ಕೋಲಾರ: ಮಾದಕ ವಸ್ತುಗಳ ಸೇವನೆಗೆ ಒಮ್ಮೆ ಒಳಗಾದರೆ, ಅದರಿಂದ ಹೊರಬರುವುದು ಕಷ್ಟ. ಅದು ಚಟವಾಗಿ ಕಡೆಗೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸುನಿಲ್ ಎಸ್. ಹೊಸಮನಿ ತಿಳಿಸಿದರು.
ತಾಲೂಕಿನ ವಕ್ಕಲೇರಿಯ ಜವಾಹರ್ ನವೋದಯ ವಿದ್ಯಾಲಯದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ತಂಬಾಕು ನಿಯಂತ್ರಣ ಘಟಕ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇತ್ತೀಚೆಗೆ ಆಯೋಜಿಸಿದ್ದ ಮಾದಕ ವಸ್ತುಗಳು ಮತ್ತು ತಂಬಾಕು ಉತ್ಪನ್ನಗಳ ದುಷ್ಪರಿಣಾಮ ಹಾಗೂ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ,
ಮದ್ಯಪಾನ, ಧೂಮಪಾನದಂತಹ ದುಶ್ಚಟಗಳಿಗೆ ಹದಿಹರೆಯದ ವಯಸ್ಸಿನವರು ಒಳಗಾಗುತ್ತಾರೆ. ಒಮ್ಮೆ ಮಾದಕ ವಸ್ತುಗಳ ಸೇವನೆಗೆ ಒಳಗಾದರೆ ಅದರಿಂದ ಹೊರಬರುವುದು ತುಂಬಾ ಕಷ್ಟ ಎಂದರು.
ಕಾನೂನು ವಿಷಯಗಳನ್ನು ಪ್ರತಿಯೊಬ್ಬರು ತಿಳಿದುಕೊಳ್ಳುವುದು ಅಗತ್ಯ. ಆದರಲ್ಲಿ ಮಕ್ಕಳಿಗೆ ಇರುವಂತಹ ಹಕ್ಕುಗಳು ಮತ್ತು ಅವರಿಗೆ ಇರುವ ಕಾನೂನುಗಳ ಬಗ್ಗೆ ಅರಿವು ಮೂಡಿಸಬೇಕಿದೆ. ಇತ್ತೀಚೆಗೆ ಮಾದಕ ವಸ್ತುಗಳ ಸಾಗಾಣಿಕೆ ಹಾಗೂ ಮಾರಾಟ ಹೆಚ್ಚಾಗುತ್ತಿದ್ದು, ಮಕ್ಕಳು ಸಹ ಅವುಗಳಿಗೆ ವ್ಯಸನಿಗಳಾಗುತ್ತಿದ್ದಾರೆ. ಮಾದಕ ವಸ್ತುಗಳ ಮಾರಾಟ ಹಾಗೂ ಉಪಯೋಗ ಮಾಡುವುದು ಕಂಡು ಬಂದರೆ ಪೊಲೀಸ್ ಸಹಾಯವಾಣಿ ೧೧೨ ಹಾಗೂ ಟೆಲಿ ಮಾನಸ ೧೪೪೧೬ ಗೆ ಮಾಹಿತಿ ನೀಡಬೇಕು ಎಂದು ತಿಳಿಸಿದರು.
ತಂಬಾಕು ಉತ್ಪನ್ನಗಳು ಹಾಗೂ ಮಾದಕ ವಸ್ತುಗಳ ಉಪಯೋಗ ಮಾಡುವುದು ಕಾನೂನು ಅಡಿಯಲ್ಲಿ ಅಪರಾಧವಗುತ್ತದೆ. ಅಷ್ಟೇ ಅಲ್ಲದೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ತಿಳಿಸಿದರು.
ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಚಾರಿಣಿ, ಜವಾಹರ್ ನವೋದಯ ವಿದ್ಯಾಲಯದ ಪ್ರಭಾರಿ ಪ್ರಾಂಶುಪಾಲ ಸೀತಾರಾಮ್ ಬಾಬು, ಜಿಲ್ಲಾ ಸಂಯೋಜಕ ಮೊಹಮ್ಮದ್, ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು.