ಜಿಲ್ಲೆ

ಮಾದಕ ವಸ್ತುಗಳ ವ್ಯಸನಕ್ಕೆ ಯುವಜನತೆ ಬಲಿ

ಕೆ.ಆರ್.ಪೇಟೆ: ಪಟ್ಟಣದ ಕ್ರೈಸ್ತ ದಿ ಕಿಂಗ್ ಪದವಿ ಪೂರ್ವ ಕಾಲೇಜಿನಲ್ಲಿ ಅಂತರಾಷ್ಟ್ರೀಯ ಮಾದಕ ವಸ್ತುಗಳ ಸೇವನೆ ಹಾಗೂ ಕಳ್ಳ ಸಾಗಣೆ ವಿರೋಧಿ ದಿನಾಚರಣೆ ಗುರುವಾರ ನಡೆಯಿತು.


ಕಾಲೇಜಿನ ಉಪನ್ಯಾಸಕಿ ಪಲ್ಲವಿ ಮಾತನಾಡಿ, ಯುವಜನತೆ ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಮಾದಕ ವಸ್ತುಗಳ ವ್ಯಸನಕ್ಕೆ ಹೆಚ್ಚು ದಾಸರಾಗುತ್ತಿದ್ದಾರೆ. ಕುತೂಹಲ, ಸ್ನೇಹಿತರ ಒತ್ತಡ, ಗೆಳೆಯರ ಗುಂಪಿನಲ್ಲಿ ಒಂದಾಗಬೇಕೆಂಬ ಭಾವನೆ, ಮನೆಯ ವಾತಾವರಣ, ಜಾಹೀರಾತು, ಸಿನಿಮಾಗಳು ಕಾರಣವಾಗಿವೆ. ಹೀಗಾಗಿ 1987 ಜೂ.26ರಂದು ವಿಶ್ವ ಆರೋಗ್ಯ ಸಂಸ್ಥೆ ಈ ದಿನವನ್ನು ಜಾರಿಗೆ ತಂದಿದೆ. ವಿಶ್ವದಾದ್ಯಂತ ಈ ಒಂದು ಕಾರ್ಯಕ್ರಮವನ್ನು ಆಚರಣೆ ಮಾಡುವುದರ ಮೂಲಕ ಜಾಗೃತಿಯನ್ನು ಮೂಡಿಸಿ ಇದರ ಬಗ್ಗೆ ಸಮುದಾಯವು ಎಚ್ಚೆತ್ತುಕೊಳ್ಳುವಂತೆ ಮಾರ್ಗದರ್ಶನವನ್ನು ನೀಡುತ್ತಾ ಬಂದಿದೆ ಎಂದರು.


ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಮ್ಮ ಮಾತನಾಡಿ, ಮಾದಕ ವಸ್ತುಗಳ ಸೇವನೆಯಿಂದ ಅನೇಕ ಜನರು ಗಂಭೀರ ಕಾಯಿಲೆಗಳಿಗೆ ತುತ್ತಾಗುತ್ತಿದ್ದು, ಬಹುಬೇಗ ಜೀವವನ್ನು ಕಳೆದುಕೊಳ್ಳುತ್ತಿದ್ದಾರೆ. ಮಾದಕ ವಸ್ತುಗಳ ಬಳಕೆಯಿಂದ ಕ್ರಮೇಣ ಮೆದುಳಿನಲ್ಲಿ ಬದಲಾವಣೆ ಉಂಟಾಗಿ ವ್ಯಕ್ತಿಗಳು ಮಾದಕ ವಸ್ತುಗಳನ್ನು ಹೆಚ್ಚು ಹೆಚ್ಚು ಬಯಸುವಂತೆ ಮಾಡುತ್ತದೆ. ದೀರ್ಘ ಕಾಲದ ಮಾದಕ ವಸ್ತುಗಳ ಸೇವನೆಯಿಂದ ಮೆದುಳಿನ ಕ್ರಿಯೆಗಳಾದ ಕಲಿಕೆ, ತೀರ್ಪು, ನಿರ್ಧಾರ, ವರ್ತನೆ ನಿಯಂತ್ರಣ ಮುಂತಾದವುಗಳ ನಿರ್ವಹಣೆಯ ಮೇಲೆ ಕೆಟ್ಟ ಪರಿಣಾಮಗಳು ಬೀರುತ್ತವೆ. ಇದರೊಂದಿಗೆ ವ್ಯಕ್ತಿಗಳು ಕಾಲಕ್ರಮೇಣ ದುರ್ಬಲರಾಗಿ ಖಿನ್ನತೆಗೆ ಮತ್ತು ಬೇರೆ ರೀತಿಯ ಮಾನಸಿಕ ಅಸ್ವಸ್ಥತೆಗೂ ಒಳಗಾಗಬಹುದು. ಇದನ್ನು ಅರಿತು ವಿದ್ಯಾರ್ಥಿಗಳು ಜೀವನದಲ್ಲಿ ಒಳ್ಳೆಯ ಹವ್ಯಾಸಗಳನ್ನು ಬೆಳೆಸಿಕೊಂಡು ದುಶ್ಚಟಗಳಿಂದ ದೂರವಿರಬೇಕೆಂದು ಕಿವಿಮಾತು ಹೇಳಿದರು.


ತಾಲೂಕು ಆರೋಗ್ಯ ನಿರೀಕ್ಷಕ ಸತೀಶ್, ಉಪನ್ಯಾಸಕರಾದ ಪಲ್ಲವಿ, ರಮ್ಯಾ, ರಾಜು, ಸತೀಶ್, ಅವಿನಾಶ್, ದಯಾನಂದ, ನಿರ್ಮಲಾ ಹಾಗೂ ಕಾಲೇಜಿನ ವಿದ್ಯಾರ್ಥಿ, ವಿದ್ಯಾರ್ಥಿನಿಯರು, ಸಿಬ್ಬಂದಿ ಇದ್ದರು.