ಜಿಲ್ಲೆ

ಮಾದಕ ವಸ್ತುಗಳಿಂದ ವಿದ್ಯಾರ್ಥಿಗಳು ದೂರ ಇರಿ:ಎಸ್‌ಪಿ ಮೊಹಮದ್ ಸುಜೀತಾ

ಹಾಸನ: ಮಕ್ಕಳು, ವಿದ್ಯಾರ್ಥಿಗಳು ಮಾದಕ ವಸ್ತುಗಳಿಂದ ದೂರ ಇರಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮದ್ ಸುಜೀತಾ ಹೇಳಿದರು.
ನಗರದ ಅರಸೀಕೆರೆ ರಸ್ತೆಯ ಬಿ.ಕಾಟಿಹಳ್ಳಿಯಲ್ಲಿರುವ ಎಪಿಜೆ ಪದವಿ ಕಾಲೇಜಿನಲ್ಲಿ ಬುಧವಾರ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಾದಕ ವಸ್ತು ದುರುಪಯೋಗ ಮತ್ತು ಅಕ್ರಮ ಕಳ್ಳ ಸಾಗಣೆ ತಡೆ ದಿನಾಚರಣೆ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿ, ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಇಂದು ಎಷ್ಟೋ ಮಕ್ಕಳು ಚಿಕ್ಕ ವಯಸ್ಸಿನಲ್ಲೇ ಮಾದಕ ವಸ್ತುಗಳಿಗೆ ದಾಸರಾಗಿ ತಮ್ಮ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ. ಪ್ರತಿಯೊಬ್ಬರೂ ಮಾದಕ ವಸ್ತುಗಳಿಂದ ದೂರವಿರಬೇಕು ಎಂದು ಕರೆ ನೀಡಿದರು.
ಮಾದಕ ವಸ್ತು ಸೇವನೆಯಿಂದಾಗಿ ಅನೇಕರು ದೈಹಿಕವಾಗಿ ಹಾಗೂ ಮಾನಸಿಕವಾಗಿ ಕುಗ್ಗಿ ಹೋಗಿದ್ದಾರೆ. ಹಾಗಾಗಿ ಇಂತಹ ದುಶ್ಚಟಗಳಿಗೆ ಯುವ ಪೀಳಿಗೆ ಯಾವುದೇ ಕಾರಣಕ್ಕೂ ದಾಸರಾಗಬಾರದು. ಮಾದಕ ವಸ್ತು ಸೇವನೆಗೆ ಪ್ರಚೋದನೆ ನೀಡುವುದು ಅಥವಾ ಮಾರಾಟ ಮಾಡುವುದು ಕಂಡು ಬಂದರೆ ಕೂಡಲೇ ನಮ್ಮ ಕಚೇರಿಗೆ ಅಥವಾ ಹತ್ತಿರದ ಪೊಲೀಸ್ ಠಾಣೆಗೆ ತಿಳಿಸುವಂತೆ ಸಲಹೆ ನೀಡಿದರು.
ಕೆ.ಆರ್.ಪುರಂ ಠಾಣೆ ಇನ್ಸ್‌ಪೆಕ್ಟರ್ ಸ್ವಾಮಿನಾಥ ಅವರು ಮಾತನಾಡಿ, ಇಂದಿನ ಯುವ ಪೀಳಿಗೆ ಮಾದಕ ವಸ್ತುಗಳ ಜತೆಗೆ ಸೋಷಿಯಲ್ ಮೀಡಿಯಾವನ್ನು ಅತಿ ಹೆಚ್ಚು ಬಳಸುತ್ತಿರುವುದರಿಂದ ಬಹುತೇಕ ಮಕ್ಕಳ ಪೋಷಕರು ನಮ್ಮ ಠಾಣೆಗೆ ಬಂದು ದೂರು ನೀಡುತ್ತಿರುವುದನ್ನು ನಾವು ಕಾಣುತ್ತಿದ್ದೇವೆ. ಸೋಷಿಯಲ್ ಮೀಡಿಯಾದಲ್ಲಿ ಮಕ್ಕಳ ಫೋಟೋಗಳನ್ನು ಹೇಗೆ ಬೇಕೋ ಹಾಗೆ ಬಳಸಿಕೊಂಡು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಇಂತಹ ಅನೇಕ ಅಪರಾಧಿಗಳನ್ನು ನಾವು ಬಂಧಿಸಿದ್ದೇವೆ. ಇಂದಿನ ಮಕ್ಕಳು ಸಹ ಮಾದಕ ವಸ್ತುಗಳು ಹಾಗೂ ಬೇರೆ ಬೇರೆ ಬೇಡವಾದ ಚುಟವಟಿಕೆಗಳಿಗೆ, ಕೃತ್ಯಗಳಿಗೆ ಪ್ರೇರೇಪಣೆ ನೀಡುವ ಸಾಮಾಜಿಕ ಜಾಲತಾಣಗಳಿಂದಲೂ ದೂರ ಇರಬೇಕೆಂದು ಮನವಿ ಮಾಡಿದರು.
ಇದಕ್ಕೂ ಮುನ್ನ ಮಾದಕ ವಸ್ತುಗಳಿಂದ ದೂರ ಇರುತ್ತೇವೆ ಎಂದು ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಲಾಯಿತು.
ಈ ಸಂದರ್ಭದಲ್ಲಿ ಕಾಲೇಜಿನ ನಿರ್ದೇಶಕರು, ಪ್ರಾಂಶುಪಾಲರು ಹಾಗೂ ಸಿಬ್ಬಂದಿ, ಸಿಬ್ಬಂದಿಯೇತರ ವರ್ಗದವರ ಜತೆಗೆ 250ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗಿಯಾಗಿದ್ದರು.