ಜಿಲ್ಲೆ

ಮಾದಕ ವಸ್ತುಗಳ ಸೇವನೆಯಿಂದ ಭವಿಷ್ಯ ಹಾಳು

ಚಾಮರಾಜನಗರ: ಇತ್ತೀಚಿನ ದಿನಗಳಲ್ಲಿ ದಿನದಿಂದ ದಿನಕ್ಕೆ ಯುವ ಜನತೆ ಮಾದಕ ವಸ್ತು ಸೇವನೆಗೆ ಒಳಗಾಗಿ ತಮ್ಮ ಭವಿಷ್ಯವನ್ನು ಹಾಳು ಮಾಡಿಕೊಳ್ಳುತ್ತಿವ ಹಿನ್ನೆಲೆಯಲ್ಲಿ ಎಷ್ಟೋ ಕುಟುಂಬಗಳು ಬೀದಿ ಪಾಳಾಗುತ್ತಿವೆ ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ಅಭಿಪ್ರಾಯಪಟ್ಟರು.

ತಾಲೂಕಿನ ಕುದೇರು ಗ್ರಾಮದ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಜಿಲ್ಲಾ ಯೂತ್ ಕಾಂಗ್ರೆಸ್ ಹಾಗೂ ಕಾಲೇಜು ಇಕೋಕ್ಲಬ್ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ಮಾದಕ ಸೇವನೆಯಿಂದ ಉಂಟಾಗುವ ದುಷ್ಪಪರಿಣಾಮಗಳ ಕುರಿತ ಅರಿವು ಕಾರ‌್ಯಕ್ರಮದಲ್ಲಿ ಅವರು ಮಾತನಾಡಿದರು. ವಿದ್ಯಾರ್ಥಿಗಳು ಚಟಗಳಿಗೆ ಬಲಿಯಾಗದೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿ ಸಜ್ಜಾಗಬೇಕು. ಉನ್ನತ ಉದ್ಯೋಗ ಪಡೆದುಕೊಳ್ಳುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಮುಂದಾಗಬೇಕು ಎಂದರು.

ಸಂತೇಮರಹಳ್ಳಿ ಸಮುದಾಯ ಆರೋಗ್ಯ ಕೇಂದ್ರದ ಆಪ್ತ ಸಮಾಲೋಚಕ ಮಂಜುನಾಥ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ 18 ವರ್ಷ ಒಳಪಟ್ಟ ಯುವಕರು ಮಾದಕ ಹಾಗೂ ಮಧ್ಯ ಪಾನ ಸೇವನೆಗೆ ಒಳಗಾಗುತ್ತಿರುವ ಸಂಖ್ಯೆ ಹೆಚ್ಚಾಗುತ್ತಿದೆ. ಇದನ್ನು ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಪ್ರತಿಯೊಬ್ಬರ ಸಹಕಾರ ಮುಖ್ಯವಾಗಿದೆ. ಮಾದಕ ಸೇವನೆಯಿಂದ ಗಂಟಲು ಕ್ಯಾನ್ಸರ್, ಶ್ವಾಸಕೋಸ ಕ್ಯಾನ್ಸರ್ ಸೇರಿದಂತೆ ನಾನಾ ತೊಂದರೆಗಳು ಉಂಟಾಗುತ್ತದೆ ಎಂದು ತಿಳಿಸಿದರು.

ಇದೇ ವೇಳೆ ಮಾದಕ ವಸ್ತುಗಳ ಸೇವನೆಯ ದುಷ್ಪರಿಣಾಮಗಳ ಕುರಿತು ಭಿತ್ತಿ ಪತ್ರ ಪ್ರದರ್ಶಿಸಿ ಅರಿವು ಮೂಡಿಸಲಾಯಿತು. ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ವಿ.ಚಂದ್ರು. ಚಾಮುಲ್ ನಾಮ ನಿರ್ದೇಶಕ ಕಮರವಾಡಿ ರೇವಣ್ಣ, ಕಾಲೇಜು ಸಮಿತಿ ಉಪಾಧ್ಯಕ್ಷ ಸುರೇಶ್, ಪ್ರಾಂಶುಪಾಲ ಶಿವಪ್ರಕಾಶ್, ಮುಖ್ಯ ಶಿಕ್ಷಕ ತಮ್ಮಯ್ಯ, ಪಿಎಸ್‌ಐ ಕುಮುದಾ, ಪಿಎಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ವಸುಪಾಲ್, ಉಪಾಧ್ಯಕ್ಷ ಮಹದೇವಯ್ಯ, ನಿರ್ದೇಶಕ ಕೆ.ಎಂ.ರಾಜೇಂದ್ರಸ್ವಾಮಿ, ಗ್ರಾ.ಪಂ.ಸದಸ್ಯ ಕೆ.ಎಂ.ಅಶೋಕ್, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಯೋಗೇಂದ್ರ, ಉಪಾಧ್ಯಕ್ಷ ಚಂದನ್ ಪುಟ್ಟಬುದ್ದಿ, ಬ್ಲಾಕ್ ಅಧ್ಯಕ್ಷರಾದ ವಿಜಯ್, ಅಜಯ್ ಮತ್ತು ಇತರರು ಹಾಜರಿದ್ದರು.