ಕಳಸದಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ಮುಖಂಡ ಕೆ.ಸಿ.ಧರಣೇಂದ್ರ ಸಮಸ್ಯೆ ಹೇಳಿಕೊಂಡರು. ಆದರ್ಶ, ಚಂದ್ರಶೇಖರ್ ಇತರರಿದ್ದರು. 
ಜಿಲ್ಲೆ

ಮಾದಕ ವಸ್ತುಗಳ ಮಾರಾಟ ತಡೆಗೆ ಸಹಕರಿಸಿ

ಕಳಸ: ಮಾದಕ ವಸ್ತುಗಳ ಮಾರಾಟ, ಸೇವನೆ, ಸುಳ್ಳು ಸುದ್ದಿ ಹಬ್ಬಿಸುವುದು, ಸಮಾಜದಲ್ಲಿ ಶಾಂತಿ ಕೆಡಿಸುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಕೊಪ್ಪ ಡಿವೈಎಸ್‌ಪಿ ಬಾಲಾಜಿ ಸಿಂಗ್ ಹೇಳಿದರು.

ಮಂಗಳವಾರ ನಡೆದ ಜನಸಂಪರ್ಕ ಸಭೆಯಲ್ಲಿ ಮಾತನಾಡಿದ ಅವರು, ಡ್ರಗ್ಸ್‌ಮುಕ್ತ ಪ್ರದೇಶವನ್ನಾಗಿಸಲು ಗ್ರಾಮಸ್ಥರು ಸಹಕಾರ ನೀಡಬೇಕು. ಗಾಂಜಾ ಮುಂತಾದ ಮಾದಕ ವಸ್ತುಗಳ ಸೇವನೆ ಕಂಡುಬಂದಲ್ಲಿ ಇಲಾಖೆಗೆ ಮಾಹಿತಿ ನೀಡಿ. ಯಾರೂ ಸುಳ್ಳು ಸುದ್ದಿಗಳನ್ನು ಹಬ್ಬಿಸಬಾರದು. ಸಮಾಜ ಘಾತುಕ ಕೆಲಸ ಮಾಡುವುದು, ಸಮಾಜದ ಸ್ವಾಸ್ಥ ಹಾಳುಮಾಡುವ ಪೋಸ್ಟರ್‌ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಬ್ಬಿಸಿದರೆ ಕ್ರಮ ಕೈಗೊಳ್ಳುತ್ತೇವೆ. ಈಗಾಗಲೇ ಕಳಸದಲ್ಲಿ ಕೆಲವರ ವಿರುದ್ಧ ಕೇಸ್ ದಾಖಲಿಸಿಕೊಳ್ಳಲಾಗಿದೆ ಎಂದು ಹೇಳಿದರು.

ತಾಪಂ ಮಾಜಿ ಸದಸ್ಯ ಮಹಮ್ಮದ್ ರಫೀಕ್ ಮಾತನಾಡಿ, ಈ ಹಿಂದೆ ಕೆಲ ಮುಖಂಡರು ಸಭೆ ಸೇರಿ ಕಳಸದಲ್ಲಿ ಜನಸಂಪರ್ಕ ಸಭೆ ನಡೆಸಬೇಕು ಎಂದು ಒತ್ತಾಯಿಸಿದ್ದರು. ಆದರೆ ಅದು ಸರ್ವಪಕ್ಷಗಳ ಸಭೆ ಅಲ್ಲ. ನಾನು ಕಾಂಗ್ರೆಸ್ ಮುಖಂಡ. ನನಗೆ ಯಾವುದೇ ಮಾಹಿತಿ ಇರಲಿಲ್ಲ. ಸುಹಾಸ್ ಶೆಟ್ಟಿ ಕೊಲೆ ಆರೋಪದಲ್ಲಿ ಕಳಸದಲ್ಲಿ ಇಬ್ಬರ ಬಂಧನ ಆಗಿ ಎರಡು ತಿಂಗಳ ನಂತರ ಕಳಸದಲ್ಲಿ ಮಾದಕ ವಸ್ತುಗಳು ಮಾರಾಟವಾಗುತ್ತಿದೆ ಎಂದು ತಿಳಿಯಿತೇ? ಇದಕ್ಕಿಂತ ಮುಂಚಿತವಾಗಿ ಯಾಕೆ ಈ ಮುಖಂಡರು ಪ್ರಶ್ನೆ ಮಾಡಿಲ್ಲ. ಕಳಸದಲ್ಲಿ ಯಾವುದೇ ರೀತಿಯ ಕಾನೂನು ಸುವ್ಯವಸ್ಥೆ ಕೆಟ್ಟಿಲ್ಲ. ಮಾದಕ ವಸ್ತುಗಳ ಮಾರಾಟ, ಸೇವನೆ ಗೊತ್ತಿದ್ದವರು ಯಾಕೆ ಪೊಲೀಸ್ ಠಾಣೆಗೆ ತಿಳಿಸಿಲ್ಲ. ಜನಸಂಪರ್ಕ ಸಭೆ ಮಾಡಬೇಕು ಎಂದು ಹೇಳಿದವರು ಯಾಕೆ ಈ ಸಭೆಗೆ ಹಾಜರಾಗಲಿಲ್ಲ ಎಂದು ಪ್ರಶ್ನಿಸಿದರು.

ಸರ್ಕಾರಿ ಶಾಲೆಗಳಲ್ಲಿ ಅತಿಥಿ ಶಿಕ್ಷಕರು ಶಾಲೆ ಬಾಗಿಲು ತೆರೆಯುತ್ತಾರೆ. ಆದರೆ ಕಾಯಂ ಶಿಕ್ಷಕರು ಬೆಳಗ್ಗೆ 11.30ಕ್ಕೆ ಶಾಲೆಗೆ ಬರುತ್ತಾರೆ. ರಜೆ ಹಾಕಿದರೂ ಯಾರೂ ಕೇಳೋರಿಲ್ಲ. ಇದರಿಂದ ಸರ್ಕಾರಿ ಶಾಲೆಗಳು ಮುಚ್ಚುತ್ತಿವೆ. ಕಳಸ ಸಮುದಾಯ ಆರೋಗ್ಯ ಕೇಂದ್ರದಲ್ಲೂ ಅಲ್ಲಿಯ ಸಿಬ್ಬಂದಿ 11.30ಕ್ಕೆ ಕೆಲಸಕ್ಕೆ ಹಾಜರಾಗುತ್ತಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಸಿಪಿಐ ಮುಖಂಡ ರಮೇಶ್ ಕೆಳಗೂರು ತಿಳಿಸಿದರು.

ಪ್ರವಾಸೋದ್ಯಮಕ್ಕೆ ಪೂರಕವಾಗಿರುವ ಇಲ್ಲಿ ಹೋಂಸ್ಟೇ ನಡೆಸಲು ಕಾನೂನು ಸಡಿಲಿಸಿ ಅನುಮತಿ ನೀಡಬೇಕು. ಎಸ್.ಕೆ. ಬಾರ್ಡರ್-ಕಳಸ ರಸ್ತೆ ಹದಗೆಟ್ಟಿದೆ. ಅದನ್ನು ಸರಿಪಡಿಸಿಕೊಡಬೇಕು. ರಸ್ತೆ ಬದಿಯಲ್ಲಿ ಗಿಡ ನೆಡುವುದನ್ನು ನಿಲ್ಲಿಸಬೇಕು ಎಂದು ಕೆಂ ಗನಕೊಂಡ ನಿವಾಸಿ ರಾಮಪ್ರಕಾಶ್ ಮನವಿ ಮಾಡಿದರು. ವನ್ಯ ಜೀವಿಗಳ ಉಪಟಳದಿಂದ ರೈತರು ಸಂಕಷ್ಟ ಎದುರಿಸುತ್ತಿದ್ದಾರೆ. ಇದಕ್ಕೆ ಅರಣ್ಯ ಇಲಾಖೆ ಸೂಕ್ತ ಮಾರ್ಗೋಪಾಯ ಕಂಡುಕೊಳ್ಳಬೇಕು. ಕಳಸ ಭಾಗಕ್ಕೆ ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಿದ್ದು, ಅವರ ವರ್ತನೆ ಇಲ್ಲಿನ ಜನರ ಮೇಲೆ ಪ್ರಭಾವ ಬೀರುತ್ತಿದೆ. ಇದನ್ನು ಇಲಾಖೆ ಗಮನಿಸಬೇಕು ಎಂದು ಮುಖಂಡ ಕೆ.ಸಿ.ಧರಣೇಂದ್ರ ತಿಳಿಸಿದರು. ಈ ಹಿಂದೆ ಕಳಸದಲ್ಲಿ ನಡೆದ ಜಿಲೆಟಿನ್ ಕಡ್ಡಿ, ಪೆಟ್ರೋಲ್ ಬಾಂಬ್, ಬಸ್ರಿಕಲ್ ಗೇಟ್ ಮೇಲೆ ಪೆಟ್ರೋಲ್ ಬಾಂಬ್ ಸ್ಫೋಟ ಪ್ರಕರಣಗಳನ್ನು ಮರು ತನಿಖೆ ಮಾಡಬೇಕು ಎಂದು ಅಬ್ದುಲ್ ಅಝೀಝ್ ಒತ್ತಾಯಿಸಿದರು.

ಕಳಸದಲ್ಲಿ ಮಾದಕ ವಸ್ತುಗಳ ಹಾವಳಿ ಹೆಚ್ಚಾಗುತ್ತಿದೆ. ಕಾಫಿ ತೋಟವೊಂದರಲ್ಲಿ ಮಿಲಿಟರಿ ಸಮವಸ್ತ್ರ ಧರಿಸಿದ ಸುಮಾರು 50 ಭದ್ರತಾ ಸಿಬ್ಬಂದಿ ಆಸುಪಾಸಿನ ತೋಟಗಳ ಕಷಿಕರಿಗೆ ಬೆದರಿಕೆ ಹಾಕುತ್ತಿದ್ದಾರೆ. ಈ ಕಾರಣಕ್ಕಾಗಿ ಜಿಲ್ಲಾಧಿಕಾರಿ ಹಾಗೂ ಎಸ್ಪಿ ಕಳಸಕ್ಕೆ ಬಂದು ಸಾರ್ವಜನಿಕ ಸಭೆ ನಡೆಸಿ ಪರಿಹರಿಸಬೇಕು. ಇಲ್ಲದಿದ್ದರೆ ಪ್ರತಿಭಟನೆ ಮಾಡುತ್ತೇವೆ ಎಂದು ಕಳಸ ರಾಜಕೀಯ ಮುಖಂಡರು ಜೂ.18ರಂದು ಸಭೆ ಸೇರಿ ತಿಳಿಸಿದ್ದರು. ಅಂದು ಸೇರಿದ್ದ ಮುಖಂಡರು ಯಾರೂ ಮಂಗಳವಾರದ ಜನಸಂಪರ್ಕ ಸಭೆಗೆ ಹಾಜರಾಗಲಿಲ್ಲ.

ಕಳಸದಲ್ಲಿ ಆಟೋ ಪಾರ್ಕಿಂಗ್ ಸಮಸ್ಯೆ ಇದ್ದು, ಆಟೋ ಸ್ಟಾೃಂಡ್‌ಗೆ ಗ್ರಾಪಂ ಅನುಮತಿ ನೀಡಬೇಕು ಎಂದು ಆಟೋ ಚಾಲಕ ಅಭಿ ತಿಳಿಸಿದರು. ತಹಸೀಲ್ದಾರ್ ಕಾವ್ಯಾ, ಕುದುರೆಮುಖ ವತ್ತ ನಿರೀಕ್ಷಕ ಪ್ರಕಾಶ್, ಆರ್‌ಎ್ಒ ನಿಶ್ಚಿತ್, ಕುದುರೆಮುಖ ಪಿಎಸ್‌ಐ ಆದರ್ಶ, ಕಳಸ ಪಿಎಸ್‌ಐ ಚಂದ್ರಶೇಖರ್ ಇತರರಿದ್ದರು.