದ್ದು, ಇದನ್ನು ತಡೆಯಲು ಯುವಸಮೂಹ ಜಾಗರೂಕರಾಗಬೇಕು. ಇಲ್ಲದಿದ್ದರೆ, ಭಾರತದ ಆರ್ಥಿಕತೆ ಮೇಲೆ ದುಷ್ಪರಿಣಾಮ ಬೀರಲಿದೆ. ತಪ್ಪಿತಸ್ಥರಿಗೆ ಕಾಯ್ದೆಯಡಿ ಜೈಲು ಶಿಕ್ಷೆ, ದಂಡ ವಿಧಿಸಲು ಅವಕಾಶವಿದೆ ಎಂದರು.

ಎಎಸ್‌ಪಿ ಎಸ್.ಜೆ.ಕುಮಾರಸ್ವಾಮಿ ಮಾತನಾಡಿ, ವಿಶ್ವದ ದೊಡ್ಡ ಅವ್ಯವಹಾರದಲ್ಲಿ ಮಾದಕ ವಸ್ತು ಮೊದಲ ಸ್ಥಾನದಲ್ಲಿದೆ. ಈ ಅಪರಾಧ ಕೃತ್ಯ ಎಸಗಿದವರಿಗೆ 6 ತಿಂಗಳಿನಿಂದ 20 ವರ್ಷ ಜೈಲು ಶಿಕ್ಷೆಯನ್ನು ಎನ್‌ಡಿಪಿಎಸ್ ನಿಯಮಾನುಸಾರ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ. ಆದ್ದರಿಂದ ದುಶ್ಚಟಕ್ಕೆ ದಾಸರಾಗದೆ, ಯುವಸಮೂಹ ಸುಂದರ ಭವಿಷ್ಯ ರೂಪಿಸಿಕೊಳ್ಳಲು ಮುಂದಾಗಿ ಎಂದು ಸಲಹೆ ನೀಡಿದರು.

ಮಾರಾಟಗಾರರ ಮಾಹಿತಿ ಪೊಲೀಸ್ ಇಲಾಖೆಗೆ ನೀಡಿದರೆ, ಅಂತವರ ವಿವರ ಗೌಪ್ಯವಾಗಿ ಇಡಲಾಗುವುದು. ಎಲ್ಲರೂ ಕೈಜೋಡಿಸಿದರೆ ಮಾತ್ರ ವ್ಯಸನ ಮುಕ್ತ ಸಮಾಜ ನಿರ್ಮಿಸಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಮಾರಣಾಂತಿಕ ಕಾಯಿಲೆ ಬರಲಿವೆ: ಮನೋವೈದ್ಯ ಡಾ.ಆರ್.ಮಂಜುನಾಥ್ ಮಾತನಾಡಿ, ಇಂಜೆಕ್ಟೆಡ್ ವೇಳೆ ಕ್ಯಾನ್ಸರ್, ಎಚ್‌ಐವಿಯಂತ ಮಾರಣಾಂತಿಕ ಕಾಯಿಲೆ ಬರುವ ಸಾಧ್ಯತೆ ಇದೆ. ರಾಷ್ಟ್ರೀಯ ಆರೋಗ್ಯ ಸರ್ವೇ ಅನ್ವಯ ಶೇ 13.4ರಷ್ಟು ಮಾನಸಿಕ ಕಾಯಿಲೆಗಳಿವೆ. ಅದರಲ್ಲಿ ಶೇ 3ರಷ್ಟು ಮಾದಕ ವಸ್ತುಗಳ ವ್ಯಸನಿಗಳಾಗಿದ್ದಾರೆ. ಹಿಂದಿನ ಕೆಲ ವರ್ಷಗಳಿಗೆ ಹೋಲಿಸಿದರೆ, ಪ್ರಸ್ತುತ ಶೇ 20ರಷ್ಟು ಹೆಚ್ಚಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

ವಕೀಲರ ಸಂಘದ ಅಧ್ಯಕ್ಷ ವೈ.ತಿಪ್ಪೇಸ್ವಾಮಿ ಮಾತನಾಡಿ, ಯುದ್ಧವಿಲ್ಲದೆ, ದೇಶವನ್ನು ನಾಶಪಡಿಸುವ ಅಸ್ತ್ರ ಡ್ರಗ್ಸ್. ಇದು ದೈಹಿಕ ಮಾತ್ರವಲ್ಲ. ಮಾನಸಿಕ ಆರೋಗ್ಯವನ್ನು ಹಾಳು ಮಾಡುತ್ತದೆ. ಈ ಮಾಫಿಯಾ ತಡೆಯಲು ಕೈಜೋಡಿಸೋಣ ಎಂದು ಸಲಹೆ ನೀಡಿದರು.

ಮಾನಸಿಕ ಆರೋಗ್ಯ ಕಾರ್ಯಕ್ರಮ ಅನುಷ್ಠಾನಾಧಿಕಾರಿ ಡಾ.ಜಿ.ಓ.ನಾಗರಾಜ್ ಮಾತನಾಡಿ, ಡ್ರಗ್ಸ್ ಸಂಬಂಧ ಪುರಾವೆಗಳು ಸ್ಪಷ್ಟವಾಗಿವೆ. ತಡೆಗಟ್ಟುವಲ್ಲಿ ಹೂಡಿಕೆ ಮಾಡಿ. ವ್ಯಸನ ಬೇರು ಸಹಿತ ಕಿತ್ತು ಹಾಕೋಣ ಎಂಬ ಘೋಷ ವಾಕ್ಯದೊಂದಿಗೆ ದಿನಾಚರಣೆ ಆಚರಿಸಲಾಗುತ್ತಿದೆ. ಸಮಾಲೋಚನೆಗಾಗಿ ಟೆಲಿ ಮಾನಸ 14416 ಉಚಿತ ಸಹಾಯವಾಣಿ ಸಂಪರ್ಕಿಸಿ ಎಂದರು.

ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಪಿ.ಬಿ.ಭರತ್, ಎನ್‌ಎಸ್‌ಎಸ್ ಸಂಚಾಲಕ ಡಾ.ನಿರಂಜನ್, ವಕೀಲರ ಸಂಘದ ಉಪಾಧ್ಯಕ್ಷ ಬಿ.ಎಂ.ಅನಿಲ್‌ಕುಮಾರ್, ಪ್ರಧಾನ ಕಾರ್ಯದರ್ಶಿ ಆರ್.ಗಂಗಾಧರ್, ಆರೋಗ್ಯ ಇಲಾಖೆ ಅಧಿಕಾರಿಗಳಾದ ಎನ್.ಎಸ್.ಮಂಜುನಾಥ್, ಬಿ.ಮೂಗಪ್ಪ, ಬಿ.ಜಾನಕಿ, ಕೆ.ಎಂ.ರಶ್ಮಿ, ಎಚ್‌ಐಒವೈ ತಿಪ್ಪೇಶ್, ಕ್ಲಿನಿಕಲ್ ಸೈಕಲಾಜಿಸ್ಟ್ ಟಿ.ಶ್ರೀಧರ, ಸೈಕಿಯಾಟ್ರಿಕ್ ಸಾಮಾಜಿಕ ಕಾರ್ಯಕರ್ತೆ ಎನ್.ಸುನೀತಾ, ಆರ್.ರೂಪಾ, ಅರುಣ ಕೀರ್ತಿ, ಟಿ.ಶಿವರಾಜ್ ಇತರರಿದ್ದರು.