ವಿಜಯವಾಣಿ ಸುದ್ದಿಜಾಲ ಧಾರವಾಡ
ಸಾಮಾಜಿಕ ಅಶಾಂತಿಗೆ ಕಾರಣವಾಗುವ ಮಾದಕ ವಸ್ತು, ಅಕ್ರಮ, ಅನೈತಿಕತೆಗಳನ್ನು ಮನುಷ್ಯರ ಮನಸ್ಥಿತಿ ಬದಲಾಗದೆ ತಡೆಯುವುದು ಕಷ್ಟ ಸಾಧ್ಯ. ಸಮಾಜ ಸುಶಾಂತಿಯಿಂದ ಇರಲು ಸಾರ್ವಜನಿಕರ ಸಹಕಾರ ಮುಖ್ಯ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಪಿ.ಎಫ್ . ದೊಡ್ಡಮನಿ ಹೇಳಿದರು.
ಅಂತರಾಷ್ಟ್ರೀಯ ಮಾದಕ ವಸ್ತುಗಳ ಸೇವನೆ ಹಾಗೂ ಅಕ್ರಮ ಕಳ್ಳ ಸಾಗಾಣಿಕೆ ವಿರೋಧಿ ದಿನ ನಿಮಿತ್ತ ಇಲ್ಲಿನ ಆಲೂರು ವೆಂಕಟರಾವ್ ಭವನದಲ್ಲಿ ಜಿಲ್ಲಾಡಳಿತ, ಜಿಪಂ, ಆರೋಗ್ಯ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಪೊಲೀಸ್ ಇಲಾಖೆ ಹಾಗೂ ಇತರ ಇಲಾಖೆಗಳ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಾದಕ ವಸ್ತು ಮಾರಾಟ, ಸೇವನೆ ಅಪರಾಧವಾಗಿದ್ದರೂ ಕೆಲವು ಸಮಾಜ ಘಾತುಕ ಶಕ್ತಿಗಳು ಇದನ್ನು ವೃತ್ತಿಯಾಗಿ ಮಾಡಿಕೊಂಡಿವೆ. ಪೊಲೀಸ್ ಹಾಗೂ ಇತರ ಶಿಕ್ಷಾ ಸಂಸ್ಥೆಗಳಿದ್ದರೂ ಅವರಿಗೆ ಭಯವಿಲ್ಲ. ಕಾಯ್ದೆ, ಕಾನೂನುಗಳ ಜತೆಗೆ ಜನರ ಸಹಕಾರವಿದ್ದರೆ ಮಾತ್ರ ಇಂತಹ ಹೀನ ಕೃತ್ಯಗಳನ್ನು ನಿಯಂತ್ರಿಸಿ, ಮಟ್ಟ ಹಾಕಲು ಸಾಧ್ಯ ಎಂದರು.
ಇತ್ತಿಚಿನ ದಿನಗಳಲ್ಲಿ ಮಹಿಳೆ ಮತ್ತು ಮಕ್ಕಳ ಕಳ್ಳ ಸಾಗಾಣಿಕೆ, ಅಕ್ರಮ ಮಾರಾಟ ಹೆಚ್ಚುತ್ತಿದೆ. ಸಾಮಾಜಿಕ ಕಟ್ಟೆಚ್ಚರ ಮುಖ್ಯ. ಶಾಲಾ ಕಾಲೇಜುಗಳಲ್ಲಿ, ಸಂಘ, ಸಂಸ್ಥೆಗಳಲ್ಲಿ ಮತ್ತು ಮಹಿಳಾ ಗುಂಪುಗಳಲ್ಲಿ ಮಹಿಳೆ ಮತ್ತು ಮಕ್ಕಳ ಮಾರಾಟದ ಬಗ್ಗೆ, ಅಕ್ರಮ ಸಾಗಾಣಿಕೆ ಬಗ್ಗೆ ಜಾಗೃತಿ ಮೂಡಿಸಬೇಕು ಎಂದರು.
ಪೊಲೀಸ್ ಅಧೀಕ್ಷಕ ಡಾ. ಗೋಪಾಲ ಬ್ಯಾಕೋಡ ಮಾತನಾಡಿ, ಮಾದಕ ವಸ್ತು ವ್ಯಸನಿ ತನ್ನ ಮಾನ, ಪ್ರಾಣ ಮತ್ತು ಆಸ್ತಿ ಹಾನಿ ಮಾಡಿಕೊಳ್ಳುತ್ತಾನೆ. ಇದರ ಅರಿವು ಇಲ್ಲದೆ ಮಕ್ಕಳು, ಯುವಕರು ಮಾದಕ ಸೇವನೆಗೆ ಒಳಗಾಗುತ್ತಿದ್ದಾರೆ. ಇದನ್ನು ತಡೆಗಟ್ಟಬೇಕು ಎಂದರು.
ಜಿಲ್ಲಾ ಆರೋಗ್ಯಾಧಿಕಾರಿ ಡಾ.ಶಶಿ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಸಂಗಪ್ಪ ಗಾಬಿ, ಜಿಲ್ಲಾ ಸಮೀಕ್ಪಣಾಧಿಕಾರಿ ಡಾ. ಪರಶುರಾಮ ಎಫ್ .ಕೆ., ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ. ಮಹೇಶ ಚಿತ್ತರಗಿ, ಡಾ.ಮಂಜುನಾಥ ಎಸ್., ಡಾ.ರವೀಂದ್ರ ಬೊವೇರ, ಡಾ.ಕೆ.ಎನ್.ತನುಜಾ, ಇತರರು ಇದ್ದರು. ಎಂ.ಎನ್.ಅಗಡಿ ನಿರೂಪಿಸಿದರು.