ಜಿಲ್ಲೆ

ಮಾದಕ ವಸ್ತುಗಳ ಸಾಗಾಣಿಕೆ, ಮಾರಾಟ ಪತ್ತೆಗೆ ಕ್ರಮ ವಹಿಸಲು ಜಿಲ್ಲಾಧಿಕಾರಿ ಸಿ. ಸತ್ಯಭಾಮಾ ಸೂಚನೆ

ಹಾಸನ: ಜಿಲ್ಲೆಯಲ್ಲಿ ಮಾದಕ ವಸ್ತುಗಳ ಸಾಗಾಣಿಕೆ, ಮಾರಾಟ ಹಾಗೂ ಸೇವನೆಯನ್ನು ಪತ್ತೆ ಹಚ್ಚಿ ಸೂಕ್ತ ಕ್ರಮ ವಹಿಸುವಂತೆ ಜಿಲ್ಲಾಧಿಕಾರಿ ಸಿ. ಸತ್ಯಭಾಮಾ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಜಿಲ್ಲಾ ನಾರ್ಕೋ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಮಾದಕ ವಸ್ತುಗಳು ಸಮಾಜದ ಮೇಲೆ ದುಷ್ಪರಿಣಾಮ ಬೀರುತ್ತಿವೆ. ಅಧಿಕಾರಿಗಳು ಇದನ್ನು ಗಂಭೀರವಾಗಿ ಪರಿಗಣಿಸಿ ಪತ್ತೆ ಮಾಡುವುದರ ಜತೆಗೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ತಿಳಿಸಿದರು.

ಸಭೆಗೆ ಹಾಜರಾಗದ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಅವರು ಅಧಿಕಾರಿಗಳಿಗೆ ನೊಟೀಸ್ ನೀಡುವಂತೆ ನಿರ್ದೇಶನ ನೀಡಿದರು. ಅಧಿಕಾರಿಗಳು ಕಾಟಾಚಾರಕ್ಕೆ ಕೆಲಸ ಮಾಡಬೇಡಿ. ಯಾವುದೇ ಉದಾಸೀನ ಮಾಡದೆ ಕರ್ತವ್ಯ ನಿರ್ವಹಿಸಿ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು. ಎಲ್ಲಾ ಇಲಾಖೆಗಳ ಅಧಿಕಾರಿಗಳು ಪ್ರತಿ ತಿಂಗಳಿಗೆ ನಿಗದಿಪಡಿಸಿರುವ ನಿರ್ದಿಷ್ಟ ಗುರಿಯನ್ನು ಕಡ್ಡಾಯವಾಗಿ ಸಾಧಿಸಲು ಸೂಚಿಸಿದರು. ಯಾವ ವ್ಯಾಪ್ತಿಯಲ್ಲಿ ಲೋಪವಾಗಿದೆ ಎಂಬುದನ್ನು ಗಮನಿಸಿ ಸಂಬಂದಪಟ್ಟ ಇಲಾಖೆ ಅಧಿಕಾರಿಗಳನ್ನೇ ಜವಾಬ್ದಾರರಾಗಿ ಮಾಡಲಾಗುವುದು ಎಂದು ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜೀತಾ ಅವರು ಮಾತನಾಡಿ, ಮಾದಕ ವಸ್ತು ಸಾಗಾಣಿಕೆ, ಸೇವನೆ ಬಹಳ ಗಂಭೀರವಾದ ವಿಷಯ. ಎಲ್ಲರೂ ಜಾಗ್ರತೆ ವಹಿಸಬೇಕು. ಸರ್ಕಾರಿ ಮತ್ತು ಖಾಸಗಿ ವಸತಿ ನಿಲಯಗಳ ವಾರ್ಡನ್ ಅವರ ಪ್ರತ್ಯೇಕ ಗ್ರೂಪ್ ರಚಿಸಿ ಮಕ್ಕಳ ಚಲನವಲನ ಗಮನಿಸಿ ಗ್ರೂಪ್‌ನಲ್ಲಿ ಮಾಹಿತಿ ನೀಡುವಂತೆ ಸೂಚಿಸಿದರಲ್ಲದೆ, ಅರಿವು ಕಾರ್ಯಕ್ರಮವನ್ನು ಹಮ್ಮಿಕೊಳ್ಳುವಂತೆ ತಿಳಿಸಿದರು.

ಸಭೆಯಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಸೌರಭ್ ಕುಮಾರ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವೆಂಕಟೇಶ್ ನಾಯ್ಡು, ತಮ್ಮಯ್ಯ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಅನಿಲ್, ಹಿಮ್ಸ್ ನಿರ್ದೇಶಕ ರಾಜಣ್ಣ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.